ಮುಸ್ಲಿಮರನ್ನು, ಮುಸ್ಲಿಂ ಧರ್ಮವನ್ನು ಟೀಕಿಸಬಾರದು. ಅಷ್ಟೇ ಅಲ್ಲ, ಪಾಕಿಸ್ತಾನವನ್ನೂ ಟೀಕಿಸಬಾರದು. ಪಾಕಿಸ್ತಾನ ಒಂದು ಭಯೋತ್ಪಾದಕರ ದೇಶ ಎಂಬುದನ್ನೂ ಹೇಳಬಾರದು. ಹಾಗೆ ಹೇಳಿದ್ರೆ, ನಿಮ್ಮ ದೇಶದ ಸಿನಿಮಾಗಳನ್ನು ನಮ್ಮ ದೇಶದೊಳಕ್ಕೆ ಬಿಟ್ಟುಕೊಳ್ಳಲ್ಲ. ಇಂಥಾದ್ದೊಂದು ಸಂದೇಶವನ್ನು ಗಲ್ಫ್ ಹಾಗೂ ಮುಸ್ಲಿಂ ರಾಷ್ಟ್ರಗಳು ಭಾರತಕ್ಕೆ ರವಾನಿಸುತ್ತಲೇ ಬಂದಿವೆ. ಈಗ ಗಲ್ಫ್ ರಾಷ್ಟ್ರಗಳ ಕೆಂಗಣ್ಣಿಗೆ ಬಿದ್ದಿರೋ ಸಿನಿಮಾದ ಹೆಸರು ಫೈಟರ್. ಅಂದಹಾಗೆ ಈ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿರೋದು ದೀಪಿಕಾ ಪಡುಕೋಣೆ. ದೀಪಿಕಾ ಪಡುಕೋಣೆ ಅತ್ತ ಹಿಂದೂಗಳ ಕೆಂಗಣ್ಣಿಗೂ ಗುರಿಯಾಗಿರುವ ನಟಿ ಎನ್ನುವುದು ಮತ್ತೊಂದು ಸ್ಪೆಷಲ್.
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ಫೈಟರ್ ಸಿನಿಮಾಗೆ ಒಂದಲ್ಲ, ಡಬಲ್ ಶಾಕ್ ಸಿಕ್ಕಿದೆ. ರಿಲೀಸ್ ಆಗುವುದಕ್ಕೂ ಮುನ್ನ ನಡೆದ ಸೆನ್ಸಾರ್ ಪರೀಕ್ಷೆಯಲ್ಲಿಎರಡು ಸೀನ್ʻಗಳಿಗೆ ಕತ್ತರಿ ಬಿದ್ದಿದೆ. ಹೃತಿಕ್ ಮತ್ತು ದೀಪಿಕಾ ಬೋಲ್ಡ್ ಸೆಕ್ಸೀ ದೃಶ್ಯಗಳಿಗೆ ಒಂದು ಕತ್ತರಿ ಹಾಗೂ ನ್ಯೂಸ್ ಓದು್ ದೃಶ್ಯಕ್ಕೆ ಮತ್ತೊಂದು ಕತ್ತರಿ ಬಿದ್ದಿದೆ. ಅಷ್ಟೇ ಅಲ್ಲ, ಇಂಡಿಯಾದಲ್ಲಿ ಆಗಿರೋ ಸೆನ್ಸಾರ್ ಶಾಕ್ ಜೊತೆ, ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆಗೇ ನಿಷೇಧ ಹೇರಲಾಗಿದೆ.
ನಿರ್ಮಾಪಕ ಹಾಗೂ ಸಿನಿಮಾ ಎಕ್ಸ್ಪರ್ಟ್ ಗಿರೀಶ್ ಜೋಹರ್ ಪ್ರಕಾರ ಸಿನಿಮಾದಲ್ಲಿ ಆ್ಯಕ್ಷೇಪಾರ್ಹ ವಿಚಾರ ಇರುವ ಕಾರಣ ತಡೆ ನೀಡಲಾಗಿದೆ. ಫೈಟರ್ ಚಿತ್ರದಲ್ಲಿ ಏರ್ ಸ್ಟ್ರೈಕ್ ಹಾಗೂ ಸರ್ಜಿಕಲ್ ಸ್ಟ್ರೈಕ್ ಸೀನ್ʻಗಳಿವೆ. ಪಾಕಿಸ್ತಾನದ ಭಯೋತ್ಪಾದನೆಯನ್ನು ಸಿನಿಮಾದಲ್ಲಿ ಟೀಕಿಸಲಾಗಿದೆ. ಹೀಗಾಗಿಯೇ ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾಗೆ ನಿಷೇಧ ಹೇರಲಾಗಿದೆ. ಭಾರತೀಯ ವಾಯುಸೇನೆಯ ಶೌರ್ಯ, ಸಾಹಸ ಸಾರುವ ಕತೆಯಲ್ಲಿ ಪಾಕಿಸ್ತಾನಿ ಸೈನ್ಯ ಮತ್ತು ಅಲ್ಲಿನ ರಾಜಕಾರಣಿಗಳನ್ನು ಖಳರಂತೆ, ಕುತಂತ್ರಿಗಳಂತೆ ತೋರಿಸಲಾಗಿದೆ. ಪಾಕಿಸ್ತಾನದೊಟ್ಟಿಗೆ ಬಹುತೇಕ ಗಲ್ಫ್ ರಾಷ್ಟ್ರಗಳು ಬಹುತೇಕ ಸೌಹಾರ್ದ ಸಂಬಂದ ಹೊಂದಿರುವ ಹಿನ್ನೆಲೆಯಲ್ಲಿ ಸಿನಿಮಾವನ್ನು ನಿಷೇಧಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಗಲ್ಫ್ ದೇಶಗಳಾದ ಬಹ್ರೇನ್, ಕುವೈತ್, ಒಮಾನ್, ಖತಾರ್, ಸೌದಿ ಅರೆಬಿಯಾಗಳಲ್ಲಿ ‘ಫೈಟರ್’ ಸಿನಿಮಾದ ಪ್ರದರ್ಶಕ್ಕೆ ನಿಷೇಧ ಹೇರಲಾಗಿದ್ದು, ಭಾರತೀಯರು ಹೆಚ್ಚಿಗಿರುವ ಯುಎಇನಲ್ಲಿ ಪಿಜಿ15 ಪ್ರಮಾಣಪತ್ರದೊಂದಿಗೆ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗಲ್ಫ್ ದೇಶಗಳಲ್ಲಿ ಭಾರತದ ಸಿನಿಮಾಗಳನ್ನು ನಿಷೇಧಿಸುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಿಗೆ ಗಲ್ಫ್ ದೇಶಗಳು ನಿಷೇಧ ಹೇರಿದ್ದವು. ‘ಫೈಟರ್’ ರೀತಿಯ ಕತೆಯ ಕೆಲವು ಅಂಶಗಳನ್ನು ಹೊಂದಿದ್ದ ತಮಿಳಿನ ‘ಬೀಸ್ಟ್’ ಸಿನಿಮಾಕ್ಕೂ ನಿಷೇಧ ಎದುರಾಗಿತ್ತು. ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಮ್’, ದುಲ್ಕರ್ ಸಲ್ಮಾನ್ ನಟನೆಯ ‘ಕುರುಪ್’ ಇತ್ತೀಚೆಗೆ ಗಲ್ಫ್ ದೇಶಗಳಲ್ಲಿ ನಿಷೇಧಕ್ಕೆ ಒಳಗಾದ ಭಾರತದ ಪ್ರಮುಖ ಸಿನಿಮಾಗಳು.
ಸಿದ್ದಾರ್ಥ್ ಆನಂದ್ ಅವರು ‘ಫೈಟರ್’ ಸಿನಿಮಾ ನಿರ್ದೇಶಕ. ಕಳೆದ ವರ್ಷ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ನಿರ್ಮಾಣ ಮಾಡಿ ಗೆಲುವು ಕಂಡಿದ್ದರು. ಈ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಈ ಬಾರಿ ಅವರು ‘ಫೈಟರ್’ ಸಿನಿಮಾ ಮೂಲಕ ಬರುತ್ತಿದ್ದಾರೆ.
ಫೈಟರ್ ಚಿತ್ರಕ್ಕೆ ಭಾರತದಲ್ಲಿ ‘U/A’ ಪ್ರಮಾಣ ಪತ್ರ ನೀಡಲಾಗಿದೆ. ಸಿನಿಮಾಗೆ ಎರಡು ಕಡೆ ಕತ್ತರಿ ಹಾಕುವಂತೆ ಸೂಚಿಸಿದೆ. ಫೈಟರ್ ಸಿನಿಮಾದ ಅವಧಿ 2 ಗಂಟೆ 46 ನಿಮಿಷ ಇದೆ. ಈ ಚಿತ್ರ 3ಡಿಯಲ್ಲೂ ಮೂಡಿ ಬಂದಿದೆ ಅನ್ನೋದು ವಿಶೇಷ. ಹೃತಿಕ್ ದೀಪಿಕಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಕೂಡ ನಟಿಸಿದ್ದಾರೆ.



