ರಾಜ್ಯದಲ್ಲಿ ರಾಜಕೀಯ ವಲಯದಲ್ಲಿ ಏನಾಗುತ್ತಿದೆ ಎಂದರೆ.. ಹಗರಣಗಳ ರಾಶಿಯಂತೂ ಇದೆ. ಸರ್ಕಾರದ ನಾಯಕರ ಮಾತುಗಳು ಹತೋಟಿ ತಪ್ಪಿವೆ. ಹಗರಣ, ಆರೋಪ, ಗಲಾಟೆ.. ಹೀಗೆ ಯಾವುದಕ್ಕೂ ಲಿಮಿಟ್ ಇಲ್ಲ. ಕಾನೂನು ಸುವ್ಯವಸ್ಥೆ ವಿಚಾರವಂತೂ ಹದಗೆಟ್ಟಿದೆ ಎನ್ನುವುದನ್ನು ಕಾಂಗ್ರೆಸ್ ಪಕ್ಷದ ಕಟ್ಟರ್ ಬೆಂಬಲಿಗರೂ ಹೇಳುವಂತಾಗಿದೆ. ಆದರೆ.. ಸಿದ್ದರಾಮಯ್ಯ ಯಾವುದಕ್ಕೂ ಜಗ್ಗುತ್ತಿಲ್ಲ. ಬಗ್ಗುತ್ತಿಲ್ಲ. ಏಕೆ.. ಏಕೆಂದರೆ ಅಲ್ಲಿ ಎದ್ದು ಕಾಣುತ್ತಿರುವುದು ಪ್ರತಿಪಕ್ಷ ಬಿಜೆಪಿಯ ವೈಫಲ್ಯ.
ಇದೀಗ ಅಬಕಾರಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ವಿಚಾರಕ್ಕೇ ಬಂದರೆ.. ಅಬಕಾರಿ ಸಚಿವ ಆರ್‌ಬಿ ತಿಮ್ಮಾಪೂರ ಅವರ ಮೇಲೆ ಇದು ಮೊದಲ ಆರೋಪವೇನೂ ಅಲ್ಲ. ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ನಡೆಸಿದ್ದಾರೆ. ತಿಮ್ಮಾಪುರ ಅವರ ರಾಜೀನಾಮೆಯನ್ನು ಸಿದ್ದರಾಮಯ್ಯ ಕೇಳಿಯೂ ಇಲ್ಲ. ತಿಮ್ಮಾಪುರ ಕ್ಯಾರೇ ಎನ್ನುತ್ತಿಲ್ಲ. ಯಾಕೆ..?
ಯಾಕೆ ಎಂದು ನೋಡಿದರೆ ಬಿಜೆಪಿಯವರು ತಾವು ಮಾಡುವ ವಿಚಾರಗಳಲ್ಲಿ ಯಾವುದಕ್ಕೂ ಫರ್ಮ್ ಆಗಿ ನಿಂತುಕೊಳ್ಳುವುದೇ ಇಲ್ಲ. ಮೀಡಿಯಾದವರು ಏನಾದರೂ ಒಂದು ಪ್ರಶ್ನೆ ಕೇಳಿದರೆ ತಕ್ಷಣ ಆ ವಿಷಯಕ್ಕೆ ಜಂಪ್ ಆಗಿಬಿಡುತ್ತಾರೆ. ಅಂದರೆ ಯಾವುದೇ ವಿಷಯ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದೇ ಇಲ್ಲ. ಕನಿಷ್ಠ ಸರ್ಕಾರ ಉತ್ತರ ಕೊಡುವವರೆಗೂ ಕಾಯುವುದಿಲ್ಲ. ಉತ್ತರಕ್ಕೂ ಮೊದಲೇ ಇನ್ನೊಂದು ವಿಷಯ, ಇನ್ನೊಂದು ಹೋರಾಟ ಎಂದು ಜಂಪ್ ಆಗುತ್ತಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಒಂದು ವಿಷಯ ಎತ್ತಿಕೊಂಡರೆ, ಸುನಿಲ್ ಕುಮಾರ್ ಎತ್ತಿಕೊಳ್ಳುವ ವಿಷಯವೇ ಬೇರೆ. ಇನ್ನು ಪಕ್ಷದಿಂದ ಹೊರಹಾಕಲ್ಪಟ್ಟಿರುವ ಯತ್ನಾಳ್.. ಈ ಇಬ್ಬರು ಎತ್ತಿದ್ದ ವಿಷಯವನ್ನು ಸೈಡ್ ಲೈನ್ ಮಾಡುವಂತೆ ಮಾಡುತ್ತಾರೆ. ಸುರೇಶ್ ಕುಮಾರ್ ಅವರಿಗೆ ಇದ್ದಕ್ಕಿದ್ದಂತೆ ತಾವು ಸೀನಿಯರ್ ಲೀಡರ್ ಎಂಬುದು ನೆನಪಾಗುತ್ತದೆ. ವಿಜಯೇಂದ್ರ ಅವರು, ಪಕ್ಷದ ಕಚೇರಿಯಲ್ಲಿ ಮಾತ್ರ ತಾವು ಅಧ್ಯಕ್ಷ, ವಿಧಾನಸಭೆಯಲ್ಲಿ ಆಗುವ ಆಗುಹೋಗುಗಳಿಗೆ ಸಂಬಂಧವೇ ಇಲ್ಲ ಎನ್ನುವಂತೆ ಕುಳಿತು ಬಿಡುತ್ತಾರೆ.
ಈ ಬಾರಿಯ ಸ್ಪೆಷಲ್ ಅಧಿವೇಶನದಲ್ಲಿ ಬಿಜೆಪಿ ನಾಯಕರಿಗೆ ಬಳ್ಳಾರಿ ಗಲಾಟೆ ವಿಷಯ, ದಾವಣಗೆರೆ, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ನಾಯಕರಿಂದ ನಡೆದ ದಾಂಧಲೆ ವಿಷಯಗಳಿದ್ದವು. ಮಾತನಾಡಿದರು. ಜಿ-ರಾಮ್-ಜಿ ವಿಷಯದಲ್ಲಿ ಜಾಹೀರಾತಿಗೆ ಉತ್ತರ ಕೊಟ್ಟರೇ ಹೊರತು, ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೊಟ್ಟಿದ್ದನ್ನು ಮಾತನಾಡಿದವರು ಕಡಿಮೆ. ಅಬಕಾರಿ ಹಗರಣ, ಲಾ & ಆರ್ಡರ್, ಜಾರ್ಜ್ ರಾಜೀನಾಮೆ ವದಂತಿ, ಧರ್ಮಸ್ಥಳ ವಿವಾದ, ಎಸ್‌ಐಟಿ, ಚಿನ್ನಸ್ವಾಮಿ ಸ್ಟೇಡಿಯಂ ಗಲಾಟೆ, ದ್ವೇಷ ಭಾಷಣ, ಅಕ್ರಮ ಬಾಂಗ್ಲಾದೇಶದವರಿಗೆ ಕೋಗಿಲು ವಸತಿ, ಪುನೀತ್ ಕೆರೆಹಳ್ಳಿ ಅರೆಸ್ಟ್ ವಿಷಯ.. ಹೀಗೆ ಎಲ್ಲವೂ ಪ್ರಸ್ತಾಪವಾದವು. ಆದರೆ.. ಅವುಗಳಿಗೆ ಖಚಿತ ಉತ್ತರ ದೊರೆಯುವ ಮೊದಲೇ, ಬಿಜೆಪಿಯವರೇ ವಿಷಯಾಂತರ ಮಾಡುತ್ತಿದ್ದರು. ಹೀಗಾಗಿಯೇ ಸಿದ್ದರಾಮಯ್ಯ ಬಿಜೆಪಿಯವರ ಯಾವ ಮಾತಿಗೂ ಜಗ್ಗುತ್ತಿಲ್ಲ. ಬಗ್ಗುತ್ತಲೂ ಇಲ್ಲ.
ಈಗ ತಮಟೆ, ಭಜನೆ ಮಾಡಿ ಅಹೋರಾತ್ರಿ ಪ್ರತಿಭಟಿಸಿದ ಶಾಸಕರು ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಹಗರಣ ನಡೆದಿದೆ. ಅಸ್ಸಾಂ, ತಮಿಳುನಾಡು, ಕೇರಳ ಚುನಾವಣೆಗೆ ಈ ಹಣಕ ಬಳಕೆ ಮಾಡಲಾಗುತ್ತದೆ. ತಿಮ್ಮಾಪೂರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಈ ವಿಷಯವೂ ಅಷ್ಟೇ.. ಆ ಹೋರಾಟಕ್ಕೊಂದು ರಾಜ್ಯಮಟ್ಟದ ರೂಪವನ್ನು ಬಿಜೆಪಿಯವರೂ ಕೊಡಲ್ಲ. ಸದನ ಮುಗಿಯುತ್ತಿದ್ದಂತೆ ಹೋರಾಟವೂ ಮುಗೀತು. ಮೀಡಿಯಾದವರು ಹೊಸ ಪ್ರಶ್ನೆ ಕೇಳಿದರೆ.. ಹೊಸ ಹೋರಾಟ.. ಅಷ್ಟೇ.



