ಬ್ರೇಕಿಂಗ್ ನ್ಯೂಸ್ ಗೊತ್ತು. ನ್ಯೂಸ್ ಚಾನೆಲ್ ನೋಡೋವ್ರಿಗೆಲ್ಲ ಗೊತ್ತೇ ಇರುತ್ತೆ. ಶಾಕಿಂಗ್ ನ್ಯೂಸ್ ಕೂಡಾ ಗೊತ್ತು. ಯೂಟ್ಯೂಬ್ ಸ್ಟೋರಿಗಳಲ್ಲಿ ಇದನ್ನು ನೋಡಿದ್ರೆ ಶಾಕ್ ಆಗ್ತೀರಾ.. ತಿಳ್ಕೊಂಡ್ರೆ ಶಾಕ್ ಆಗ್ತೀರಾ ಅನ್ನೋ ಹೆಡ್ ಲೈನ್ ನೋಡ್ತಾನೇ ಇರ್ತೀರಿ. ಆದರೆ ಬ್ರೇಕಿಂಗ್ ಮತ್ತು ಶಾಕಿಂಗ್ ಎರಡೂ ಅಲ್ಲದ ಲೋಡಿಂಗ್ ನ್ಯೂಸ್ ಕೊಟ್ಟಿರೋದು ರಾಕಿಂಗ್ ಸ್ಟಾರ್ ಯಶ್.
ಇದು ಯಶ್ ಕೊಡ್ತಾ ಇರೋ ಯಶ್ 19 ಅಪ್ʻಡೇಟ್. ಒಂದೂವರೆ ವರ್ಷದಿಂದ ಯಶ್19 ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿರುವ ಅಭಿಮಾನಿಗಳಿಗೆ ಯಶ್ ಕೊಟ್ಟಿರುವ ಲೋಡಿಂಗ್ ನ್ಯೂಸ್ ಇದು.
ಯಶ್ ತಮ್ಮ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾಯಿಸಿಕೊಂಡಿದ್ದಾರೆ. ಲೋಡಿಂಗ್ ಎಂದು ಬರೆದಿರುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಯಾವುದೇ ಚಿತ್ರ, ವಿಡಿಯೋ ಅಥವಾ ಇನ್ಯಾವುದೇ ಕಮ್ಯಾಂಡ್ ತೆರೆದು ಕೊಳ್ಳುವ ಮುನ್ನ ಕಂಪ್ಯೂಟರ್ನಲ್ಲಿ ಅಥವಾ ಮೊಬೈಲ್ನಲ್ಲಿ ಲೋಡಿಂಗ್ ಎಂದು ಬರುತ್ತದೆ. ಈಗ ಲೋಡಿಂಗ್ ಎಂಬ ಪೋಸ್ಟರ್ ಹಂಚಿಕೊಂಡಿರುವ ಯಶ್, ತಮ್ಮ ಮುಂದಿನ ಸಿನಿಮಾ ಲೋಡಿಂಗ್ನಲ್ಲಿದೆ ಎಂಬ ಕ್ಲೂ ಕೊಟ್ಟಿದ್ಧಾರೆ.
ಯಶ್ ಹಂಚಿಕೊಂಡಿರುವ ‘ಲೋಡಿಂಗ್’ ಪೋಸ್ಟರ್ ಗಾಢ ಕೆಂಪು ಬಣ್ಣವನ್ನು ಹೊಂದಿದ್ದು, ‘ಕೆಜಿಎಫ್ 2’ ಸಿನಿಮಾದ ಕೆಲವು ಪೋಸ್ಟರ್ಗಳಲ್ಲಿಯೂ ಇದೇ ಮಾದರಿಯ ಕಲರ್ ಕಾಂಬಿನೇಷನ್ ಇತ್ತು. ಹೀಗಾಗಿ ಕೆಜಿಎಫ್ 3 ಇರಬಹುದು ಅನ್ನೋದು ಅಭಿಮಾನಿಗಳ ಲೆಕ್ಕಾಚಾರ. ಇನ್ನೊಂದು ಕಡೆ ಮಲಯಾಳಂ ನಿರ್ದೇಶಕಿಯೊಬ್ಬರಿಗೆ ಯಶ್ ಸಿನಿಮಾ ಮಾಡುತ್ತಿದ್ಧಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಆ ಚಿತ್ರಕ್ಕಾಗಿ ಶ್ರೀಲಂಕಾ ಟೂರ್ ಮಾಡಲಾಗಿದೆ ಅನ್ನೋ ಸುದ್ದಿಯೂ ಚಾಲ್ತಿಯಲ್ಲಿದೆ.
ಈಗಲೂ ಅಷ್ಟೆ, ಯಶ್ ಕೊಟ್ಟಿರುವುದು ಕ್ಲೂ ಮಾತ್ರ. ಅಧಿಕೃತ ಸಿನಿಮಾ ಘೋಷಣೆ ಅಲ್ಲ. ಅಂದಹಾಗೆ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಿದೆ.
ಕಳೆದ ವರ್ಷ ಏಪ್ರಿಲ್ 14ಕ್ಕೆ ‘ಏಉಈ’ ಚಾಪ್ಟರ್-2 ರಿಲೀಸ್ ಆಗಿತ್ತು. ಬಳಿಕ ಯಶ್ ಸಿನಿಮಾ ಯಾವ್ದು? ನಿರ್ದೇಶಕರು ಯಾರು? ನಿರ್ಮಾಪಕರು ಯಾರು? ಕತೆ ಏನು? ಎನ್ನುವ ಚರ್ಚೆ ಆರಂಭವಾಗಿತ್ತು. ಆದರೆ ಈ ಬಗ್ಗೆ ಯಶ್ ಕಡೆಯಿಂದ ಅಧಿಕೃತ ಮಾಹಿತಿ ಸಿಗಲೇಯಿಲ್ಲ. ಈ ವರ್ಷ ಹುಟ್ಟುಹಬ್ಬಕ್ಕೆ ಅಪ್‌ಡೇಟ್ ಸಿಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆ ಕಾದಿತ್ತು. ಅಭಿಮಾನಿಗಳಿಗೆ ಪತ್ರ ಬರೆದು ನನಗೆ ಇನ್ನು ಸ್ವಲ್ಪ ಸಮಯ ಕೊಡಿ ಎಂದಿದ್ದರು. ಆ ಬಳಿಕ ಕೂಡ ಅಭಿಮಾನಿಗಳು ಗಣೇಶ ಹಬ್ಬ, ದಸರಾ ಹಬ್ಬ, ದೀಪಾವಳಿ ಹಬ್ಬಕ್ಕೆ ಯಶ್19 ಅಪ್‌ಡೇಟ್ ಸಿಗುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಪ್ರತಿ ಬಾರಿ ನಿರಾಸೆ ಎದುರಾಗಿತ್ತು. ಇತ್ತೀಚೆಗೆ ಬಿಜಿಎಸ್ ಉತ್ಸವದಲ್ಲಿ ಕೂಡ ಯಶ್ ಈ ಬಗ್ಗೆ ಮಾತನಾಡಿದ್ದರು. ಅನ್ನ ಸಂಪೂರ್ಣವಾಗಿ ಬೆಂದ ಮೇಲೆ ಬಡಿಸಬೇಕು. ಇನ್ನು ಕೊಂಚ ಸಮಯ ಬೇಕು ಎಂದು ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದ್ದರು. ಆ ಸಮಯ ಕೊನೆಗೂ ಕೂಡಿ ಬಂದಂತೆ ಕಾಣ್ತಿದೆ.



