ಇದು ಯಶ್ ಕುರಿತ ಎರಡು ಸುದ್ದಿಗಳು. ಒಂದು ಖಚಿತ. ಇನ್ನೊಂದು ಖಚಿತತೆ ಇಲ್ಲ. ಒಂದು ಸುದ್ದಿಯನ್ನು ಯಶ್ ಅವರೇ ಖಚಿತ ಪಡಿಸಿದ್ಧಾರೆ. ರಾಕಿಂಗ್ ಹಬ್ಬಕ್ಕೆ ಅವರು ಇರಲ್ಲ. ಅಭಿಮಾನಿಗಳಿಗೆ ಸಿಕ್ಕಲ್ಲ. ಯಶ್ ಹುಟ್ಟುಹಬ್ಬ ಎಂದರೆ ಅದು ಅಭಿಮಾನಿಗಳಿಗೆ ಹಬ್ಬ. ರಾಕಿಂಗ್ ಹಬ್ಬ. ಆದರೆ ಈ ಬಾರಿಯ ರಾಕಿಂಗ್ ಹಬ್ಬಕ್ಕೆ ಯಶ್ ಇರೋದಿಲ್ಲ. ಅಭಿಮಾನಿಗಳಿಗೆ ಸಿಗೋದಿಲ್ಲ. ಜನವರಿ 8, ಯಶ್ ಹುಟ್ಟುಹಬ್ಬದ ದಿನ. ಆ ದಿನ ಜನ್ಮದಿನವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಶ್ ಹೇಳಿದ್ದು, ಯಾರೂ ಕೂಡ ಈ ವಿಚಾರವಾಗಿ ಬೇಸರಪಟ್ಟುಕೊಳ್ಳಬಾರದು ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.
ಜನವರಿ 8 ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಆಪೇಕ್ಷೆ ಪಡುವ ದಿನ.. ನನಗೂ ಅಷ್ಟೇ.. ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ. ಆದರೆ, ಸಿನಿಮಾ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದಿರಿಂದ ಈ ಜನವರಿ 8 ರಂದು ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ ನನ್ನ ಅನುಪಸ್ಥಿತಿಯನ್ನ ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ.. ನಿಮ್ಮ ಪ್ರೀತಿಯ ಯಶ್’ ಎಂದು ಅವರು ಬರೆದುಕೊಂಡಿದ್ದಾರೆ.
ನಾವು ಟಾಕ್ಸಿಕ್ ಸಿನಿಮಾವನ್ನು ಘೋಷಣೆ ಮಾಡಿ ಅಂದಾಜು ಒಂದು ತಿಂಗಳಾಗಿದೆ. ಅಂದಿನಿಂದ ನೀವು ನಮ್ಮ ಮೇಲೆ ತೋರಿರುವ ಪ್ರೀತಿ ಆದರಕ್ಕೆ ಯಾವುದೂ ಸಮವಲ್ಲ. ನಿಮ್ಮ ಅಭಿಮಾನ, ಉತ್ಸಾಹ ಹಾಗೂ ಸಿನಿಮಾಗಳ ವಿಶ್ಲೇಷಣೆ ನನಗೆ ಇನ್ನಷ್ಟು ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತದೆ. ನನಗೆ ಗೊತ್ತು ನಿಮ್ಮಲ್ಲಿ ಬಹಳಷ್ಟು ಜನ ಜನ್ಮದಿನದಂದು ನನ್ನನ್ನು ಖುದ್ದಾಗಿ ಭೇಟಿ ಮಾಡಬೇಕು ಎನ್ನುವ ಇಚ್ಛೆಯಲ್ಲಿ ಇರುತ್ತೀರಿ. ನಿಮಗೆ ಏನು ಅನಿಸುತ್ತದೆಯೋ ಅದನ್ನು ಹೇಳಬೇಕು ಎನ್ನುವ ಆಸೆಯಲ್ಲಿ ಇದ್ದಿರುತ್ತೀರಿ. ಆದರೆ, ಈ ಬಾರಿಯ ಜನ್ಮದಿನದಂದು ಅಂದರೆ ಜನವರಿ 8 ರಂದು ನಾನು ಪ್ರಯಾಣದಲ್ಲಿರುತ್ತೇನೆ. ಹಾಗಾಗಿ ನಿಮ್ಮನ್ನ ಭೇಟಿಯಾಗಲು ಸಾಧ್ಯವುಲ್ಲ. ನಾನು ಖುದ್ದಾಗಿ ಇಲ್ಲಿ ಇರದೇ ಇದ್ದರೂ ನಿಮ್ಮೆಲ್ಲರ ವಿಶ್ ನನಗೆ ತಲುಪುತ್ತದೆ ಹಾಗೂ ಅದು ಬಹಳ ವಿಶೇಷವೂ ಆಗಿರುತ್ತದೆ ಎಂದು ಯಶ್ ಹೇಳಿದ್ಧಾರೆ. ಒಟ್ಟಿನಲ್ಲಿ ಯಶ್ ಈ ವರ್ಷವೂ ಅಭಿಮಾನಿಗಳಿಗೆ ಸಿಗೋದಿಲ್ಲ. ಯಶ್ ಅವರನ್ನ ಮುಂದಿನ ವರ್ಷವಾದರೂ ನೋಡೋಕೆ ಸಾಧ್ಯವಾದರೆ.. ಅದೇ ಅದೃಷ್ಟ ಎನ್ನುತ್ತಿದ್ದಾರೆ ಫ್ಯಾನ್ಸ್.
ಇನ್ನೊಂದು ಸುದ್ದಿ ಯಶ್ ಎದುರು ಬೇಬೋ ಕರೀನಾ ಕಪೂರ್ ಹೀರೋಯಿನ್ ಅನ್ನೋದು. ಈ ಸುದ್ದಿಯನ್ನು ಮೊದಲು ಬ್ರೇಕ್ ಮಾಡಿದ್ದು ಫಿಲ್ಮ್ʻಫೇರ್. ಸಾಮಾನ್ಯವಾಗಿ ಫಿಲ್ಮ್ʻಫೇರ್ ಸುದ್ದಿಗಳು ಸುಳ್ಳಾಗೋದಿಲ್ಲ. ಆದರೆ ಈ ಸುದ್ದಿಗೆ ಇನ್ನೂ ಕನ್ಫರ್ಮೇಷನ್ ಸಿಕ್ಕಿಲ್ಲ. ಇದೂವರೆಗೆ ಯಶ್ ಎದುರು ಹೀರೋಯಿನ್ ಯಾರು ಎಂಬ ಪ್ರಶ್ನೆಗೆ ಇದಕ್ಕೂ ಮೊದಲು ಹಲವು ಉತ್ತರಗಳಿದ್ದವು. ಮಾಳವಿಕಾ ಮೋಹನ್, ಸಾಯಿ ಪಲ್ಲವಿ, ಸಂಯುಕ್ತಾ ಮೆನನ್ ಮೊದಲಾದವರ ಹೆಸರು ಕೇಳಿ ಬಂದಿತ್ತು. ಇದೀಗ ಇದ್ದಕ್ಕಿದ್ದಂತೆ ಕರೀನಾ ಕಪೂರ್ ಹೆಸರು ತೇಲಿ ಬರುತ್ತಿದೆ.
ಹಿರಿಯ ನಟಿ ಕರೀನಾ ಕಪೂರ್ ಯಶ್ ಜತೆ ಟಾಕ್ಸಿಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಗೆ ಜೀವ ಬಂದಿದೆ. ಇತ್ತೀಚೆಗೆ ಟಾಕ್ ಶೋ ಒಂದರಲ್ಲಿ ನಟಿ ಕರೀನಾ ಕಪೂರ್, ‘ನನಗೆ ಯಶ್ ಎಂದರೆ ಇಷ್ಟ. ಆತನ ಎನರ್ಜಿ, ಪ್ರತಿಭೆ ನನ್ನನ್ನು ತುಂಬಾ ಇಂಪ್ರೆಸ್ ಮಾಡಿದೆ. ಆತನೊಟ್ಟಿಗೆ ನಟಿಸಲು ನನಗೆ ಆಸಕ್ತಿಯಿದೆ’ ಎಂದಿದ್ದರು. ಅದೇ ಮಾತು ನಿಜವಾಗುವಂತೆ ಇದೀಗ ಕರೀನಾ ಕಪೂರ್ ಹೆಸರು ಕೇಳಿ ಬರುತ್ತಿದೆ. ಆದರೆ ಕರೀನಾ ಕಪೂರ್ ಅವರಿಗೆ 43 ವರ್ಷ. ಏನೇ ಇದ್ದರೂ ಕರೀನಾ ಅವರಿಗೆ ವಯಸ್ಸಾಗಿದೆ. ಕರೀನಾ ಬೇಕಾ ಅನ್ನೋವ್ರೂ ಇದ್ಧಾರೆ.
ಕರೀನಾ ಕಪೂರ್ 2023ರಲ್ಲಿ ಜಾನೇ ಜಾನ್ ಚಿತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ಹಿಂದಿಯ ದಿ ಕ್ರೂ ಎಂಬ ಕಾಮಿಡಿ ಸಿನಿಮಾ ಹಾಗೂ ಅಜಯ್ ದೇವಗನ್ ಎದುರು ಸಿಂಗಂ ಎಗೇಯ್ನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೂವರೆಗೆ ಕರೀನಾ ಕಪೂರ್ ಬಾಲಿವುಡ್ ಬಿಟ್ಟು ಬೇರೆ ಚಿತ್ರಗಳಲ್ಲಿ ನಟಿಸಿಲ್ಲ. ಟಾಕ್ಸಿಕ್ʻನಲ್ಲಿ ನಟಿಸಿದರೆ ಕರೀನಾ ಕಪೂರ್ ನಟಿಸುವ ಮೊದಲ ಸೌಥ್ ಸಿನಿಮಾ ಆಗಲಿದೆ ಟಾಕ್ಸಿಕ್.
ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಟಿ, ನಿರ್ದೇಶಕಿ ನೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡಲಿದ್ದು, ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿನ ಸಾಹಸ ದೃಶ್ಯಗಳನ್ನು ಹಾಲಿವುಡ್ ಜನಪ್ರಿಯ ಸಾಹಸ ನಿರ್ದೇಶಕ ಜೆಜೆ ಪೆರ್ರಿ ನಿರ್ದೇಶಿಸಲಿದ್ದಾರೆ.



