ಎಲೆಕ್ಷನ್ ನಡೆಯುವ ವೋಟಿಂಗ್ ಬೂತ್‌ಗೆ ಹೋಗೋದು.. ದಾಖಲೆ ತೋರಿಸಿ, ಹೆಸರು ಬರೆಸಿ, ಇಂಕು ಹಾಕಿಸಿಕೊಂಡು.. ಬೂತ್‌ಗೆ ಎಂಟ್ರಿ ಕೊಟ್ಟು, ತಮಗೆ ಇಷ್ಟವಾದ ವ್ಯಕ್ತಿ, ಚಿಹ್ನೆಯ ಮುಂದೆ ಬಟನ್ ಒತ್ತೋದು. ಇದು ದಶಕಗಳಿಂದ ನಡೆಯುತ್ತಿರುವ ಎಲೆಕ್ಷನ್ ಪ್ರಕ್ರಿಯೆ. ಈಗ ಮತ್ತೆ ಹಿಂದಿನ ಸಿಸ್ಟಂಗೆ ಹೋಗುತ್ತಿದ್ದು, ಮತ್ತೆ ಮತಪತ್ರ ಚಾಲನೆಗೆ ಬರಲಿದೆ. ಕೆಲವೇ ತಿಂಗಳಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತಪತ್ರಗಳು ಬರಲಿವೆ. ಬರೋಬ್ಬರಿ ಕಾಲು ಶತಮಾನದ ಬಳಿಕ ಜಿಬಿಎಗೆ ನಡೆಯಲಿರುವ ಚುನಾವಣೆಗಳಲ್ಲಿ ಇವಿಎಂ ಬದಲು ಮತಪತ್ರಗಳು ಬರಲಿವೆ.
2001ರಲಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ 100 ವಾರ್ಡ್‌ಗಳಿಗೆ ಕೊನೆಯ ಬಾರಿಗೆ ಮತಪತ್ರದ ಮೂಲಕ ಚುನಾವಣೆ ನಡೆಸಲಾಗಿತ್ತು. 2007ರಲ್ಲಿ ಬಿಬಿಎಂಪಿಗೆ ಅಸ್ತಿತ್ವಕ್ಕೆ ಬಂತು. 2010ರಲ್ಲಿ 198 ವಾರ್ಡ್‌ಗಳಿಗೆ ಮೊದಲ ಬಾರಿಗೆ ಮತ ಯಂತ್ರದ ಮೂಲಕ (ಇವಿಎಂ) ಮೂಲಕ ಚುನಾವಣೆ ನಡೆಸಲಾಗಿತ್ತು. 2015ರಲ್ಲಿಯೂ ಇವಿಎಂ ಮೂಲಕ ಚುನಾವಣೆ ನಡೆಸಲಾಗಿತ್ತು. ಇದೀಗ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಯ 369 ವಾರ್ಡ್‌ಗಳಿಗೆ ಮತಪತ್ರದ ಮೂಲಕ ಚುನಾವಣೆ ನಡೆಸಲಾಗುತ್ತಿದೆ. ಬರೋಬ್ಬರಿ 25 ವರ್ಷಗಳ ನಂತರ ಬೆಂಗಳೂರಿಗೆ ಮತಪತ್ರಗಳು ವಾಪಸ್ ಆಗಲಿವೆ.
ಮತಪತ್ರಗಳು ವಾಪಸ್ ಆಗಿದ್ದು ಏಕೆ..?
ಇವಿಎಂ ಮೂಲಕ ನಡೆಯುತ್ತಿರುವ ಚುನಾವಣೆಗಳಲ್ಲಿ ಬಿಜೆಪಿ ವೋಟ್ ಚೋರಿ ಮಾಡುತ್ತಿದೆ. ಮತಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎನ್ನವುದು ಕಾಂಗ್ರೆಸ್ ಆರೋಪ. ವಿಶೇಷ ಎಂದರೆ ಗೆದ್ದಾಗ ಕೇಳಿ ಬರದ ಈ ಆರೋಪ, ಸೋತಾಗ ಮಾತ್ರ ಕೇಳಿ ಬರುತ್ತದೆ. ಮಾಡಿರುವ ಆರೋಪಗಳಿಗೆ ತಕ್ಕಂತೆ, ಸಮರ್ಥನೆಗೆ ನಿಂತಿರುವ ಕಾಂಗ್ರೆಸ್, ಈಗ ಮತಪತ್ರಗಳ ಮೂಲಕ ಚುನಾವಣೆ ನಡೆಸಲು ಮುಂದಾಗಿದೆ. ಹಾಗೆಂದು ವಿಧಾನಸಭೆ, ಲೋಕಸಭೆಯಲ್ಲಿ ಇವಿಎಂ ಇರುವುದಿಲ್ಲ ಎಂದರ್ಥ ಅಲ್ಲ. ಅದಕ್ಕೆ ಅವಕಾಶವೂ ಇಲ್ಲ. ರಾಜ್ಯ ಸರ್ಕಾರದಲ್ಲಿ ಬರುವುದು ಸ್ಥಳೀಯ ಸಂಸ್ಥೆಗಳು ಮಾತ್ರ. ಅಲ್ಲಿ ಮತಪತ್ರಗಳ ಮೂಲಕ ಚುನಾವಣೆ ನಡೆಯಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಾಯ್ದೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಕ್ಕೆ ಅವಕಾಶ ನೀಡಲಾಗಿದ್ದು, ಈ ಅವಕಾಶ ಬಳಸಿಕೊಂಡು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಕೇಂದ್ರ ಚುನಾವಣಾ ಆಯೋಗವು ತನ್ನ ಅಧಿಕಾರ ಬಳಸಿ ಇವಿಎಂ ಮೂಲಕ ಚುನಾವಣೆ ನಡೆಸುತ್ತಿದೆ. ಅದೇ ರೀತಿ ರಾಜ್ಯ ಚುನಾವಣಾ ಆಯೋಗವು ತನ್ನ ಅಧಿಕಾರ ಬಳಸಿ ಮತಪತ್ರದ ಮೂಲಕ ಚುನಾವಣೆ ನಡೆಸಲಿದೆ. ಬೆಂಗಳೂರಿನ ಐದು ನಗರ ಪಾಲಿಕೆಯ ಚುನಾವಣೆಯು ರಾಜ್ಯದ ಅತ್ಯಂತ ದೊಡ್ಡ ಸ್ಥಳೀಯ ಸಂಸ್ಥೆಯ ಚುನಾವಣೆಯಾಗಿದ್ದು, ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ವಿಶ್ವಾಸ ವ್ಯಕ್ತಪಡಿಸಿದರು.
ಜೂನ್ ತಿಂಗಳ ಹೊತ್ತಿಗೆ ಚುನಾವಣೆ ನಡೆಯಲಿದ್ದು, ಮತಪತ್ರಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಏನಾದರೂ ಗೆದ್ದು ಬಿಟ್ಟರೆ ಕಾಂಗ್ರೆಸ್ ಆರೋಪಗಳಿಗೆ ಮನ್ನಣೆ ಸಿಗಲಿದೆ. ಅಕಸ್ಮಾತ್.. ಅಲ್ಲಿಯೂ ಸೋತರೆ ಕಾಂಗ್ರೆಸ್ ತಾನು ಮಾಡುತ್ತಿರುವ ಆರೋಪಗಳಲ್ಲಿ ತಾನೇ ಸಿಕ್ಕು ಒದ್ದಾಡಲೀದೆ.
ಐದು ನಗರ ಪಾಲಿಕೆಯ ವಾರ್ಡ್ ವಾರು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿರುವ ರಾಜ್ಯ ಚುನಾವಣಾ ಆಯೋಗವು 369 ವಾರ್ಡ್‌ನಲ್ಲಿ 88.91 ಲಕ್ಷ ಮತದಾರಿದ್ದಾರೆ. ಈ ಕುರಿತು ಆಕ್ಷೇಪಣೆಗಳಿದ್ದರೆ, ಫೆ.2ರ ಒಳಗೆ ಸಲ್ಲಿಕೆ ಮಾಡಬಹುದಾಗಿದೆ. ಮಾ.16ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟವಾಗಲಿದೆ.ಜ.20 ರಿಂದ ಫೆ.3ರ ವರೆಗೆ ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ 18 ವರ್ಷ ತುಂಬಿದವರು ಮತದಾರ ಪಟ್ಟಿ ಸೇಪರ್ಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಸ್ಥಳ ಬದಲಾವಣೆ, ಹೆಸರು, ವಿಳಾಸ ಸೇರಿದಂತೆ ಮೊದಲಾದ ಲೋಪ ದೋಷ ಸರಿಪಡಿಸಿಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಮಾ.16ಕ್ಕೆ ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುವುದು. ಆದಾದ ಬಳಿಕವೂ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ದಿನಾಂಕದವರೆಗೂ ಮತದಾರ ಪಟ್ಟಿಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ.
2025ರ ಅ.1ರ ಆಧಾರವಾಗಿ ತೆಗೆದುಕೊಂಡು ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 88,91,411 ಮತದಾರರಿದ್ದಾರೆ. ಈ ಪೈಕಿ 45,69,193 ಪುರುಷರು, 43,20,583 ಮಹಿಳೆಯರು ಹಾಗೂ 1,635 ಇತರೆ ಮತದಾರರು ಇದ್ದಾರೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ರಾಜರಾಜೇಶ್ವರಿ ನಗರ ವಾರ್ಡ್ ಅತಿ ಹೆಚ್ಚು 49,530 ಮತದಾರರಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಕೊತ್ತೂರು ವಾರ್ಡ್ ನಲ್ಲಿ ಅತಿ ಕಡಿಮೆ 10,926 ಮತದಾರರಿದ್ದಾರೆ. ಒಟ್ಟಾರೆ 369 ವಾರ್ಡ್‌ಗಳಿಗೆ 8,044 ಮತಗಟ್ಟೆ ಇರಲಿವೆ ಎಂದು ಮಾಹಿತಿ ನೀಡಿದರು. ವಾರ್ಡ್‌ವಾರು ಕರಡು ಮತದಾರರ ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣ https://gba.karnataka.gov.in/home ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸೇರಿರುವುದನ್ನು ಪರಿಶೀಲಿಸಿಕೊಳ್ಳಬಹುದು.



