ಇಂಥಾದ್ದೊಂದು ಹೇಳಿಕೆ ಅನಿರೀಕ್ಷಿತ. ನವೆಂಬರ್ ತಿಂಗಳಲ್ಲಿ ಕ್ರಾಂತಿಯೇ ಆಗುತ್ತದೆ ಎಂದು ಅಂದುಕೊಂಡಿದ್ದವರಿಗೆ ತಣ್ಣೀರು ಸುರಿದಿದ್ದಾರೆ ಡಿಕೆ ಶಿವಕುಮಾರ್. ಹಾಗಂತ ಎಲ್ಲವೂ ಕೂಲ್ ಕೂಲ್ ಅಲ್ಲ. ಹಾಗೆ ಹೇಳುವ ಜೊತೆಯಲ್ಲೇ ಇನ್ನೊಂದು ಸಣ್ಣ ಪಟಾಕಿ ಸಿಡಿಸಿದ್ದಾರೆ.
ʻʻನವೆಂಬರ್ ಕ್ರಾಂತಿನೂ ಇಲ್ಲ, ಡಿಸೆಂಬರ್ ಕ್ರಾಂತಿನೂ ಇಲ್ಲ, ಜನವರಿ, ಫೆಬ್ರವರಿಗೂ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028 ರಲ್ಲಿ, ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕʼʼ ಇದು ನವದೆಹಲಿಯಲ್ಲಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ. ನವೆಂಬರ್ ಕ್ರಾಂತಿ ಹಾಗೂ ಈ ತಿಂಗಳು 22 ಹಾಗೂ 26 ರ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡುವಾಗ ಆಡಿರುವ ಮಾತು.
ಯಾರೋ ಸುಮ್ಮನೆ ಬರೆದಿದ್ದಾರೆ. ಪಕ್ಷ ನಮಗೆ ಬಿಹಾರ ಚುನಾವಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ನೀಡಿದ್ದು, ನಾವು ಅದನ್ನು ಮಾಡುತ್ತಿದ್ದೇವೆ. ಇದರ ಹೊರತಾಗಿ ಬೇರೆ ಯಾವುದೇ ಕ್ರಾಂತಿ ಆಗುವುದಿಲ್ಲ ಎಂದಿರುವ ಡಿಕೆ ʻನವೆಂಬರ್ ಕ್ರಾಂತಿʼ ಕನಸುಗಾರರ ಕನಸಿಗೆ ತಣ್ಣೀರು ಸುರಿದಿದ್ದಾರೆ…
ಆದರೆ.. ಆದರೆ.. ಜೊತೆಗೊಂದು ಪಟಾಕಿಯನ್ನೂ ಸಿಡಿಸಿದ್ದಾರೆ. ಆ ಪಟಾಕಿ ಏನೆಂದರೆ ʻʻ ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲʼʼ ಎನ್ನುವುದು.
ಖುದ್ದು ಸಿದ್ದರಾಮಯ್ಯ ಅವರೇ ಬಿಹಾರ ಚುನಾವಣೆ ನಂತರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳುತ್ತಿರುವಾಗ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಅವರಿಗೆ ವಿಷಯವೇ ಗೊತ್ತಿಲ್ಲವಂತೆ. ಡಿಕೆಗೆ ಒಂದು ಮಾತನ್ನೂ ಹೇಳದೆ ಸಂಪುಟ ವಿಸ್ತರಣೆಗೆ ಕೈ ಹಾಕಿದರಾ…
ಡಿಕೆ ಹೇಳಿರೋದು ಇಷ್ಟೇ.. ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ನನ್ನ ಬಳಿ ಯಾರೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿಲ್ಲ. ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡುತ್ತೇವೆ. ನಾಯಕತ್ವ ಬದಲಾವಣೆ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಏನಾದರೂ ಹೇಳೀದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ ಎಂದು ಹೇಳಿದ್ದೇವೆ.. ಎಂದಿದ್ದಾರೆ.
ಸಿಎಂ ಐದು ವರ್ಷ ಇರಬೇಕು ಎಂದರೆ ಐದು ವರ್ಷ ಇರುತ್ತಾರೆ. ಹತ್ತು ವರ್ಷ ಇರಬೇಕು ಎಂದರೆ ಹತ್ತು ವರ್ಷ ಇರುತ್ತಾರೆ. 15 ವರ್ಷ ಇರಬೇಕು ಎಂದರೆ 15 ವರ್ಷ ಇರುತ್ತಾರೆ. ನಮಗೆ ಕೊಟ್ಟ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ರೇಖೆ ಬಿಟ್ಟು ನಾನು ಎಂದಿಗೂ ಹೋಗುವುದಿಲ್ಲ ಎಂದಿರುವ ಡಿಕೆ ಶಿವಕುಮಾರ್ ಎಂದಿನಂತೆ.. ಹೈಕಮಾಂಡ್ ಫೈನಲ್ ಎಂದಿದ್ದಾರೆ.
ಅಷ್ಟೇ ಅಲ್ಲ.. ಸಂಪುಟ ವಿಸ್ತರಣೆ ಆಕಾಂಕ್ಷೆಯಲ್ಲಿರುವವರಿಗೆ ಏನು ಹೇಳುತ್ತೀರಾ ಎಂಬ ಪ್ರಶ್ನೆಗೂ ಅದೆಲ್ಲವನ್ನು ದೆಹಲಿ ನಾಯಕರು ಯಾವಾಗ, ಯಾವ ರೀತಿ ಮಾಡಬೇಕೋ ಮಾಡುತ್ತಾರೆ ಎಂದು ಉತ್ತರ ಕೊಟ್ಟಿದ್ದಾರೆ.



