ಹಾವು ಕಚ್ಚಿದರೆ ಇಮ್ಮೀಡಿಯೆಟ್ ಇಂಜೆಕ್ಷನ್ ಸಿಗದೇ ಹೋದರೆ.. ಅಥವಾ ಕಾಲಮಿತಿಯಲ್ಲಿ ಇಂಜೆಕ್ಷನ್ ಸಿಗದೇ ಹೋದರೆ.. ಸಾಯುವ ಸಾಧ್ಯತೆ ಹೆಚ್ಚು. ಆದರೆ.. ಇಂಜೆಕ್ಷನ್ ದುಬಾರಿ. ಎಲ್ಲ ಕಡೆಯೂ ಲಭ್ಯ ಇರುವುದಿಲ್ಲ. ಅದಕ್ಕೆ ಈಗ ಹುಬ್ಬಳ್ಳಿಯ KMCRI ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯವರು ಹೊಸ ವಿಧಾನ ಕಂಡು ಹಿಡಿದಿದ್ದಾರೆ. ಈ ವಿಧಾನ ಬಳಸಿದರೆ, ಇರುವ ಕಡಿಮೆ ಇಂಜೆಕ್ಷನ್ನುಗಳನ್ನೇ ಅಗತ್ಯವಿರುವವರಿಗೆ ಹೆಚ್ಚು ಬಳಸಬಹುದು.
ಹೊಸ ಚಿಕಿತ್ಸೆ ಏನು..?
ಹಾವು ಕಡಿತಕ್ಕೊಳಗಾಗಿ ಕೆಎಂಸಿಆರ್ಐಗೆ ಬರುವವರಲ್ಲಿ ಕೆಲವರು ಕಚ್ಚಿದ ಹಾವಿನ ಜೊತೆಯಲ್ಲೇ ಬರುತ್ತಿದ್ದರು. ಯಾವ ಹಾವು ಎನ್ನೋದು ಗೊತ್ತಾಗಲಿ ಎಂಬ ಕಾರಣಕ್ಕಾಗಿ ಮಾಡುತ್ತಿದ್ದ ಇಂಥಹ ಘಟನೆಗಳಿಂದ ವೈದ್ಯರು ಗಾಬರಿಯಾಗುತ್ತಿದ್ದರು. ಇಂಜೆಕ್ಷನ್ ಲಭ್ಯವಿದ್ದರೆ, ತಕ್ಷಣ ನೇರವಾಗಿ ಆ್ಯಂಟಿ ಸ್ನೇಕ್ ವೆನಮ್ಸ್ (ಎಎಸ್‌ವಿ) ಇಂಜೆಕ್ಷನ್ ನೀಡುತ್ತಿದ್ದರು. ಆದರೆ.. ಇನ್ನು ಮುಂದೇ ಹಾಗಾಗಲ್ಲ.
ಹಾವು ಕಡಿತದ ತೀವ್ರತೆ, ವಿಷದ ಪ್ರಮಾಣವನ್ನು ತಿಳಿದ ನಂತರ ಚಿಕಿತ್ಸೆ ನೀಡಲಾಗುತ್ತದೆ.ಕೆಎಂಸಿಆರ್‌ಐನ ಬಹು ವಿಭಾಗೀಯ ಸಂಶೋಧನಾ ಘಟಕದಲ್ಲಿ (MRU) ತಜ್ಞರ ತಂಡವಿದ್ದು, ಹಾವು ಕಡಿತಕ್ಕೊಳಗಾದವರು ನೇರವಾಗಿ ಇದೇ ಆಸ್ಪತ್ರೆಗೆ ಬಂದ ತಕ್ಷಣ ಅವರಿಂದ ರಕ್ತವನ್ನು ಪಡೆಯುತ್ತಾರೆ. ನಂತರ ಅದನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಹಾವು ಕಡಿತದ ಜಾಗದಲ್ಲಿ ಬಾವು ಬರುವುದು, ಉಸಿರಾಟದ ಸಮಸ್ಯೆ, ರಕ್ತದೊತ್ತಡ, ಏರಿಳಿತ, ನರಮಂಡಲದಲ್ಲಿ ಉಂಟಾಗುವ ನ್ಯೂನತೆ, ರಕ್ತ ಹೆಪ್ಪುಗಟ್ಟುವುದನ್ನು ತಿಳಿದುಕೊಳ್ಳಲಾಗುತ್ತದೆ. ಹಾವಿನ ವಿಷದಲ್ಲಿರುವ ಕಿಣ್ವ ಅಂಶವನ್ನು ಪತ್ತೆ ಹಚ್ಚಿ, ಎಲಿಸಾ ಯಂತ್ರದಿಂದ ಪ್ರಮಾಣ ಅಳೆಯಲಾಗುತ್ತದೆ. ನಂತರ ವೈದ್ಯರಿಗೆ ಎಎಸ್‌ವಿ ಇಂಜೆಕ್ಷನ್ ಕೊಡುವಂತೆ ಸೂಚಿಸಲಾಗುತ್ತದೆ.
ವಿಷ ಕಡಿಮೆ ಇದ್ದರೆ..
ಕಡಿದ ಹಾವು ಎಂಥದ್ದು ಎಂಬುದನ್ನು ರಕ್ತದ ಮಾದರಿ ಆಧಾರದ ಮೇಲೆ ಕಂಡು ಹಿಡಿಯಲಾಗುತ್ತದೆ. ಅದರ ಆಧಾರದ ಮೇಲೆ ಇಂಜೆಕ್ಷನ್ ನೀಡಲಾಗುತ್ತಿದೆ. ಹಾವಿನ ವಿಷ ಹೆಚ್ಚು ಇದ್ದವರಿಗೆ ಎಎಸ್‌ವಿ ಇಂಜೆಕ್ಷನ್, ಹಾವಿನ ವಿಷ ಕಡಿಮೆ ಇದ್ದವರಿಗೆ ಇಂಜೆಕ್ಷನ್ ನೀಡದೆ ಔಷಧೋಪಚಾರದ ಮೂಲಕ ವಿಷ ಕಡಿಮೆ ಮಾಡುವುದನ್ನು ಕಂಡು ಹಿಡಿಯಲಾಗಿದೆ. ಅದರಲ್ಲಿ ಹಾವಿನ ವಿಷವಿರುವ ಎರಡು ರಕ್ತದ ಮಾದರಿ ಕಂಡು ಹಿಡಿಯಲಾಗಿದೆ. ಅದರಲ್ಲಿ ಕೋಬ್ರಾದಲ್ಲಿ ವಿಷದ ಪ್ರಮಾಣ ಅಧಿಕವಿರುವ ವೈಪರ್ಸ್, ಕೈಟ್, ಸಾ ಸ್ಟೇಲ್ಸ್ ವೈಪರ್ಸ್, ರಸೆಲ್ಸ್ ವೈಪರ್ಸ್ ಹೀಗೆ ಭಿನ್ನವಾದ ಹಾವುಗಳು ಕಡಿದಿದ್ದರೂ ವಿಷದ ಪ್ರಮಾಣ ಅರಿತು ಚಿಕಿತ್ಸೆ ನೀಡಲಾಗುತ್ತದೆ
ಹೇಗೆ ನಡೀತು ಸಂಶೋಧನೆ..?
2020ರ ಜನವರಿಯಿಂದ ಡಿಸೆಂಬರ್‌ವರೆಗೆ ಹಾವು ಕಡಿತಕ್ಕೊಳಗಾದ ಧಾರವಾಡ ಜಿಲ್ಲೆಯ 20 ಜನರಿಂದ ವಿಷ ಪಡೆಯಲಾಗಿತ್ತು. ಇವರಲ್ಲಿ 16 ಪುರುಷರು ಮತ್ತು ನಾಲ್ವರು ಮಹಿಳೆಯರು ಇದ್ದರು. ಇವರೆಲ್ಲರೂ 18 ರಿಂದ 65 ವರ್ಷದೊಳಗಿನವರು. 17 ಜನರು ಕೃಷಿ ಹಿನ್ನೆಲೆ ಹೊಂದಿದ್ದು, 12 ಜನರಿಗೆ ಮೊಣಕಾಲು ಕೆಳಗೆ ಹಾವು ಕಡಿದಿತ್ತು. ತಪಾಸಣೆ ಬಳಿಕ ಕೆಲವರಿಗೆ 3 ತಾಸಿನೊಳಗೆ ಎಎಸ್‌ವಿ ಇಂಜೆಕ್ಷನ್ ಕೊಡಲಾಗಿತ್ತು. ಇನ್ನೂ ಕೆಲವರಿಗೆ 3ರಿಂದ 8 ತಾಸಿನೊಳಗೆ ಎಎಸ್‌ವಿ ಇಂಜೆಕ್ಷನ್ ಕೊಟ್ಟು ವಿಷ ಇಳಿಸಲಾಗಿತ್ತು.
ಹಾವು ಕಡಿತಕ್ಕೊಳಗಾದವರು ಆಸ್ಪತ್ರೆಗೆ ಬಂದ ನಂತರ ಚಿಕಿತ್ಸೆಗೂ ಮುನ್ನ ವ್ಯಕ್ತಿಯ ರಕ್ತವನ್ನು ತೆಗೆದುಕೊಳ್ಳಲಾಗುವುದು. ನಂತರ 24 ತಾಸಿಗೆ ಮತ್ತೊಮ್ಮೆ, ಅದೇ ರೀತಿ 72 ತಾಸಿಗೊಮ್ಮೆ ರಕ್ತ ತೆಗೆದುಕೊಂಡು ನಾವು ಕಂಡುಹಿಡಿದ ಮಾದರಿ ಅಂಶಗಳ ಆಧಾರದ ಮೇಲೆ ಚಿಕಿತ್ಸೆ ಮುಂದುವರೆಸಲಾಗುತ್ತದೆ. ಇದಕ್ಕಾಗಿ 82 ಜನ ಹಾವು ಕಡಿತಕ್ಕೊಳಗಾದವರ ರಕ್ತ ಪರೀಕ್ಷೆ ಮಾಡಲಾಗಿದೆ. ರಕ್ತದಲ್ಲಿ ಕಂಡು ಬಂದ ಕಿಣ್ವಗಳ ಅಧಾರದ ಚಿಕಿತ್ಸೆ ನೀಡಲಾಗಿದೆ. ಇದರಿಂದ ಅವರ ದೇಹದಲ್ಲಿ ಆಗುವ ಬದಲಾವಣೆ ಆಧಾರದ ಮೇಲೆ ಚಿಕಿತ್ಸೆ ನೀಡಲು ನಮ್ಮ ಸಂಶೋಧನೆ ಸಹಕಾರಿಯಾಗಿದೆ.
ಹಾವು ಕಡಿತದ ಗಂಭೀರತೆ ಹಾಗೂ ಜೀವಕ್ಕೆ ಅಪಾಯಕಾರಿ ಇದೆಯಾ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ. ಕೆಲವರಿಗೆ ವಿಷದ ಪ್ರಮಾಣ ಗೊತ್ತಾಗದೆ ಇರಬಹುದು. ಆಗ ನಮಗೆ ಏನೂ ಆಗಿಲ್ಲ, ವಿಷ ಇಳಿದಿದೆ, ಡಿಸ್ಚಾರ್ಜ್ ಮಾಡಿ ಅಂತ ರೋಗಿ ಹೇಳಬಹುದು. ಆಗ ಈ ಸಂಶೋಧನೆಯಿಂದ ಆತನನ್ನು ಡಿಸ್ಚಾರ್ಜ್ ಮಾಡಬೇಕಾ, ಬೇಡವೇ ಎಂಬುದು ಗೊತ್ತಾಗಲಿದೆ.
ನಾವು ಮಾಡಿದ ಅಧ್ಯಯನವನ್ನು ಇಲ್ಲಿಯವರೆಗೂ ದೇಶದಲ್ಲಿ ಯಾರೂ ಮಾಡಿಲ್ಲ. ಈ ಸಂಶೋಧನೆಯಿಂದ ಎಎಸ್ವಿಯನ್ನು ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬುದು ತಿಳಿದಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್ಐ) ವೈದ್ಯರ ತಂಡ.



