ನ್ಯಾಯದೇವತೆ ಎಂದರೆ ಕಣ್ಣಿಗೆ ಬಟ್ಟೆ ಕಟ್ಟಿರುವ, ಕೈಲಿ ಖಡ್ಗ ಹಿಡಿದಿರುವ ಮೂರ್ತಿ. ಆದರೆ ಇದೇ ಮೊದಲ ಬಾರಿಗೆ ನ್ಯಾಯದೇವತೆ ಕಣ್ಣು ಬಿಟ್ಟಿದ್ದಾಳೆ. ಯಾವುದೋ ಸಿನಿಮಾಗಳಲ್ಲಿ ಕಾಲ್ಪನಿಕ ಕ್ರಾಂತಿಕಾರಿ ದೃಶ್ಯವಾಗಿರುತ್ತಿದ್ದ ಕಣ್ಣು ಬಿಟ್ಟ ನ್ಯಾಯದೇವತೆ ಈಗ ನಿಜವಾಗಿಯೂ ಕಣ್ಣು ಬಿಟ್ಟಿದ್ದಾಳೆ. ಈ ಕ್ರಾಂತಿ ಮಾಡಿರುವುದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್.
ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ನ್ಯಾಯದೇವತೆಯ ನೂತನ ಮೂರ್ತಿಯೊಂದನ್ನು ಅಳವಡಿಸಲಾಗಿದೆ. ಆ ಮೂರ್ತಿಯ ವಿಶೇಷತೆ ಎಂದರೆ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಲಾಗಿದೆ. ಕೈಯ್ಯಲ್ಲಿ ಖಡ್ಗದ ಬದಲು ಸಂವಿಧಾನ ಕೊಡಲಾಗಿದೆ. ವಸ್ತ್ರವೂ ಸಹ ಭಾರತೀಯತೆಯನ್ನು ಪ್ರತಿಬಿಂಬಿಸುವಂತಿದೆ.
ಭಾರತವು ವಸಾಹತುಶಾಹಿ ಪರಂಪರೆಯನ್ನು ಕೈಬಿಟ್ಟು ಮುಂದುವರಿಯಬೇಕು. ಕಾನೂನು ಕುರುಡಲ್ಲ ಹಾಗೂ ಅದು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಖಡ್ಗ ಕ್ರೌರ್ಯದ ಸಂಕೇತ. ಹಾಗಾಗಿ ಅದರ ಬದಲು ನ್ಯಾಯದೇವತೆಯ ಕೈಗೆ ಸಂವಿಧಾನವನ್ನು ಕೊಡಲಾಗಿದೆ. ಇದರಿಂದ ನ್ಯಾಯದೇವತೆ ಸಂವಿಧಾನದ ಪ್ರಕಾರವೇ ನ್ಯಾಯ ಮಾಡುತ್ತಾಳೆ ಎಂಬ ಸಂದೇಶ ರವಾನೆಯಾಗುತ್ತದೆ ಎನ್ನುವುದು ಸಿಜೆಐ ಚಂದ್ರಚೂಡ್ ಅವರ ಅಭಿಪ್ರಾಯ.
ಕಣ್ಣಿಗೆ ಬಟ್ಟೆ ಕಟ್ಟಿದ್ದ ನ್ಯಾಯದೇವತೆ ಸಂದೇಶ ಏನಿತ್ತು..?
ನ್ಯಾಯದೇವತೆ ಕೇವಲ ನ್ಯಾಯವನ್ನಷ್ಟೇ ನೋಡುತ್ತಾಳೆ. ಆಕೆ ಸಂಪತ್ತು, ಅಧಿಕಾರ, ಅಥವಾ ಸ್ಥಾನಮಾನಗಳನ್ನು ಸೂಚಿಸುವ ಏನನ್ನೂ ನೋಡುವುದಿಲ್ಲ. ಆಕೆಯ ಕಣ್ಣಿನಲ್ಲಿ ಎಲ್ಲರೂ ಸಮಾನರು. ಇನ್ನು ಕೈಲಿರುವ ಖಡ್ಗ ಅಪರಾಧಿಗಳಿಗೆ ಶಿಕೆ ಕೊಡಿಸುವುದರ ಸಂಕೇತ ಎಂಬ ಸಂದೇಶ ನೀಡುತ್ತಿತ್ತು.
ಈಗ ಕಣ್ಣಿನ ಪಟ್ಟಿ ಬಿಚ್ಚಿರುವುದರ ಸಂದೇಶ ಏನು..?
ನ್ಯಾಯದೇವತೆಯ ಕಣ್ಣ ಪಟ್ಟಿ ಬಿಚ್ಚುವ ಮೂಲಕ ಕಾನೂನು ಕುರುಡಲ್ಲ, ಅದು ಎಲ್ಲರನ್ನೂ ಸಮಾನವಾಗಿ ನೋಡುತ್ತದೆ ಎಂಬ ಸಂದೇಶ ಸಾರಲಾಗಿದೆ. ಅಂತೆಯೇ ಖಡ್ಗದ ಬದಲು ಸಂವಿಧಾನ ಕೊಡುವ ಮೂಲಕ, ಆಕೆ ಕ್ರೌರ್ಯವನ್ನು ಬೆಂಬಲಿಸುವುದಿಲ್ಲ. ಬದಲಿಗೆ ಸಂವಿಧಾನಕ್ಕೆ ಅನುಗುಣವಾಗಿ ನ್ಯಾಯ ಮಾಡುತ್ತಾಳೆ ಎಂಬುದನ್ನು ಸೂಚಿಸಲಾಗಿದೆ.
ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನಷ್ಟೇ ತೆಗೆಯಲಾಗಿದ್ದು, ತಕ್ಕಡಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ತಕ್ಕಡಿಯನ್ನು ಇಟ್ಟುಕೊಂಡಿರುವುದರಿಂದ ಎರಡೂ ಕಡೆಯ ವಾದಗಳನ್ನೂ ಯಾವುದೇ ಪೂರ್ವಗ್ರಹವಿಲ್ಲದೆ ಆಲಿಸುತ್ತದೆ ಎಂಬ ಸಂದೇಶವನ್ನೂ ನೀಡುತ್ತಿದ. ಹೀಗಾಗಿ ಆ ತಕ್ಕಡಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನು ನ್ಯಾಯದೇವತೆಯ ಉಡುಪು ಬದಲಾಗಿದೆ. ಇದುವರೆಗೆ ನ್ಯಾಯದೇವತೆ ವಿದೇಶಿ ವಸ್ತ್ರವಿನ್ಯಾಸದಲ್ಲಿದ್ದದ್ದನ್ನು ತೆಗೆದು, ಭಾರತೀಯ ವಸ್ತ್ರದಲ್ಲಿ ರೂಪಿಸಲಾಗಿದೆ. ಆದರೆ ಇದು ದೇಶದ ಎಲ್ಲ ನ್ಯಾಯಾಲಯಗಳಲ್ಲಿ ಬಂದಿಲ್ಲ. ಸದ್ಯಕ್ಕೆ ಇದು ಸುಪ್ರೀಂಕೋರ್ಟ್ ಲೈಬ್ರರಿಯಲ್ಲಿ ಮಾತ್ರ ಚಾಲ್ತಿಯಲ್ಲಿದೆ. ಸುಪ್ರೀಂಕೋರ್ಟ್ ಅಂಗಳದಲ್ಲಿಯಾಗಲೀ, ಕೋರ್ಟ್ ಕಲಾಪದಲ್ಲಿಯಾಗಲೀ ಇಲ್ಲ. ಬಹುಶಃ ಮುಂದಿನ ದಿನಗಗಳಲ್ಲಿ ದೇಶದ ಎಲ್ಲ ನ್ಯಾಯಾಲಯಗಳಲ್ಲಿಯೂ ಇದೇ ಮೂರ್ತಿ ಅಳವಡಿಸಿಕೊಳ್ಳುವ ದಿನಗಳು ಬಂದರೂ ಆಶ್ಚರ್ಯವಿಲ್ಲ.
ಈ ರೀತಿಯ ಬದಲಾವಣೆಯನ್ನು ಭಾರತೀಯರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಪರಿಶೀಲನೆ ಮಾಡುವುದಕ್ಕೆಂದೇ ಆರಂಭದಲ್ಲಿ ಲೈಬ್ರರಿಯಲ್ಲಿ ಮೂರ್ತಿ ಬದಲಾವಣೆ ಮಾಡಲಾಗಿದೆ ಎನ್ನವುದು ಕೆಲವರ ವಾದ. ಒಟ್ಟಿನಲ್ಲಿ ಬ್ರಿಟಿಷರ ಕಾಲದ ಒಂದೊಂದೇ ಪಳೆಯುಳಿಕೆಗಳನ್ನು ತೆಗೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇತ್ತೀಚೆಗೆ ಇಂಡಿಯನ್ ಪೀನಲ್ ಕೋಡ್ ತೆಗೆದು ಹಾಕಿ, ಭಾರತೀಯ ನ್ಯಾಯ ಸಂಹಿತೆ ಜಾರಿಗೆ ತರಲಾಗಿತ್ತು. ಇದೀಗ ನ್ಯಾಯದೇವತೆಯ ಸರದಿ.



