ಆತನ ಹೆಸರು ಕೆ.ಬಿ. ಮಹೇಶ್ ನಾಯ್ಕ್ (Mahesh Naik). ವಯಸ್ಸು 35. ಈತ ಇದುವರೆಗೆ 15 ಯುವತಿಯರನ್ನು ಮದುವೆಯಾಗಿ ಮೋಸ (Cheeting) ಮಾಡಿದ್ದಾನೆ. ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತ ಮದುವೆಯಾಗಿ ವಂಚಿಸಿರುವವರ ಸಂಖ್ಯೆ ಇನ್ನೂ ಹೆಚ್ಚಿದ್ದರೂ ಇರಬಹುದು ಎಂದು ಶಂಕಿಸಿದ್ದಾರೆ ಪೊಲೀಸರು.
ಇಷ್ಟಕ್ಕೂ ಹೇಗೆ ಬಲೆ ಬೀಸುತ್ತಿದ್ದ..?
ಆರೋಪಿ ತನ್ನನ್ನು ತಾನು ಡಾಕ್ಟರ್, ಎಂಜಿನಿಯರ್, ಲಾಯರ್ ಎಂದು ನಂಬಿಸುತ್ತಿದ್ದ. ಮರುಳು ಮಾಡುವಂತ ಇಂಗ್ಲಿಷ್ (English Speaking skill) ಗೊತ್ತಿತ್ತು. ಅದ್ಭುತ ಡ್ರೆಸ್ ಸೆನ್ಸ್ ಇತ್ತು. ಈಗ 2014ರಿಂದ ಹೀಗೆ ವಂಚನೆ ಮಾಡಿ ಮದುವೆಯಾಗಿರುವವರ ಸಂಖ್ಯೆ ಪೊಲೀಸರಿಗೆ ಸಿಕ್ಕಿರುವ ಲೆಕ್ಕದ ಪ್ರಕಾರ 15. ವಯಸ್ಸು ಜಸ್ಟ್ 35. ಹಾಗೆ ಮದುವೆಯಾಗಿರುವ 15 ಮಹಿಳೆಯರಲ್ಲಿ ನಾಲ್ವರಿಗೆ ಈತನಿಂದ ಜನಿಸಿದ ಮಕ್ಕಳಿವೆ. ಈತನ ತಂದೆ ಮೈಸೂರಿನವರಾದರೂ, ಈತ ಹುಟ್ಟಿದ್ದು, ಬೆಳೆದಿದ್ದು, ಓದಿದೆಲ್ಲ ಬೆಂಗಳೂರಿನಲ್ಲೇ. ಈತ ಮದುವೆಯಾಗಿದ್ದು, ಮೋಸ ಮಾಡಿದ್ದೆಲ್ಲವೂ ಸುಶಿಕ್ಷಿತ ಮಹಿಳೆಯರನ್ನೇ. ಮದುವೆಯಾಗಿದ್ದು ಬಹುತೇಕ ವಿಧವೆಯರು ಮತ್ತು ವಯಸ್ಸಾದವರನ್ನೇ. ಯಾರೂ ಕೂಡಾ ಮಹೇಶ್`ನ ಸಂಪಾದನೆ ಮೇಲೆ ಡಿಪೆಂಡ್ ಆದವರಲ್ಲ. ಅವರೇ ಇವನಿಗೆ ಹಣ ಕೊಡುವಂತಹವರಾಗಿದ್ದರು. ಹೀಗಾಗಿ ಮಹೇಶ್`ನ ಮೋಸಗಳೂ ಗೊತ್ತಾಗಲಿಲ್ಲ.
ಅರೆಸ್ಟ್ ಆಗಿದ್ದು ಹೇಗೆ..?
ಆರೋಪಿ ಮಹೇಶ್, ಮೈಸೂರಿನ ಹೇಮಲತಾ ಎಂಬವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಶಾದಿ ಡಾ.ಕಾಂನಲ್ಲಿ (Shadi.com) ಪರಿಚಯಿಸಿಕೊಂಡು ನಂಬಿಸಿದ್ದ. ನಂತರ ಮದುವೆಯಾಗಿ ಅವರ ಹಣ ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ. ಶಾದಿ.ಕಾಂ ಮೂಲಕ ಹೇಮಲತಾರನ್ನು ಸಂಪರ್ಕಿಸಿದ ಮಹೇಶ್, ಮೈಸೂರಿನ ಆರ್.ಟಿ.ನಗರದಲ್ಲಿರುವ ಮನೆ ತೋರಿಸಿ ನಂಬಿಸಿದ್ದಾನೆ. ಈತನ ಮಾತು ನಂಬಿದ ಹೇಮಲತಾ ಜ.28ರಂದು ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದಾರೆ. ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದರು. ಈ ವೇಳೆ ವಿಜಯನಗರ 4ನೇ ಹಂತದಲ್ಲಿ ತಾನು ಕ್ಲಿನಿಕ್ ಓಪನ್ ಮಾಡಬೇಕೆಂದು ಕಾರಣ ನೀಡಿ 70 ಲಕ್ಷ ಸಾಲ ತೆಗೆದುಕೊಡುವಂತೆ ಒತ್ತಡ ಹೇರಿದ್ದು, ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಹೇಮಲತಾ ಅವರು ಮನೆಯಲ್ಲಿ ಇಲ್ಲದಿದ್ದಾಗ .15 ಲಕ್ಷ ಹಾಗೂ 20 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ.
ಇಷ್ಟಾದರೂ ಮಹೇಶ್`ನ ವಂಚನೆ ಗೊತ್ತಾಗಿದ್ದು ದಿವ್ಯಾ ಎಂಬ ಯುವತಿ ಮೂಲಕ. ಆರೋಪಿ ಮಹೇಶ್, ತನ್ನನ್ನೂ ಮದುವೆಯಾಗಿದ್ದಾನೆ ಎಂದು ಹೇಳಿಕೊಂಡು ಬಂದಾಗ. ಹೇಮಲತಾ ಅವರಿಗೆ ಇವನೊಬ್ಬ ವಂಚಕ ಎಂದು ಗೊತ್ತಾಗಿದ್ದೇ ಆಗ. ಏಕೆಂದರೆ ಹೇಮಲತಾ ಅವರಿಗೆ ತುಮಕೂರಿನಲ್ಲೊಂದು ಕ್ಲಿನಿಕ್ ತೋರಿಸಿದ್ದ. ಒಬ್ಬ ನರ್ಸ್ ನೇಮಕ ಮಾಡಿಕೊಂಡಿದ್ದ. ಆಕೆಯೂ ಈತನನ್ನು ಡಾಕ್ಟರ್ ಎಂದೇ ಹೇಳುತ್ತಿದ್ದರು. ಇಷ್ಟೆಲ್ಲ ಆಗಿಯೂ ಈತನ ಇಂಗ್ಲಿಷು, ಡ್ರೆಸ್ಸಿಗೆ ಮರುಳಾಗಿದ್ದ ಹೇಮಲತಾ, ಸತ್ಯ ಅರಿವಾದ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಆರೋಪಿ ಅರೆಸ್ಟ್ ಆಗಿದ್ದಾನೆ.



