ಯತ್ನಾಳ್ ಹೊಸ ಪಕ್ಷಕ್ಕೆ ಯತ್ನಾಳ್ ಟೀಂನಲ್ಲೇ ಭಿನ್ನಸ್ವರ ಕೇಳಿ ಬಂದಿದೆ. ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಯತ್ನಾಳ್ ಅಬ್ಬರಕ್ಕೆ ಬ್ರೇಕ್ ಬೀಳ್ತಿಲ್ಲ. ಬಿಜೆಪಿ ತೊರೆದ ಯತ್ನಾಳ್ ಪರ ರಾಜ್ಯದೆಲ್ಲೆಡೆ ಹೋರಾಟಗಳೂ ಜೋರಾಗಿವೆ. ಯತ್ನಾಳ್ ರಾಜ್ಯದಲ್ಲಿ ಹೊಸ ಪಕ್ಷ ಕಟ್ತಾರಾ ಅನ್ನೋ ಕೂಗು ಒಂದು ಕಡೆಯಾದ್ರೆ, ಮತ್ತೆ ಪಕ್ಷಕ್ಕೆ ಯತ್ನಾಳ ಕರೆ ತರುವ ಪ್ರಯತ್ನಗಳು ನಡೆಯುತ್ತಿದೆ. ಆದ್ರೆ ಇದೆಲ್ಲದರ ನಡುವೆ ವಿಜಯೇಂದ್ರ ಇರೋವರೆಗೂ ಬಿಜೆಪಿ ಪಕ್ಷಕ್ಕೆ ಹೋಗಲ್ಲ ಎನ್ನುತ್ತಿರುವ ಯತ್ನಾಳ್, ಮತ್ತೆ ಮತ್ತೆ ಹೊಸ ಪಕ್ಷ ಕಟ್ಟುವ ಮಾತನ್ನಾಡುತ್ತಿದ್ಧಾರೆ.
ಯತ್ನಾಳ್ ಉಚ್ಛಾಟನೆ ವಾಪಸ್ ಪಡೆಯಬೇಕು ಅಂತ ರಾಜ್ಯಾದಾದ್ಯಂತ ಹೋರಾಟ ನಡೆಯುತ್ತಿದ್ದರೆ, ಇತ್ತ ಬಿಜೆಪಿಯಲ್ಲಿ ಯತ್ನಾಳ್ ಟೀಂ, ವಿಜಯೇಂದ್ರ ಟೀಂ ನಡುವೆ ನಡೆಯುತ್ತಿರುವ ಕಿತ್ತಾಟ ಕೊನೆಗೊಳ್ಳುವ ಲಕ್ಷಣಗಳಿಲ್ಲ.
ಯತ್ನಾಳ್ ಹೊಸ ಪಕ್ಷಕ್ಕೆ ರೆಬೆಲ್ಸ್ ವಿರೋಧ :
ಉಚ್ಚಾಟನೆ ಆದೇಶ ಹಿಂಪಡೆಯುವಂತೆ ಮನವಿ ಮಾಡಲ್ಲ ಎಂದಿರುವ ಯತ್ನಾಳ್, ಹಿಂದುತ್ವ ಅಜೆಂಡಾ ಇರೋ ಪಕ್ಷ ಕಟ್ಟಲು ಯತ್ನಾಳ್ ಸಿದ್ದತೆ ನಡೆಸುತ್ತಿದ್ದಾರೆ. ಯಡಿಯೂರಪ್ಪ ತಾಳಕ್ಕೆ ತಕ್ಕಂತೆ ಕುಣಿಯುವ ಹೈಕಮಾಂಡ್ ಮುಂದೆ ಅಂಗಲಾಚಲ್ಲ ಎಂದಿರುವ ಯತ್ನಾಳ್, ಹೊಸ ಪಕ್ಷ ಕಟ್ಟಲು ಪ್ಲಾನ್ ಮಾಡಿದ್ದಾರೆ. ಆರು ತಿಂಗಳ ಒಳಗೆ ʻಹಿಂದುತ್ವ ಫೈರ್ ಬ್ರಾಂಡ್ʼ ಪಕ್ಷ ಸ್ಥಾಪನೆ ಮಾಡುವುದಕ್ಕೆ ಸಿದ್ಧತೆ ನಡೆಯುತ್ತಿದೆ. ಹೆಸರು ಏನು ರಿಜಿಸ್ಟರ್ ಮಾಡಬೇಕು ಅಂತ ಆಪ್ತರ ಜತೆ ಚರ್ಚೆ ಶುರು ಮಾಡಿದ್ದಾರೆ. ಹಣ ಹೊಂದಿಸುವ ಬಗ್ಗೆಯೂ ಚರ್ಚೆ ಶುರು ಮಾಡಿದ್ದಾರಂತೆ.
ಯತ್ನಾಳ್ ಟೀಮ್ ಈ ನಡೆಗೆ ರೆಬಲ್ಸ್ ವಿರೋಧ ವ್ಯಕ್ತಪಡಿಸಿದ್ದು, ಹೊಸ ಪಕ್ಷ ಕಟ್ಟುವ ಹೇಳಿಕೆ ಬೇಡ, ಹೊಸ ಪಕ್ಷದ ಚಿಂತನೆ ಬೇಡ, ಎಲ್ಲಿ ಕಳೆದುಕೊಂಡಿದ್ದೇವೋ ಅಲ್ಲಿಯೇ ಪಡೆಯೋಣ, ಬಿಜೆಪಿಯಲ್ಲಿಯೇ ನಾವು ರಾಜಕಾರಣ ಮಾಡೋಣ, ಹೊಸ ಪಕ್ಷ ಕಟ್ಟಿ ಸಕ್ಸಸ್ ಆದವರ ಸಂಖ್ಯೆ ಕಡಿಮೆ, ಹೊಸ ಪಕ್ಷದ ಚಿಂತೆ ಬೇಡ ಅಂತಿದ್ದಾರಂತೆ.
ಹೊಸ ಪಕ್ಷ ಕಟ್ಟುತ್ತೇವೆ ಎಂದರೆ ನಮ್ಮ ಸಪೋರ್ಟ್ ನಿಮಗಿಲ್ಲ ಅನ್ನೋ ಸಂದೇಶ ರವಾನೆ ಮಾಡಿರುವ ರೆಬಲ್ಸ್, ಮಿಕ್ಕಿದ್ದನ್ನು ನೀವೇ ನಿರ್ಧಾರ ಮಾಡಿ ಎಂದು ತೀರ್ಮಾನವನ್ನು ಯತ್ನಾಳ್ ಅವರಿಗೇ ಬಿಟ್ಟಿದ್ದಾರಂತೆ. ರೆಬಲ್ಸ್ ದೂರ ಆದ್ರೆ ಯತ್ನಾಳ್ ಅಕ್ಷರಶಃ ಒಬ್ಬಂಟಿಯಾಗುತ್ತಾರೆ.
ರೆಬೆಲ್ಸ್ ಭಯಕ್ಕೆ ಕಾರಣ ಏನು..?
ಒಂದು ಪಕ್ಷ ಕಟ್ಟುವುದು ಸುಲಭದ ಮಾತಲ್ಲ. ಯತ್ನಾಳ್ ಗುಂಪಿನಲ್ಲಿರುವ ನಾಯಕರಿಗೆಲ್ಲ ತಮ್ಮ ತಮ್ಮ ಶಕ್ತಿ, ಇತಿಮಿತಿ ಗೊತ್ತಿದೆ. ಇಂದಿರಾ ಗಾಂಧಿ ಸಕ್ಸಸ್ ಆದರು. ದೇವೇಗೌಡ ಸಕ್ಸಸ್ ಆದರು. ಆದರೆ ಅವರಿಬ್ಬರೂ ಹೊಸ ಪಕ್ಷ ಕಟ್ಟಲಿಲ್ಲ. ಪಕ್ಷದ ಒಂದು ಬಣದ ನಾಯಕರಾದರಷ್ಟೇ. ಯಡಿಯೂರಪ್ಪ, ಬಂಗಾರಪ್ಪ ಅವರಂತಹವರೇ ಹೊಸ ಪಕ್ಷ ಕಟ್ಟಿ ಸೋತಿದ್ದಾರೆ. ಹೀಗಿರುವಾಗ ಹೊಸ ಪಕ್ಷ ಎಂದರೆ ತಮ್ಮ ಖಜಾನೆ ಖಾಲಿಯಾಗುತ್ತದೆಯೇ ಹೊರತು ಲಾಭವಿಲ್ಲ. ನೆಗಡಿಯ ಮೇಲಿನ ಸಿಟ್ಟಿಗೆ ನಮ್ಮದೇ ಮೂಗು ಕೊಯ್ದುಕೊಳ್ಳೋದು ಬೇಡ ಎಂಬ ಗಾದೆ ಮಾತು ನೆನಪಿಸಿದ್ದಾರಂತೆ. ಎಂದಿನಂತೆ ಯತ್ನಾಳ್ ಈ ಮಾತುಗಲನ್ನ ಕೇಳುತ್ತಿದ್ದಾರೆ. ಆದರೆ ಪಾಲಿಸುತ್ತಾರೋ.. ಬಿಡುವುದೋ.. ಅವರಿಗೂ ಗೊತ್ತಿದ್ದಂತಿಲ್ಲ.



