ಸ್ಟಾರ್ ಸಿನಿಮಾಗೆ ಆಕ್ಷನ್ ಕಟ್ ಹೇಳಲ್ಲ. ಅವರನ್ನೆಲ್ಲ ಮ್ಯಾನೇಜ್ ಮಾಡೋಕೆ ಆಗಲ್ಲ. ಆದರೆ.. ಶಿವಣ್ಣ ಹೂಂ ಅಂದ್ರೆ.. ಠಕ್ ಅಂತಾ ರೆಡಿ ಆಗ್ತೀನಿ. ಯಾಕಂದ್ರೆ ಶಿವಣ್ಣ ಸ್ಟಾರ್ ಅಲ್ಲ. ಅವರು ಸ್ಟಾರ್ ಪಟ್ಟಕ್ಕಿಂತ ಮೇಲೆ.. ಇದನ್ನ ಹೇಳಿರೋದು ರಾಜ್ ಬಿ ಶೆಟ್ಟಿ.
ಸು ಫ್ರಂ ಸೋ.. ಈಗ ಮೆಗಾ ಹಿಟ್ ಆಗುತ್ತಲೇ ಇದೆ. ಸು ಫ್ರಂ ಸೋ.. ನೋಡಿಲ್ಲದಿದ್ದವರನ್ನು ಅನ್ಯಗ್ರಹ ಜೀವಿಗಳೇನೋ ಎನ್ನುವಂತೆ ನೋಡುವ ಪರಿಪಾಠವೂ ಶುರುವಾಗಿದೆಯಂತೆ. ಹೀಗಿರುವಾಗಲೇ ರಾಜ್ ಬಿ ಶೆಟ್ಟಿ ಅವರ ಸಂದರ್ಶನಗಳಿಗೆ ಡಿಮ್ಯಾಂಡ್ ಶುರುವಾಗಿದೆ. ಜೆ.ಪಿ. ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್.. ಮುಂತಾದವರ ಹಿನ್ನೆಲೆಯನ್ನೂ ಹುಡುಕುತ್ತಿದ್ದಾರೆ. ಸಂದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಇಂತಾದ್ದೊಂದು ಇಂಟರ್ ವ್ಯೂನಲ್ಲಿ ಮಾತನಾಡಿರುವ ರಾಜ್ ಬಿ ಶೆಟ್ಟಿ ಅವರಿಗೆ ದುಲ್ಕರ್ ಸಿನಿಮಾ ಡೈರೆಕ್ಟ್ ಮಾಡ್ತಿದ್ದೀರಂತೆ ಅನ್ನೋ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರ ನೀಡಿರುವ ರಾಜ್ ಬಿ ಶೆಟ್ಟಿ ʻನಾನು ಸ್ಟಾರ್ಗಳಿಗೆ ಡೈರೆಕ್ಷನ್ ಮಾಡಲ್ಲ. ಅದು ತುಂಬಾ ರಿಸ್ಕು. ಸಿನಿಮಾ ನನಗೆ ತುಂಬಾ ತುಂಬಾ ವೈಯಕ್ತಿಕ ವಿಷಯ. ಪರ್ಸನಲ್ ಮ್ಯಾಟರ್. ನಾನು ಬೇರೆಯವರಿಗೆ ಕಾಯಬೇಕು, ಕೆಲವರು ಇದನ್ನು ಒಪ್ಪಬೇಕು, ಆ ಬಳಿಕ ಓಕೆ ಹೇಳಬೇಕು ಎಂದರೆ, ನನಗೆ ಅದು ಸಾಧ್ಯವಿಲ್ಲ. ನನಗೆ ಹಾಗೆ ಕೆಲಸ ಮಾಡೋಕೆ ಆಗಲ್ಲ. ನನಗೆ ಹೊಸಬರ ಸಿನಿಮಾ ಮಾಡುವುದು ಇಷ್ಟ. ಸ್ಟಾರ್ ಸಿನಿಮಾ ಮಾಡುವ ಆಸೆ ಇಲ್ಲʼ ಎಂದಿದ್ದಾರೆ.
ಆದರೆ.. ಶಿವಣ್ಣಂಗೆ ಮಾಡುವ ಆಸೆ ಇದೆ. ಶಿವಣ್ಣ ಸ್ಟಾರ್ ಗಿರಿಯಿಂದ ಮೇಲೆ ಇರುವವರು. ಅವರಿಗೆ ಸಿನಿಮಾ ಮಾಡೋಕೆ ನಾನು ರೆಡಿ ಎಂದಿದ್ದಾರೆ. ಇಷ್ಟಕ್ಕೂ ರಾಜ್ ಬಿ ಶೆಟ್ಟಿ ಅವರಿಗೆ ಶಿವಣ್ಣ ಅವರಲ್ಲಿ ಇಷ್ಟವಾಗಿದ್ದೇನು ಅಂದ್ರೆ.. ʻʻಅವರು ತಮ್ಮ ಸ್ಟಾರ್ ಗಿರಿಯನ್ನ ಯಾವತ್ತಿಗೂ ತೋರಿಸಿಲ್ಲ. ಅವರ ಜೊತೆ ಕೆಲಸ ಮಾಡಿದ್ದೇನೆ. ಅವರೊಂದಿಗೆ ಇದ್ದಾಗ ಅವರೊಬ್ಬ ಅಣ್ಣನಂತೆ, ಗೆಳೆಯನಂತೆ ಫೀಲ್ ಆಗುತ್ತೆ. ಸ್ಟಾರ್ ಜೊತೆ ಇದ್ದ ಫೀಲ್ ಆಗುವುದಿಲ್ಲ. ಅವರೊಬ್ಬ ದೊಡ್ಡ ಸ್ಟಾರ್. ಡಾ.ರಾಜ್ ಅವರ ಮಗ. ಆದರೆ.. ಅವರ ಸಿಂಪ್ಲಿಸಿಟಿ ಮಾತ್ರ ಬೇರೆಯದೇ ಲೆವೆಲ್ʼʼ ಎನ್ನುತ್ತಾರೆ.
ರಾಜ್ ಬಿ ಶೆಟ್ಟಿ ಅವರ 45 ಸಿನಿಮಾದಲ್ಲಿ ಶಿವಣ್ಣ ಮತ್ತು ಉಪೇಂದ್ರ ಕೂಡಾ ಇದ್ದಾರೆ. ರಾಜ್ ಬಿ ಶೆಟ್ಟಿ ಅವರಿಗೆ ಶಿವಣ್ಣನ ಜೊತೆ ಕೆಲಸ ಮಾಡುವಾಗ ಒಂದೊಂದ್ಸಲ ʻʻನಾವೇ ಎಷ್ಟೆಲ್ಲ ಬಿಲ್ಡಪ್ ಕೊಡ್ತೀವಿ. ಇನ್ಮೇಲ್ ಅದನ್ನೆಲ್ಲ ಬಿಟ್ಟು ಸ್ವಲ್ಪ ತಗ್ಗಬೇಕುʼʼ ಎನಿಸಿದ್ದೂ ಇದೆಯಂತೆ. ಸದ್ಯಕ್ಕೆ ರಾಜ್ ಬಿ ಶೆಟ್ಟಿಯವರ ‘ಸು ಫ್ರಮ್ ಸೋ’ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಟೋಟಲ್ ಕಲೆಕ್ಷನ್ 35 ಸಮೀಪದಲ್ಲಿದೆಯಂತೆ. ಅಧಿಕೃತ ಲೆಕ್ಕ ಸಿಕ್ಕಿಲ್ಲ. ಅಫ್‌ಕೋರ್ಸ್.. ಕನ್ನಡದ ಯಾವುದೇ ಚಿತ್ರದ ಅಧಿಕೃತ ಬಾಕ್ಸಾಫೀಸ್ ಲೆಕ್ಕ ಸಿಗುವುದೇ ಇಲ್ಲ.
ʻಸು ಫ್ರಂ ಸೋ ಹಿಂದಿಗೆ ರೀಮೇಕ್ ಆಗುತ್ತಿದೆ. ಹಿಂದಿಯಲ್ಲಿ ಈ ಸಿನಿಮಾ ಹೇಗೆ ಬರಬಹುದು ಎಂಬ ಕುತೂಹಲ ನನಗೂ ಇದೆ. ನಮಗೆ ಚಿತ್ರದ ಕಥೆಯಲ್ಲಿನ ಪಾತ್ರ, ಪರಿಸರ ಎಲ್ಲ ಗೊತ್ತು. ನಮಗೆ ಇದು ಹೊಸದು ಎನಿಸುವುದಿಲ್ಲ. ಆದರೆ, ಈ ಕಥೆಯನ್ನು ಹಿಂದಿಯವರು ಮಾಡಿದಾಗ ಹೇಗೆ ಚಿತ್ರಿಸಬಹುದು ಎಂಬ ಕುತೂಹಲವಂತೂ ಇದೆʼ ಎಂದಿದ್ದಾರೆ.



