ಕರ್ನಾಟಕದಲ್ಲಿ ಮೇ 7ರಂದೇ ಎಲೆಕ್ಷನ್ ಮುಗಿದಿದೆ. ಏಪ್ರಿಲ್ 26ರಂದು ಒಂದನೇ ಹಾಗೂ ಮೇ 7ರಂದು 2ನೇ ಹಂತದ ಚುನಾವಣೆ ನಡೆದು ಹೋಗಿದೆ. ಈ ಬಾರಿ ರಿಸಲ್ಟಿಗೆ ಸುದೀರ್ಘ ಕಾಲ ಕಾಯುತ್ತಿದೆ ಕರ್ನಾಟಕ. ವಿಧಾನಸಭೆ ಎಲೆಕ್ಷನ್ನಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ʻನ್ನು ಗುಡಿಸಿ ಗುಂಡಾಂತರ ಮಾಡಿದ್ದ ಕಾಂಗ್ರೆಸ್, ಲೋಕಸಭೆಯಲ್ಲಿಯೂ ಅದನ್ನು ಕಂಟಿನ್ಯೂ ಮಾಡಿದೆ ಎನ್ನುತ್ತಿವೆ ಇಂಟೆಲಿಜೆನ್ಸ್ ರಿಪೋರ್ಟ್ ಮೂಲಗಳು.
ಕಾಂಗ್ರೆಸ್ ಆಂತರಿಕ ಸಮೀಕ್ಷೆ ಪ್ರಕಾರ ರಾಜ್ಯದ 13-14 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಪರವಾದ ಒಲವು, ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾಂಗ್ರೆಸ್‌ನಲ್ಲಿ ಉತ್ಸಾಹ ಹೆಚ್ಚಾಗಿದೆ. ಅದು 16ರಿಂದ 20ರ ಗಡಿ ಅಂಚಿನಲ್ಲಿದೆ ಎನ್ನುವುದು ಕಾಂಗ್ರೆಸ್ಸಿಗರ ವಾದ. ಸುಮಾರು 18-20 ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರ ಮೂಲಕ ಸಮೀಕ್ಷೆ ನಡೆಸಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲುತ್ತೇವೆ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರ ವರದಿ.
ಇದು ನಿಜವಾದರೆ.. ದಶಕಗಳ ಕಾಲ ಬಿಜೆಪಿ ಹಿಡಿತದಲ್ಲಿದ್ದ ಕರ್ನಾಟಕ ಲೋಕಸಭೆ ಚುನಾವಣೆಯ ಪಾರುಪಥ್ಯ ಕಾಂಗ್ರೆಸ್ಸಿಗೆ ಬರಲಿದೆ.
1996ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಅಧಿಪತ್ಯ ಬಿಟ್ಟು ಕೊಟ್ಟಿತ್ತು. ಆಗ ಜನತಾ ದಳ ರಾಜ್ಯದಲ್ಲಿ 16ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 5 ಸ್ಥಾನಗಳಿಗೆ ಕುಸಿದಿತ್ತು. ಆಗ ಬಿಜೆಪಿಯೂ 4 ಸ್ಥಾನ ಗೆದ್ದಿತ್ತು. 1998ರಲ್ಲಿ ಮೊದಲ ಸ್ಥಾನ ಬಿಜೆಪಿಗೆ ಹೋದರೆ.. ಮರು ಚುನಾವಣೆಯಲ್ಲಿ ಅಂದರೆ.. 1999ರಲ್ಲಿ ಕಾಂಗ್ರೆಸ್ 18 ಸ್ಥಾನ ಗೆದ್ದು ಬೀಗಿತ್ತು.
ಅದೇ ಕೊನೆ.. 2004ರಿಂದ 2019ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಎರಡಂಕಿಯನ್ನೂ ತಲುಪಿಲ್ಲ. 8, 6, 9 ಹಾಗೂ 1ಸ್ಥಾನ ಗೆದ್ದಿದೆ. ಅತ್ತ ಬಿಜೆಪಿ 18, 19, 17 ಹಾಗೂ 25 ಸ್ಥಾನ ಗೆದ್ದು ಬೀಗಿದೆ. ಸತತ 4 ಚುನಾವಣೆಗಳ ಬಳಿಕ ಕಾಂಗ್ರೆಸ್ ಮತ್ತೆ ನಂ.1 ಆಗಲಿದೆ ಎನ್ನುತ್ತಿವೆ ಮೂಲಗಳು.
ಕ್ಷೇತ್ರವಾರು ಲೆಕ್ಕ ನೋಡೋದಾದರೆ..
ದಾವಣಗೆರೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡಿದೆ. ಬಿಜೆಪಿಯ ಗಾಯತ್ರಿ ಸಿದ್ದೇಶ್ವರ ವಿರುದ್ಧ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಪ್ರಚಾರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಳ್ಳಾರಿಯಲ್ಲಿ ಬಿಜೆಪಿಯ ಬಿ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಇ ತುಕಾರಾಂ ಅವರಿಗೆ ಎಲ್ಲ ಬೂತ್‌ಗಳಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿದ್ದರೆ, ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಮೃಣಾಲ್ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಗೆಲುವು ಬಹುತೇಕ ಖಚಿತ.
ಗುಲ್ಬರ್ಗದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರು ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸ್ಪರ್ಧಿಸಿದ್ದಾರೆ. ಆದರೆ.. ಕೊನೆಯ ದಿನಗಳಲ್ಲಿ ನಡೆದ ದಲಿತ ಮತ್ತು ಲಿಂಗಾಯತರ ನಡುವಿನ ಸಂಘರ್ಷ ಹಾಗೂ ಅದನ್ನು ಪ್ರಿಯಾಂಕ್ ಖರ್ಗೆ ನಿಭಾಯಿಸಿದ ರೀತಿ ಎರಡೂ ಕಾಂಗ್ರೆಸ್ಸಿಗೆ ಮಾರಕ ಎನ್ನಲಾಗುತ್ತಿದೆ. ಇಲ್ಲಿ ಕೈ ಹಿಡಿದರೆ.. ಕೋಲಿ ಮತ್ತು ಕಬ್ಬಲಿಗ ಮತದಾರರು ನಿರ್ಣಾಯಕ ಎನ್ನಲಾಗುತ್ತಿದೆ.
ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯ ಪಿಸಿ ಮೋಹನ್ ಮತ್ತು ಡಾ ಸಿಎನ್ ಮಂಜುನಾಥ್ ವಿರುದ್ಧ ಕಾಂಗ್ರೆಸ್‌ನ ಮನ್ಸೂರ್ ಅಲಿಖಾನ್ ಮತ್ತು ಹಾಲಿ ಸಂಸದ ಡಿ.ಕೆ ಸುರೇಶ್ ಕಣದಲ್ಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎನ್ನುತ್ತಿದ್ಧಾರೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ನಗರ ಪ್ರದೇಶದ 4 ಕ್ಷೇತ್ರಗಳಲ್ಲಿ ಮಂಜುನಾಥ್ ಲಕ್ಷಕ್ಕೂ ಹೆಚ್ಚಿನ ಲೀಡ್ ಪಡೆದುಕೊಂಡರೆ, ಕಷ್ಟ ಎನ್ನುವ ಅಭಿಪ್ರಾಯಗಳೂ ಇವೆ.
ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷವು ಗೆಲುವಿನ ವಿಶ್ವಾಸದಲ್ಲಿದೆ. ಬಿಜೆಪಿ ಅಭ್ಯರ್ಥಿ ಮುಖಂಡ ವಿ ಸೋಮಣ್ಣ ವಿರುದ್ಧ ಪಕ್ಷದ ಮುದ್ದ ಹನುಮೇಗೌಡ ಕಣಕ್ಕಿಳಿದಿದ್ದಾರೆ. ಲಿಂಗಾಯತರು ಸೋಮಣ್ಣರನ್ನು ಅಗಾಧವಾಗಿ ಬೆಂಬಲಿಸಿದರೆ, ಎಸ್‌ಸಿ ಹಾಗೂ ಎಸ್‌ಟಿಗಳನ್ನು ಹೊರತುಪಡಿಸಿ, ಕುರುಬರು ಮತ್ತು ಅಲ್ಪಸಂಖ್ಯಾತರು ಒಕ್ಕಲಿಗರಾದ ಮುದ್ದಹನುಮೇಗೌಡರನ್ನು ಬೆಂಬಲಿಸಿದ್ದಾರೆ . ಆದರೆ.. ಗೆಲುವು ಕಷ್ಟ ಕಷ್ಟ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಮಾಜಿ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಯುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೇನು ಈ ಕ್ಷೇತ್ರದ ಬಗ್ಗೆ 100% ವಿಶ್ವಾಸ ಇಟ್ಟುಕೊಂಡಿಲ್ಲ.
ಚಾಮರಾಜನಗರ, ಚಿತ್ರದುರ್ಗ, ಬಾಗಲಕೋಟೆಗಳಲ್ಲಿ ಕಾಂಗ್ರೆಸ್ಸಿನ ವಿಶ್ವಾಸ ಹೆಚ್ಚಿದೆ. ಮೈಸೂರಿನಲ್ಲಿ ಯದುವೀರ್ ಒಡೆಯರ್ ವಿರುದ್ಧ ಸ್ಪರ್ಧಿಸಿರುವ ಲಕ್ಷ್ಮಣ್ ಅವರಿಗೆ ಗೆಲುವು ಸಿಕ್ಕರೂ ಸಿಗಬಹುದು ಎನ್ನಲಾಗಿದೆ. ಕಾರಣವೂ ಇದೆ. ಮುಸ್ಲಿಮರೇ ಅಧಿಕರಾಗಿರುವ ಸುಮಾರು 150 ಬೂತ್ʻಗಳಲ್ಲಿ 100% ವೋಟಿಂಗ್ ಆಗಿದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಅವರೇ ಮಾಡಿಕೊಂಡಿದ್ದ ವಿಡಿಯೋಗಳು ವೈರಲ್ ಆಗಿ ಮುಳುವಾಗಲಿವೆ ಎನ್ನುವುದು ಕಾಂಗ್ರೆಸ್ಸಿಗರ ವಿಶ್ವಾಸ.
ಮಂಡ್ಯದಲ್ಲಿ ಕಾಂಗ್ರೆಸ್ ಪ್ರಬಲ ಪೈಪೋಟಿ ಒಡ್ಡಿದೆ. ಪ್ರಜ್ವಲ್ ವಿಡಿಯೋಗಳು ವರ್ಕೌಟ್ ಆಗಿದ್ದು, ಫಲಿತಾಂಶ ಏನು ಬೇಕಾದರೂ ಆಗಬಹುದು. ಬೀದರ್ ವಿಷಯದಲ್ಲಂತೂ ಕಾಂಗ್ರೆಸ್ಸಿಗೆ ಗೆಲುವಿನ ಬಗ್ಗೆ ಅನುಮಾನವೇ ಇಲ್ಲ.
ಇನ್ನು ಸೋಲುತ್ತೇವೆ ಎಂದು ಕಾಂಗ್ರೆಸ್ಸಿಗರೇ ಅಂದುಕೊಂಡಿರುವ ಕ್ಷೇತ್ರಗಳೆಂದರೆ.. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ, ವಿಜಯಪುರ ಕ್ಷೇತ್ರಗಳಷ್ಟೇ.
ಕಾಂಗ್ರೆಸ್ಸಿಗರೇ ಕಂಡುಕೊಂಡಿರುವ ಲೆಕ್ಕದ ಪ್ರಕಾರ ಬಿಜೆಪಿ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ ಆದಂತೆಯೇ ಫೀಲ್ಡಿಗೇ ಇಳಿಯಲಿಲ್ಲ. ಜೊತೆಗೆ ಗ್ಯಾರಂಟಿಗಳೂ ಕೆಲಸ ಮಾಡಿವೆ ಎನ್ನುತ್ತಿದ್ಧಾರೆ.



