ನಿಖಿಲ್ ಕುಮಾರಸ್ವಾಮಿಯವರಿಗೆ (Nikhil Kumaraswamy) ರಾಜಕೀಯ ಬೇಡ, ಸಿನಿಮಾ ಮಾಡಿಕೊಂಡಿರು ಎಂದಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumarswamy) ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ನನ್ನ ನಿರ್ಧಾರ ನಾನೇ ತೆಗೆದುಕೊಳ್ತೇನೆ ಎಂದಿದ್ದ ನಿಖಿಲ್, ಅಪ್ಪಮ ಮಾತನ್ನು ಒಪ್ಪಿದ್ದಾರೋ.. ಇಲ್ಲವೋ.. ಎಂಬ ಅನುಮಾನ ಸೃಷ್ಟಿಸಿದ್ದರು. ಆದರೆ ಈಗ ಚುನಾವಣೆ ರಾಜಕೀಯಕ್ಕೇ ಗುಡ್ ಬೈ ಹೇಳಿದ್ದಾರೆ ನಿಖಿಲ್ ಕುಮಾರಸ್ವಾಮಿ.
ರಾಜಕೀಯದಿಂದ ಇನ್ನು ಮುಂದೆ ದೂರ ಇರ್ತೇನೆ. ಆದರೆ, ಸಾಮಾನ್ಯ ಕಾರ್ಯಕರ್ತನಾಗಿ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡಲಾರೆ ಎಂದಿದ್ದಾರೆ.
ಅಲ್ಲಿಗೆ ನಿಖಿಲ್ ಕುಮಾರಸ್ವಾಮಿ, ಸ್ಪರ್ಧಾ ರಾಜಕೀಯಕ್ಕೆ ಗುಡ್ ಬೈ ಹೇಳಿದಂತೆ. ನಿಖಿಲ್ ಇನ್ನು ಮುಂದೆ ವಿಧಾನಸಭೆಗಾಗಲೀ, ಲೋಕಸಭೆಗಾಗಲೀ ಸ್ಪರ್ಧೆ ಮಾಡುವುದಿಲ್ಲ. ಆದರೆ ಜೆಡಿಎಸ್ ಪರ, ಅಭ್ಯರ್ಥಿಗಳ ಪರ ಪ್ರಚಾರವನ್ನಂತೂ ಮಾಡ್ತಾರೆ. ಜೆಡಿಎಸ್ ಪಕ್ಷದ ಬಗ್ಗೆ ಕೇಳುವ ಆರೋಪಗಳಲ್ಲಿ ಅತೀ ದೊಡ್ಡದೆಂದರೆ ಅವರು ಫ್ಯಾಮಿಲಿ ಪಾಲಿಟಿಕ್ಸ್ ಅನ್ನೋದು.
ದೇವೇಗೌಡರು (HD Devegowda) ಪ್ರಧಾನಿಯಾಗಿದ್ದರೆ, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದವರು. ರೇವಣ್ಣ (HD Revanna) ಮಾಜಿ ಸಚಿವರು. ಅನಿತಾ ಕುಮಾರಸ್ವಾಮಿ (Anitha kumaraswamy) ವಿಧಾನಸಭೆ ಶಾಸಕಿಯಾಗಿದ್ದರೆ, ಪ್ರಜ್ವಲ್ ರೇವಣ್ಣ (Prajwal Revanna) ಸಂಸದರು. ಸೂರಜ್ ರೇವಣ್ಣ (Sooraj Revanna) ವಿಧಾನ ಪರಿಷತ್ ಸದಸ್ಯ. ಭವಾನಿ ರೇವಣ್ಣ ಜಿಲ್ಲಾ ಪಂಚಾಯ್ತಿ ಸದಸ್ಯೆಯಾಗಿದ್ದವರು. ಇನ್ನು ನಿಖಿಲ್ ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆಗಳಿಗೆ ನಿಂತು ಸೋತವರು. ಹೀಗಾಗಿಯೇ ಜೆಡಿಎಸ್ ಮೇಲಿರುವ ಈ ಆರೋಪಗಳಿಂದ ಮುಕ್ತರಾಗಲು ನಾನು ಮತ್ತು ರೇವಣ್ಣ ಬಿಟ್ಟರೆ ಮಿಕ್ಕವರ್ಯಾರೂ ಎಲೆಕ್ಷನ್ನಿಗೆ ನಿಲ್ಲಲ್ಲ ಎಂದು ಕುಮಾರಸ್ವಾಮಿ ಘೋಷಿಸಿ ಬಿಟ್ಟಿದ್ದಾರೆ. ಅದರ ಮುಂದುವರಿದ ಭಾಗವೇ ನಿಖಿಲ್ ಅವರ ಈ ರೀತಿಯ ರಾಜಕೀಯ ಸನ್ಯಾಸ.
ಇತ್ತೀಚೆಗೆ ಹಾಸನ ವಿಧಾನಸಭೆಗೆ ಭವಾನಿ ರೇವಣ್ಣ (Bhavani Revanna) ಅವರ ಸ್ಪರ್ಧೆಗೆ ದೊಡ್ಡ ಮಟ್ಟದ ಕೂಗು ಕೇಳಿತ್ತು. ಆದರೆ ಹಠ ಬಿಡದೆ ಕುಮಾರಸ್ವಾಮಿ, ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟಿದ್ದರು. ಅತ್ತಿಗೆ ಭವಾನಿ ಅವರಿಗೆ ಟಿಕೆಟ್ ನಿರಾಕರಿಸಿದ್ದರು. ಅಣ್ಣನ ಮಕ್ಕಳಾದ ಪ್ರಜ್ವಲ್ ಮತ್ತು ಸೂರಜ್ ಅವರೂ ಮೊದಲಿಗೆ ಸಿಡಿದರಾದರೂ, ರೇವಣ್ಣ ಅವರು ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿದ್ದರು. ಇದೀಗ ನಿಖಿಲ್ ಅವರ ರಾಜಕೀಯ ವಿಮುಖತೆಯಿಂದ ಕೌಟುಂಬಿಕ ರಾಜಕೀಯದ ಆರೋಪದಿಂದ ಹೊರಗುಳಿಯುವತ್ತ ಜೆಡಿಎಸ್ ಹೆಜ್ಜೆ ಇಟ್ಟಿದೆ.
ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವುದರಿಂದ ಚುನಾವಣಾ ರಾಜಕಾರಣದಿಂದ ಕೆಲ ಸಮಯ ದೂರ ಉಳಿಯುವ ತೀರ್ಮಾನ ಮಾಡಿದ್ದೇನೆ. ಸದ್ಯಕ್ಕೆ ಚಲನಚಿತ್ರವೊಂದರ ಶೂಟಿಂಗ್ ಆರಂಭವಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಲಿ, ಚುನಾವಣಾ ರಾಜಕಾರಣಕ್ಕೆ ಇಳಿಯುವುದಾಗಲಿ ಕಷ್ಟದ ಕೆಲಸ ಎಂದಿರುವ ನಿಖಿಲ್, . ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿ ಕುರಿತಂತೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರ್ಧಾರ ಕೈಗೊಂಡು ಶೀಘ್ರ ಎಲ್ಲರ ಕುತೂಹಲಕ್ಕೆ ತೆರೆ ಎಳೆಯುತ್ತಾರೆ ಎಂದಿದ್ದಾರೆ.



