ವಜ್ರೇಶ್ವರಿಗೆ 50 ವರ್ಷ ಆಗಿದೆ ಎಂದು ನಿರ್ಮಾಪಕಿಯೂ ಆಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಂಭ್ರಮಪಟ್ಟಿದ್ದಾರೆ. ʻʻವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಭವ್ಯ ಪರಂಪರೆಗೆ 50 ವರ್ಷಗಳ ಸಂಭ್ರಮಾಚರಣೆ. ಈ ಪಯಣದ ಪ್ರತಿಯೊಂದು ನೆನಪು, ಪ್ರತಿಯೊಂದು ಮೈಲಿಗಲ್ಲು… ಇಂದಿಗೂ ಜೀವಂತವಾಗಿದೆʼʼ ಎಂದು ಒಂದು ಪುಟ್ಟ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ.. ವಜ್ರೇಶ್ವರಿಗೆ 50 ವರ್ಷ ಆಗಿದೆಯಾ.. ವಾಸ್ತವವಾಗಿ ಹೇಳಬೇಕೆಂದರೆ.. ಇಲ್ಲ.
ಹಾಗಂತ ಅಶ್ವಿನಿ ಸುಳ್ಳು ಹೇಳಿದರಾ.. ಅದೂ ಇಲ್ಲ. ಪಾರ್ವತಮ್ಮ ರಾಜ್ ಕುಮಾರ್ ಎಂಬ ನಿರ್ಮಾಪಕಿ ಹುಟ್ಟಿ 50 ವರ್ಷ. ಅದಂತೂ ಸತ್ಯ. ಆದರೆ.. ಮೊದಲ ಬ್ಯಾನರ್ ವಜ್ರೇಶ್ವರಿ ಅಲ್ಲ. ವಾಸ್ತವವಾಗಿ ವಜ್ರೇಶ್ವರಿ ಕಂಬೈನ್ಸ್ ಹುಟ್ಟಿದ್ದು 1980ರಲ್ಲಿ. ಅಂದರೆ ವಜ್ರೇಶ್ವರಿಗೇ 50 ವರ್ಷ ಎನ್ನಬೇಕು ಎಂದರೆ.. ಇನ್ನೂ 5 ವರ್ಷ ಬ್ಯಾಲೆನ್ಸ್ ಇದೆ.
1975. ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಪಕಿಯಾಗಿ, ತ್ರಿಮೂರ್ತಿ ಸಿನಿಮಾ ರಿಲೀಸ್ ಮಾಡಿದ ವರ್ಷ. ಬ್ಯಾನರ್ ಹೆಸರು ವಜ್ರೇಶ್ವರಿ ಕಂಬೈನ್ಸ್. ಡಾ.ರಾಜ್ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸು ಕಾಣುತ್ತಿದ್ದ ದಿನಗಳವು. ಆದರೆ.. ಕೆಲವು ನಿರ್ಮಾಪಕರು ರಾಜ್ ಚಿತ್ರಗಳಿಂದ ಲಾಸ್ ಹೆಚ್ಚಾಗುತ್ತಿದೆ ಎನ್ನುತ್ತಿದ್ದರು. ಆದರೆ.. ಸಿನಿಮಾಗಳು ಮಾತ್ರ 100 ದಿನ, 25 ವಾರ ಓಡುತ್ತಿದ್ದವು. ಅಷ್ಟಾದ ನಂತರ ಅದೇ ನಿರ್ಮಾಪಕರು ರಾಜ್ ಅವರ ಕಾಲ್ ಶೀಟ್ ಪಡೆಯುತ್ತಿದ್ದರು. ನಷ್ಟದ ಕಥೆ ಹೇಳಿ ಕೆಲವರು ಫ್ರೀ ಕಾಲ್ ಶೀಟ್ ಪಡೆದರೆ, ಕೆಲವರು ಕಡಿಮೆ ಸಂಭಾವನೆಗೆ ಒಪ್ಪಿಸುತ್ತಿದ್ದರು. ಇದನ್ನು ಕೇಳಿ ಕೇಳೀ ಬೇಸತ್ತಿದ್ದ ಪಾರ್ವತಮ್ಮ.. ತಾವೇ ನಿರ್ಮಾಪಕಿಯಾದರು. ಹಾಗೆ ನಿರ್ಮಾಪಕಿಯಾಗಿ ನಿರ್ಮಿಸಿದ ಮೊದಲ ಚಿತ್ರವೇ ತ್ರಿಮೂರ್ತಿ.
ಸಿವಿ ರಾಜೇಂದ್ರನ್ ನಿರ್ದೇಶನದ ಚಿತ್ರದಲ್ಲಿ ರಾಜ್ ಕುಮಾರ್ ತ್ರಿಬಲ್ ಆಕ್ಟಿಂಗ್ ಅಲ್ಲ. ಆದರೆ ಮೂರು ವೇಷಗಳಲ್ಲಿ ಕಾಣಿಸಿಕೊಳ್ತಾರೆ. ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವಿದ್ದ ಚಿತ್ರವನ್ನು ತ್ರಿಮೂರ್ತಿ, ಉಂಡೂ ಹೋದ ಕೊಂಡೂ ಹೋದ ಹಾಗೂ ಆಳಾಗಬಲ್ಲವ ಅರಸನಾಗಬಲ್ಲ ಎಂಬ ಮೂರು ಭಾಗಗಳಲ್ಲಿ ಹೇಳಲಾಗಿತ್ತು. ಅಂದಹಾಗೆ ಇದು ಪೂರ್ಣಿಮಾ ಎಂಟರ್ ಪ್ರೈಸಸ್ ಬ್ಯಾನರ್ ಸಿನಿಮಾ. ಆ ಲೆಕ್ಕದಲ್ಲಿ ಪೂರ್ಣಿಮಾ ಕಂಬೈನ್ಸ್ ಬ್ಯಾನರಿಗೆ ಈಗ 50 ವರ್ಷ.
ಮುಂದೆ ವಜ್ರೇಶ್ವರಿ, ದಾಕ್ಷಾಯಿಣಿ ಕಂಬೈನ್ಸ್.. ಹೀಗೆ ತಮ್ಮದೇ ನಿರ್ಮಾಣದಲ್ಲಿ ಬೇರೆ ಬೇರೆ ಬ್ಯಾನರ್ ಮೂಲಕ ಚಿತ್ರಗಳನ್ನು ಮಾಡುತ್ತಾ ಹೋದರು. ಹಾಗೆ ನಿರ್ಮಾಣವಾದ ಚಿತ್ರಗಳ ಸಂಖ್ಯೆ 80ಕ್ಕೂ ಹೆಚ್ಚು.
ಅಂದಹಾಗೆ ಪಾರ್ವತಮ್ಮ ರಾಜ್ ಕುಮಾರ್ ಅವರು ಹುಟ್ಟುಹಾಕಿದ ಚಿತ್ರಸಂಸ್ಥೆಗಳ ಹೆಸರನ್ನೊಮ್ಮೆ ನೋಡಿ.
ಮೊದಲು ಪೂರ್ಣಿಮಾ ಕಂಬೈನ್ಸ್. ಆನಂತರ.. 1977ರಲ್ಲಿ ಹುಬ್ಬಳ್ಳಿಯಲ್ಲಿ ಚಂದ್ರಿಕಾ ಮೂವೀಸ್ (ಇದು ವಿತರಣಾ ಸಂಸ್ಥೆ). ಬರೀ ಪೂರ್ಣಿಮಾ ಎಂಟರ್‌ಪ್ರೈಸಸ್ ಮತ್ತು ವಜ್ರೇಶ್ವರಿ ಕಂಬೈನ್ಸ್ ಮಾತ್ರವಲ್ಲ, ಸರ್ವೇಶ್ವರಿ ಎಂಟರ್ಪ್ರೈಸಸ್, ಚಕ್ರೇಶ್ವರಿ ಎಂಟರ್ಪ್ರೈಸಸ್, ನಿರುಪಮಾ ಆರ್ಟ್ ಕಂಬೈನ್ಸ್, ದಾಕ್ಷಾಯಿಣಿ ಕಂಬೈನ್ಸ್, ಕಾತ್ಯಾಯಿನಿ ಆರ್ಟ್ ಕಂಬೈನ್ಸ್, ಶ್ರೀ ಚಕ್ರೇಶ್ವರಿ ಕಂಬೈನ್ಸ್, ಶ್ರೀ ಲಕ್ಷ್ಮೀ ಆರ್ಟ್ ಕಂಬೈನ್ಸ್, ಆರ್.ಪಿ. ಕ್ರಿಯೇಷನ್ಸ್ ಮುಂತಾದ ಇನ್ನೂ ಹಲವು ನಿರ್ಮಾಣ ಸಂಸ್ಥೆಗಳನ್ನು ಪಾರ್ವತಮ್ಮ ಹುಟ್ಟುಹಾಕಿದ್ದಾರೆ.
ಡಾ.ರಾಜ್ ಅವರಿಗೆ 35, ಶಿವರಾಜ್ ಕುಮಾರ್ ಅವರಿಗೆ 17, ರಾಘವೇಂದ್ರ ರಾಜ್ ಕುಮಾರ್ ಅವರಿಗೆ 13, ಪುನೀತ್ ಅವರಿಗೆ 10, ವಿನಯ್ ರಾಜ್ ಕುಮಾರ್ ಅವರಿಗೆ 2 ಸಿನಿಮಾ ನಿರ್ಮಾಣವಾಗಿವೆ.
ಡಾ.ರಾಜ್ ಅವರ ಶಂಕರ್ ಗುರು, ಅಪೂರ್ವ ಸಂಗಮ, ಜೀವನ ಚೈತ್ರ ಚಿತ್ರಗಳನ್ನು ಬಿಗ್ ಹಿಟ್ ಎಂದು ಪರಿಗಣಿಸಬಹುದು. ಶಿವಣ್ಣ ಅವರದ್ದು ಓಂ, ಜನುಮದ ಜೋಡಿ ಆದರೆ, ರಾಘವೇಂದ್ರ ರಾಜ್ ಕುಮಾರ್ ಅವರ ನಂಜುಂಡಿ ಕಲ್ಯಾಣ, ಪುನೀತ್ ಅವರ ಜಾಕಿ ಮೆಗಾ ಹಿಟ್ ಸಿನಿಮಾ ಎನ್ನಬಹುದು.
ಶ್ರೀ ವಜ್ರೇಶ್ವರಿ ಕಂಬೈನ್ಸ್ 50 ವರ್ಷ ಪೂರೈಸಿದೆ ಎಂದು ಅಶ್ವಿನಿ ಪುನೀತ್ ಒಂದು ವಿಡಿಯೋ ಮಾಡಿದ್ದಾರಲ್ಲ.. ಆ ವಿಡಿಯೋದಲ್ಲಿ . ‘ಆನಂದ್’ ಆಗಿ ಬಂದ ಶಿವಣ್ಣ, ‘ಚಿರಂಜೀವಿ ಸುಧಾಕರ’ ಆಗಿ ಬಂದ ರಾಘಣ್ಣ, ‘ಅಪ್ಪು’ ಆಗಿ ಬಂದ ನನ್ನ ಅಪ್ಪು. ಸಿನಿಮಾಗಳು ಇತಿಹಾಸ ಆಯ್ತು. ಜತೆಗೆ ಹೆಸರುಗಳು ಶಾಶ್ವತವಾಗಿ ಅಚ್ಚಳಿಯದೇ ಉಳಿಯಿತು. ‘ಸಿದ್ದಾರ್ಥ’ ಆಗಿ ವಿನಯ್, ಈಗ ಎಕ್ಕ ಆಗಿ ‘ಯುವ’, ವಜೇಶ್ವರಿ ಬರೀ ನಮ್ಮ ಸಂಸ್ಥೆಯ ಪರಿವಾರ ಮಾತ್ರವಲ್ಲ, ಎಲ್ಲಾ ಕಲಾವಿದರು, ಅಭಿಮಾನಿಗಳು, ತಂತ್ರಜ್ಞರು ಕಟ್ಟಿರುವ ಕನಸಿನ ಅರಮನೆ ವಜೇಶ್ವರಿ ಕಂಬೈನ್ಸ್” ಎಂದು ಹೇಳಿದ್ದಾರೆ.
ಹಾಗೆ ನೋಡಿದರೆ, ಕಳೆದ ಒಂಬತ್ತು ವರ್ಷಗಳಲ್ಲಿ ವಜ್ರೇಶ್ವರಿ ಕಂಬೈನ್ಸ್ ಅಥವಾ ಪಾರ್ವತಮ್ಮ ಹುಟ್ಟುಹಾಕಿದ ಯಾವೊಂದು ಸಂಸ್ಥೆಯೂ ಚಿತ್ರ ನಿರ್ಮಾಣ ಮಾಡಿಲ್ಲ. ಅಶ್ವಿನಿ ಪುನೀತ್ ಅವರು ಪಿಆರ್‌ಕೆ ಪ್ರೊಡಕ್ಷನ್ಸ್ ಸ್ಥಾಪಿಸಿದ್ದರೆ (ಎಕ್ಕ ಚಿತ್ರ ಆ ಬ್ಯಾನರ್ ಮೂಲಕವೇ ಬಂದಿದೆ), ಶಿವರಾಜ್ ಕುಮಾರ್ ಅವರು ಗೀತಾ ಪಿಕ್ಚರ್ಸ್ ಸ್ಥಾಪಿಸಿದ್ದಾರೆ.



