ಇದಕ್ಕೆ ಉತ್ತರ ಕೊಡಬೇಕಿರುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಸಿಎಂ ಹಾಗೂ ಹಣಕಾಸು ಮಂತ್ರಿಯೂ ಆಗಿರುವ ಸಿದ್ಧರಾಮಯ್ಯ. ಗೃಹಲಕ್ಷ್ಮಿ ಯೋಜನೆಯ ಹಣ ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ತಲುಪಿಲ್ಲ. ಜುಲೈ, ಆಗಸ್ಟ್, ಸೆಪ್ಟೆಂಬರ್ ಕಂತುಗಳು ಬಾಕಿ ಇವೆ. ಬಾಕಿ ಕೊಡಬೇಕಿರುವ ಸರ್ಕಾರ, ಬಾಕಿ ಕೊಡುತ್ತಿಲ್ಲ. ಕಾರಣ ಏನೆಂದು ಹುಡುಕಿದಾಗ ಬಿಪಿಎಲ್ ಕಾರ್ಡ್ ವಿಚಾರ ಗೊತ್ತಾಗಿದೆ.
ಫಲಾನುಭವಿಗಳ ಖಾತೆಗೆ ಜೂನ್‌ನಲ್ಲಿ 2,000 ರೂ. ಜಮೆಯಾಗಿದ್ದೇ ಕೊನೆ. ನಂತರ ಜುಲೈ, ಆಗಸ್ಟ್, ಸೆಪ್ಟೆಂಬರ್ ಕಂತು ಬಾಕಿಯಿದೆ. 2023ರ ಆಗಸ್ಟ್‌ನಲ್ಲಿ ಯೋಜನೆ ಶುರುವಾದ ನಂತರ.. ಒಂದೆರಡು ತಿಂಗಳು ಬಿಟ್ಟರೆ ನಿರಂತರವಾಗಿಯೇನೂ ಹಣ ಹಾಕಿಲ್ಲ. ಎಲೆಕ್ಷನ್ ವೇಳೆ ಸಡನ್ ಆಗಿ ಮೂರ್ಮೂರು ತಿಂಗಳ ಹಣ ಹಾಕಲಾಗಿತ್ತು. ಅದಾದ ಮೇಲೆ ಬಂದರೆ ಬಂದಂಗೆ.. ಇಲ್ಲ ಅಂದ್ರೆ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಹೀಗಿರುವಾಗಲೇ.. ಸದ್ಯಕ್ಕೆ ಗೃಹಲಕ್ಷ್ಮಿ ಹಣ ಬರುವುದಿಲ್ಲವಂತೆ.
ರಾಜ್ಯ ಸರಕಾರದ ಸೂಚನೆಯಂತೆ ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಹಲವು ಬಿಪಿಎಲ್‌ಗಳು ಎಪಿಎಲ್ ಆಗಿ ಬದಲಾಗಲಿವೆ. ಮೂಲಗಳ ಪ್ರಕಾರ APL ಕಾರ್ಡುಗಳಿಗೆ ನೀಡಲಾಗಿರುವ ಗೃಹಲಕ್ಷ್ಮಿ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ಬಿಪಿಎಲ್ ಕಾರ್ಡ್, ಎಪಿಎಲ್ ಆಗಿ ಬದಲಾದರೆ ತಾಂತ್ರಿಕ ಸಮಸ್ಯೆಯೂ ಎದುರಾಗಲಿದೆ. ಹೀಗಾಗಿ.. ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮೀ ಹಣ ಬಿಡುಗಡೆ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಈ ಸಮಸ್ಯೆ ಸರಿಯಾಗುವವರೆಗೂ ಗೃಹಲಕ್ಷ್ಮೀ ಹಣ ಬಿಡುಗಡೆಯಾಗುವ ಸಂಭವ ಕಡಿಮೆ ಎನ್ನಲಾಗುತ್ತಿದೆ.
ವಾರದ ಹಿಂದೆ ಜಿಲ್ಲಾ ಖಜಾನೆಗಳಿಗೆ ಹಣ ಟ್ರಾನ್ಸ್‌ಫರ್ ಆಗಿದೆಯಂತೆ. ಆದರೆ, ವಾರ ಕಳೆದರೂ ಗೃಹಲಕ್ಷ್ಮೀ ಹಣ ಖಾತೆಗೆ ಬಂದಿಲ್ಲ ಎನ್ನುವ ಫಲಾನುಭವಿಗಳ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈವರೆಗೆ ಒಟ್ಟು 23 ಕಂತುಗಳ ಹಣ ಖಾತೆಗೆ ಜಮೆ ಆಗಿವೆ. ಪ್ರತಿ ತಿಂಗಳು 2 ಸಾವಿರದಂತೆ ಪ್ರತಿಯೊಬ್ಬ ಫಲಾನುಭವಿಗೂ 46 ಸಾವಿರ ರೂ. ಜಮೆ ಆಗಿದೆ.
ಇದೆಲ್ಲದರ ಮಧ್ಯೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ. ಈ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುವ ಯೋಜನೆಯೂ ಇದೆ. ಆದರೆ.. ಕೊಡಬೇಕಾದ ಹಣವನ್ನೇ ಕೊಟ್ಟಿಲ್ಲ. ಹೊಸ ಹೊಸ ಸ್ಕೀಂ ಹೇಳಿ ದಾರಿ ತಪ್ಪಿಸಬೇಡಿ ಎನ್ನುವುದು ಫಲಾನುಭವಿಗಳ ಕೂಗು.
ಗ್ಯಾರಂಟಿಗಳಿಂದಾಗಿ ಇತರೆ ಯೋಜನೆಗಳಿಗೆ ಹಣ ಇಲ್ಲ ಎನ್ನುವ ಆರೋಪ ಒಂದು ಕಡೆಯಾದರೆ.. ಬೇರೆ ಕೆಲಸಗಳೂ ನಡೆಯುತ್ತಿಲ್ಲ. ಇತ್ತ ಗೃಹಲಕ್ಷ್ಮಿ ಹಣವೂ ಇಲ್ಲ ಎನ್ನುವ ಕಥೆ ಬೇರೆಯದೇ ಪ್ರಶ್ನೆ ಹುಟ್ಟುಹಾಕಿದೆ. ಜನರಿಗೂ ಇಲ್ಲ. ಗ್ಯಾರಂಟಿಗೂ ಇಲ್ಲ. ಯೋಜನೆಗಳೂ ಇಲ್ಲ. ಹಾಗಾದರೆ.. ಹಣ ಎಲ್ಲಿ ಹೋಯ್ತು..?



