ಚಿತ್ರರಂಗಕ್ಕೆ ಬಂದವರು ರಾಜಕೀಯ ಬಿಡ್ತಾರೆ. ರಾಜಕೀಯಕ್ಕೆ ಬಂದವರು ಸಿನಿಮಾ ಇಂಡಸ್ಟ್ರಿ ಮರೀತಾರೆ. ಅದು ಮತ್ತೊಮ್ಮೆ ಸಾಬೀತಾಗಿದೆ. ಜೆಡಿಎಸ್ ನಾಯಕರೂ ಆಗಿರುವ ನಿಖಿಲ್ ಕುಮಾರಸ್ವಾಮಿ, ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಎರಡನ್ನೂ ಬ್ಯಾಲೆನ್ಸ್ ಮಾಡಲು ಹೊರಟವರು ಮೀಡಿಯಂ ರಾಜಕಾರಣಿಯಾಗುತ್ತಾರೆಯೇ ಹೊರತು, ದೊಡ್ಡ ನಾಯಕರಾಗಿ ಬೆಳೆಯವುದಿಲ್ಲ. ಸ್ಟಾರ್ ಹೀರೋ ಆಗುವುದೂ ಇಲ್ಲ. ಸದ್ಯಕ್ಕೆ ನಿಖಿಲ್ ಪೊಲಿಟಿಕಲ್ ಸ್ಟಾರ್ ಆಗಲು ಹೊರಟಿದ್ಧಾರೆ.
2016ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಅವರಿಗೆ ದೊಡ್ಡ ಗೆಲುವು ಎಂದು ಸಿಕ್ಕಲಿಲ್ಲ. ಹಾಗಂತ ಸಿನಿಮಾಗಳು ಹೀನಾಯವಾಗಿ ಸೋಲಲೂ ಇಲ್ಲ. ಆದರೆ, 8 ವರ್ಷಗಳಲ್ಲಿ ನಟಿಸಿದ್ದು ಕೇವಲ 4 ಸಿನಿಮಾ. ಇನ್ನೊಂದೆರಡು ಸಿನಿಮಾ ಸೆಟ್ಟೇರಲಿವೆ ಎಂಬ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸಿನಿಮಾದಿಂದ ದೂರ ಸರಿದಿದ್ದಾರೆ ನಿಖಿಲ್.
ನನಗೆ ರಾಜ್ಯದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ಧಾರೆ. ಪಕ್ಷದ ವರಿಷ್ಠರ ಸೂಚನೆಯನ್ನು ಪಾಲಿಸಬೇಕಿದೆ. ಹೀಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಸಿನಿಮಾ ಮಾಡುವ ಬಗ್ಗೆ ಸದ್ಯಕ್ಕೆ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ ನಿಖಿಲ್.
ನಿಖಿಲ್ ಇದುವರೆಗೆ ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಹಾಗೂ ರೈಡರ್ ಚಿತ್ರಗಳಲ್ಲಿ ನಟಿಸಿದ್ಧಾರೆ. ಚಿತ್ರೀಕರಣದ ಹಂತದಲ್ಲಿದ್ದ ಯದುವೀರ ಸಿನಿಮಾ ತೆರೆ ಕಾಣುವುದಿಲ್ಲ. ನಟಿಸಿದ ಎಲ್ಲ ಚಿತ್ರಗಳಲ್ಲಿ ಇಂಪ್ರೂವ್ʻಮೆಂಟ್ ತೋರಿಸಿದ್ದ ನಟ ನಿಖಿಲ್. ಚಿತ್ರರಂಗದಿಂದ ಹೊರ ನಡೆದಿದ್ದಾರೆ.
ನಿಖಿಲ್ ಅವರಿಗೆ ರಾಜಕೀಯದಲ್ಲಿಯೂ ಅಷ್ಟೆ, ಗೆಲುವು ಸಿಕ್ಕಿಲ್ಲ. ಲೋಕಸಭೆ ಚುನಾವಣೆಯಲ್ಲಿ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ಧಾರೆ. ಮುಂದಿನ ಭವಿಷ್ಯವನ್ನು ರಾಜಕೀಯದಲ್ಲಿಯೇ ಹುಡುಕುವ ನಿರ್ಧಾರ ಮಾಡಿದ್ಧಾರೆ.
ನಿಖಿಲ್ ಅವರಿಗೆ ರಾಜಕೀಯದಲ್ಲಿ ಸಿನಿಮಾ ರಂಗಕ್ಕಿಂತಲೂ ದೊಡ್ಡ ಸವಾಲುಗಳಿವೆ. ಹಾಗೆ ನೋಡಿದರೆ, ನಿಖಿಲ್ ಅವರ ನಟನಾ ಚಾತುರ್ಯಕ್ಕೆ ಚಿತ್ರರಂಗದಲ್ಲಿ ದೊಡ್ಡ ಅವಕಾಶಗಳಿದ್ದವು. ಕನ್ನಡದಲ್ಲಿ ಹೀರೋಗಳ ಕೊರತೆ ಇದೆ. ಆಕ್ಟಿಂಗ್ ಬರುವ ಹೊಸ ಹೀರೋಗಳು ಹುಟ್ಟುತ್ತಿಲ್ಲ. ಸ್ಟಾರ್ ಆಗುವ ತಾಕತ್ತಿರುವವರೂ ಬರುತ್ತಿಲ್ಲ. ಆದರೆ ನಿಖಿಲ್ ಅವರಿಗೆ ಕುಮಾರಸ್ವಾಮಿ ಅವರ ಮಗ ಎನ್ನುವ ಕಾರಣಕ್ಕೆ ಒಂದು ಲೆವೆಲ್ಲಿನ ಸ್ಟಾರ್ ಪಟ್ಟ ದಕ್ಕಿದ್ದು ಸತ್ಯ.
ಆದರೆ, ರಾಜಕೀಯದಲ್ಲಿಯೇ ದೊಡ್ಡ ಸವಾಲು. ಏಕೆಂದರೆ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಅವರ ಜೆಡಿಎಸ್, ಕೇವಲ 19 ಸ್ಥಾನಗಳಿಗೆ ಕುಸಿದಿದೆ. ನಿಖಿಲ್ ಅವರ ಸೋದರ ಪ್ರಜ್ವಲ್, ಹೀನಾಯ ಪ್ರಕರಣದಲ್ಲಿ ಸಿಲುಕಿದ್ಧಾರೆ. ಅದು ಪಕ್ಷಕ್ಕೂ ದೊಡ್ಡ ಹಿನ್ನಡೆ.
ಜೆಡಿಎಸ್ ಈಗಿರುವ ಸ್ಥಿತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಎನ್ನುವುದು ಹಾಗೂ ಗೆಲ್ಲುವುದು ಸುಲಭದ ವಿಷಯವಲ್ಲ. ಹೀಗಿರುವಾಗಲೇ ನಿಖಿಲ್, ಸುಲಭವಾದ ಹಾದಿಯನ್ನು ಬಿಟ್ಟು, ಕಷ್ಟದ ಹಾದಿಯನ್ನೇ ಆಯ್ಕೆ ಮಾಡಿಕೊಂಡಿದ್ಧಾರೆ.



