ಅಂಗಾಂಗ ದಾನ ಜಾಗೃತಿಗೆ ಅಶ್ವಿನಿಯವರು ರಾಯಭಾರಿಯಾಗಲಿದ್ದಾರೆ ಎಂದು ಸರ್ಕಾರದವರು ಅಧಿಕೃತವಾಗಿ ಹೇಳಿದ್ದ ಬೆನ್ನಲ್ಲೆ, ಅಶ್ವಿನಿ ಪುನೀತ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ. ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ನಟ ಪುನೀತ್ ರಾಜ್ಕುಮಾರ್ ಪತ್ನಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಲಾಗಿದೆ ಎಂದು ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದರು. ಆದರೆ ಅಶ್ವಿನಿಯವರಿಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲವಂತೆ. ಹಾಗಂತ ಅದನ್ನು ದೊಡ್ಡ ವಿವಾದವಾಗಿಯೇನೂ ಮಾಡಿಲ್ಲ ಅಶ್ವಿನಿ ಪುನೀತ್ ರಾಜ್`ಕುಮಾರ್.
ನನಗೂ ಮಾಧ್ಯಮಗಳಲ್ಲಿ ನೋಡಿಯೇ ವಿಷಯ ತಿಳಿಯಿತು. ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಆದರೆ ಇದೊಂದು ಉತ್ತಮ ಕೆಲಸ ಎಂದಿದ್ದಾರೆ ಅಶ್ವಿನಿ. ಹಾಗಂತ ನನಗೆ ಗೊತ್ತಿಲ್ಲದೆ ಸುದ್ದಿ ಮಾಡಲಾಗಿದೆ ಎಂಬ ಆರೋಪಗಳಿರಲಿಲ್ಲ. ನಾನು ಊರಿನಲ್ಲಿ ಇರಲಿಲ್ಲ. ಇದು ನಿಜಕ್ಕೂ ಇದು ಒಳ್ಳೆಯ ಕೆಲಸ. ಇದರಿಂದ ಸಾಕಷ್ಟು ಜನರ ಜೀವ ಉಳಿಯುತ್ತದೆ. ಕಿಡ್ನಿ ಸೇರಿದಂತೆ ಹಲವು ಅಂಗಾಂಗಳ ಅವಶ್ಯಕತೆ ಇರುವವರು ಇರುತ್ತಾರೆ. ನಮ್ಮ ಕುಟುಂಬದಲ್ಲೂ ಅಪ್ಪಾಜಿ (ಡಾ ರಾಜ್ ) ಎಲ್ಲರ ಕಣ್ಣುಗಳನ್ನು ದಾನ ಮಾಡಲು ನೋಂದಾಯಿಸಿದ್ದರು. ಇದು ನಿಜಕ್ಕೂ ಸದುದ್ದೇಶದ ಕಾರ್ಯ ಎಂದು ಸ್ಮರಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯು ಆ.3ರಂದು ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಂದು ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳ ಸದಸ್ಯರನ್ನು ಸನ್ಮಾನಿಸಲಾಗುತ್ತಿದೆ. ಅಂಗಾಂಗ ದಾನಕ್ಕೆ ಮುಂದಾಗುವವರ ಸಂಖ್ಯೆ ಭಾರತದಲ್ಲಿ ಕಡಿಮೆ. 50 ಸಾವಿರ ಜನಕ್ಕೆ ಹೃದಯ ಕಸಿಯ ಅಗತ್ಯವಿದ್ದರೆ, ಲಭ್ಯವಾಗುತ್ತಿರುವುದು ಕೇವಲ ಶೇ.1ರಷ್ಟು ಜನಕ್ಕೆ ಮಾತ್ರ. 3 ಲಕ್ಷ ಜನ ಕಿಡ್ನಿ ಕಸಿಗೆ ಕಾಯುತ್ತಿದ್ದೆ, 10 ಸಾವಿರ ಜನಕ್ಕೆ ಮಾತ್ರ ಕಿಡ್ನಿ ಕಸಿ ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಮಾನವ ಅಂಗಾಂಗಗಳ ಕೊರತೆಯನ್ನು ನೀಗಿಸಲು, ನಿಮ್ಹಾನ್ಸ್ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಹಿಂಪಡೆಯುವ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಆ ವಿಷಯ ಸೈಡಿಗೆ ಇರಲಿ.. ಅಶ್ವಿನಿ ಅದನ್ನೊಂದು ವಿವಾದವನ್ನಾಗಿ ಮಾಡದೆ ಮುಂದುವರೆಯುತ್ತಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಪುನೀತ್ ಮಾದರಿಯಲ್ಲಿಯೇ ವಿವಾದಗಳಿಗೆ ತಾಕಿಕೊಳ್ಳದೆ, ಕಾಂಟ್ರವರ್ಸಿ ಮಾಡಿಕೊಳ್ಳದೆ ಹಾಗೆಂದೂ ಅನ್ನಿಸಿದ್ದನ್ನು ಮುಚ್ಚಿಟ್ಟುಕೊಳ್ಳದೆ.. ಸಾಗುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್`ಕುಮಾರ್.



