ನೀವು ಹಳೆಯ ಜಗ್ಗೇಶ್ ಸಿನಿಮಾದಲ್ಲಿ ನೋಡಿರ್ತೀರಿ. ಮಾತನಾಡುವ ಗೊಂಬೆ ಎಂದು ತೋರಿಸಿ, ವ್ಯಾಪಾರಿಗೆ ಲಕ್ಷ ಲಕ್ಷ ಮೋಸ ಮಾಡೋ ಸ್ಕೀಮು, ನೋಟು ಪ್ರಿಂಟ್ ಮಾಡುವ ಮೆಷಿನ್ ಎಂದು ಕಬ್ಬಿನ ಹಾಲು ತಯಾರಿಸುವ ಮೆಷಿನ್ ಕೊಟ್ಟು ಮೋಸ ಮಾಡೋದು ನೋಡಿರ್ತೀರಿ. ಕೆಲವು ವರ್ಷಗಳ ಹಿಂದೆ ತೆಲುಗಿನಲ್ಲಿ ಬ್ಲಫ್ ಮಾಸ್ಟರ್ ಎಂಬ ಹೆಸರಿನ ಸಿನಿಮಾ ಬಂದಿತ್ತು. ಅದು ಜನರನ್ನು ಹೇಗೆಲ್ಲ ಯಾಮಾರಿಸಬಹುದು ಅನ್ನೋ ಥ್ರಿಲ್ಲರ್ ಮೂವಿ.
ಆ ಚಿತ್ರದಲ್ಲಿ ಚಂದ್ರಲೋಕದಲ್ಲಿ ಸೈಟು ಕೊಡಿಸುವ, ಎರಡು ತಲೆ ಹಾವಿನಿಂದ ಅದೃಷ್ಟ ಬರಿಸುವ, ರೈಸ್ ಪುಲ್ಲಿಂಗ್ ಯಂತ್ರ ಎಂದು ನಂಬಿಸಿ ಮೋಸ ಮಾಡುವಂತಹ ಚಾಲಾಕಿ ಕಳ್ಳನ ಕಥೆ. ಆ ಚಿತ್ರದಲ್ಲಿ ವಯಸ್ಸಾಗಿ, ಮೇಲಕ್ಕೆ ಏಳಲೂ ಆಗದಂತಹ ಅಜ್ಜನಿಗೆ ಕಾಮಶಕ್ತಿಯ ಆಸೆ ಹುಟ್ಟಿಸಿ ಮೋಸ ಮಾಡುವ ಕಥೆಯೂ ಇದೆ. ಆದರೆ, ಇದು ಕೇವಲ ಕಥೆ ಅಲ್ಲ, ನಿಜ ಜೀವನದಲ್ಲಿಯೂ ನಡೆದಿದೆ.
ಅಂದಹಾಗೆ ಇವರು ಮೋಸ ಮಾಡೋದಕ್ಕೆ ಬಳಸಿರೋದು ಟೈಂ ಮೆಷಿನ್ ಅಸ್ತ್ರವನ್ನ. ಇತ್ತೀಚೆಗೆ ಕನ್ನಡದಲ್ಲಿ ಝೈದ್ ಖಾನ್ ನಟಿಸಿದ್ದ ಜಯತೀರ್ಥ ನಿರ್ದೇಶನದ ಬನಾರಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ಟೈಮ್ ಮೆಷಿನ್ ಸ್ಟೋರಿ ಇದೆ. ಅಂತಾದ್ದೇ ಟೈಮ್ ಮೆಷಿನ್ ಆಸೆ ತೋರಿಸಿ, ಅಜ್ಜಂದಿರನ್ನೆಲ್ಲ ಯಾಮಾರಿಸಲಾಗಿದೆ. ಲೂಟಿ ಹೊಡೆದಿರೋದು 35 ಕೋಟಿ.
ಇದು ನಡೆದಿರೋದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಕಿಲಾಡಿ ದಂಪತಿಗಳಿಬ್ಬರು ವಯಸ್ಸನ್ನು ರಿವರ್ಸ್ ಮಾಡುವ ಮೇಡ್ ಇನ್ ಇಸ್ರೇಲ್ ಟೈಮ್ ಮೆಷಿನ್ ನಮ್ಮ ಬಳಿ ಇದೆ ಎಂದು ಹೇಳಿ, ವೃದ್ಧರ ತಂಡವನ್ನೇ ವಂಚಿಸಿದ್ದಾರೆ. 12ಕ್ಕೂ ಹೆಚ್ಚು ವೃದ್ಧರು ಮತ್ತೆ ಯೌವ್ವನದ ದಿನಗಳಿಗೆ ವಾಪಸ್ ಆಗುತ್ತೇವೆ ಎಂದು ನಂಬಿ ಮೋಸ ಹೋಗಿದ್ದಾರೆ. ಟೋಟಲ್ಲಾಗಿ ಕಳೆದುಕೊಂಡಿರೋದು 35 ಕೋಟಿ.
ರಾಜೀವ್ ಕುಮಾರ್ ದುಬೆ ಹಾಗೂ ಆತನ ಪತ್ನಿ ರಶ್ಮಿ ದುಬೆ ಎಂಬುವವರೇ ಚೀಟಿಂಗ್ ಮಾಸ್ಟರ್ಸ್. ಈ ಗಂಡ ಹೆಂಡತಿ ಕಾನ್ಪುರದಲ್ಲಿ ರಿವೈವಲ್ ವರ್ಲ್ಡ್ ಎಂಬ ಥೆರಪಿ ಸೆಂಟರ್ ಅನ್ನೋ ಸಂಸ್ಥೆ ನಡೆಸ್ತಾ ಇದ್ರು. ಅಲ್ಲಿ ಬಂದ ವೃದ್ಧರಿಗೆ ತಮಗೆ ಇಸ್ರೇಲಿನಿಂದ ಒಂದು ಟೈಂ ಮೆಷಿನ್ ಬಂದಿದೆ. ಆ ಮೆಷಿನ್ ಮಾಡೋ ಥೆರಪಿ ಮಾಡಿಸ್ಕೊಂಡ್ರೆ 60ರ ಅಜ್ಜಂದಿರೆಲ್ಲ 25ರ ಹರೆಯದ ಕುದುರೆಗಳಾಗುತ್ತಾರೆ ಎಂದು ನಂಬಿಸಿದ್ದಾರೆ. ಪರಿಸರ ಮಾಲಿನ್ಯ, ವಾಯು ಮಾಲಿನ್ಯ ಸಿಕ್ಕಾಪಟ್ಟೆ ಆಗ್ಬಿಟ್ಟಿದೆ. ಮೊದಲು ಇದೆಲ್ಲ ಇರಲಿಲ್ಲ. ಮಾಲಿನ್ಯ ಇರಲಿಲ್ಲ, ಹಾಗಾಗಿ ಆಗಿನ ಕಾಲದಲ್ಲಿ ಆ ವಯಸ್ಸಿನಲ್ಲೂ ಸ್ಟ್ರಾಂಗ್ ಆಗಿರ್ತಾ ಇದ್ರು. ಈಗ ಹಾಗಿಲ್ಲ. ಆದರೆ, ಈ ಮೆಷಿನ್‌ನಿಂದ ಮಾಡುವ ಆಕ್ಸಿಜನ್ ಥೆರಪಿಯಿಂದ ಯೌವ್ವನ ಮರಳಿ ಬರುತ್ತದೆ ಎಂದು ಪುಂಗಿದ್ದಾರೆ.
ಒಟ್ಟು 10 ಥೆರಪಿ. ಒಂದು ಬಾರಿಯ ಥೆರಪಿಗೆ 6 ಸಾವಿರ ರೂಪಾಯಿ. ತಿಂಗಳಿಗೆ ಒಂದ್ಸಲ ಮಾಡಿಸ್ಕೋಬೇಕು. ಒಂದೇ ಸಲ ದುಡ್ಡು ಕೊಟ್ ಬಿಟ್ರೆ, ಮೂರು ವರ್ಷಕ್ಕೆ 90 ಸಾವಿರ ರೂಪಾಯಿ ಅಂತೆಲ್ಲ ಪ್ಯಾಕೇಜ್ ಮಾಡಿದ್ದಾರೆ. ಒಬ್ಬರು ಇನ್ನೊಬ್ಬರನ್ನು ಕರೆದು ತಂದರೆ, ಅವರಿಗೆ ಒಂದ್ಸಲದ ಥೆರಪಿ ಫ್ರೀ ಎಂಬ ಚೈನ್ ಲಿಂಕ್ ಸ್ಕೀಮ್ ಕೂಡಾ ಮಾಡಿದ್ರಂತೆ.
ವಯಸ್ಸಾದ ತಾತಂದಿರಿಗೆಲ್ಲ ಏನನ್ನಸಿತೋ.. ಆಸೆಯಂತೂ ಹುಟ್ಟಿರುತ್ತದೆ. ದುಂಬಾಲು ಬಿದ್ದು ಲಕ್ಷ ಲಕ್ಷ ಕೊಟ್ಟಿದ್ದಾರೆ. ಅದು ಕೋಟಿ ಕೋಟಿ ಆಗಿದೆ. ಮೋಸ ಹೋಗಿರೋವ್ರಲ್ಲಿ ಕೇವಲ ತಾತಂದಿರಷ್ಟೇ ಅಲ್ಲ, ಅಜ್ಜಿಯರೂ ಇದ್ದಾರೆ. ಅವರಿಗೂ ಹರೆಯಕ್ಕೆ ವಾಪಸ್ ಹೋಗೋ ಆಸೆ ಇರುತ್ತೆ ಅಲ್ವಾ..? ಒಟ್ಟಿನಲ್ಲಿ 35 ಕೋಟಿಗೆ ನಾಮ ಹಾಕಿ ಎಸ್ಕೇಪ್ ಹಾಕಿದ್ದಾರೆ ಟೈಂ ಮೆಷಿನ್ ದಂಪತಿ.
ಮೋಸ ಹೋದವರಲ್ಲಿ ಒಬ್ಬರಾದ ರೇಣು ಸಿಂಗ್ ಎಂಬುವವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ತನಗೆ ಈ ದಂಪತಿ 10.75 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ. ನನ್ನಂತೆಯೇ 100ಕ್ಕೂ ಹೆಚ್ಚು ಜನರಿಂದ ಅಂದಾಜು 35 ಕೋಟಿಯಷ್ಟು ಹಣ ವಸೂಲಿ ಮಾಡಿದ್ದಾರೆ ಎಂದು ರೇಣು ಸಿಂಗ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಿಲಾಡಿ ದಂಪತಿಗೆ ಚೀಟಿಂಗ್ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.



