ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಬಿಜೆಪಿ ಶಿಸ್ತುಕ್ರಮ ಕೈಗೊಳ್ಳುತ್ತೆ. ನೋಟಿಸ್ ಕೊಟ್ಟಿದ್ಯಲ್ಲ, ಮಿಕ್ಕಿದ್ದನ್ನೆಲ್ಲ ಬಿಜೆಪಿ ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದು ವಾದಿಸುತ್ತಿರುವವರಿಗೆ ಒಂದು ಶಾಕಿಂಗ್ ಏನೆಂದರೆ ಯತ್ನಾಳ್ ವಿರುದ್ಧ ಯಾವ ಕ್ರಮವೂ ಇಲ್ಲ ಎನ್ನುವುದು. ಇಂಥಾದ್ದೊಂದು ನಿರ್ಣಯ ಕೈಗೊಳ್ಳಲಾಗಿದ್ದು, ಸುಮ್ಮನಿರಿ, ಹಾಗೆಲ್ಲ ಮಾತನಾಡಬೇಡಿ ಎಂದು ಪ್ರೀತಿಯಿಂದ ಹೇಳಿ ಕಳಿಸಿದ್ಯಂತೆ ಹೈಕಮಾಂಡ್.
ಯತ್ನಾಳ್ ಅವರು ಜಗದಂಬಿಕಾ ಪಾಲ್ ಅವರನ್ನು ಭೇಟಿ ಮಾಡಿದ್ದರೂ, ಅವರಿಗೆ ತಾವು ಹಾಗೂ ತಮ್ಮ ತಂಡ ತಯಾರು ಮಾಡಿದ್ದ ವಕ್ಫ್ ವಿರೋಧಿ ಹೋರಾಟದ ದಾಖಲೆಗಳನ್ನಷ್ಟೇ ಕೊಟ್ಟಿದ್ದಾರೆ. ಅದರ ಹೊರತಾಗಿ ವಿಜಯೇಂದ್ರ ಪ್ರಕರಣದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗಿದೆ. ಏಕೆಂದರೆ ಜಗದಂಬಿಕಾ ಪಾಲ್ ಅವರಿಗೆ ಕರ್ನಾಟಕ ಬಿಜೆಪಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಅಧಿಕಾರ ಇಲ್ಲ. ಇನ್ನು ಕ್ರಮ ತೆಗೆದುಕೊಳ್ಳಬೇಕಾದ, ಬೆಂಗಳೂರಿಗೆ ಬಂದಿದ್ದ ತರುಣ್ ಚುಗ್, ಮನವಿ ಪತ್ರವನ್ನೂ ಸ್ವೀಕಾರ ಮಾಡಿಲ್ಲ.
ಪಕ್ಷದ ನಾಯಕರ ವಿರುದ್ದವೇ ಹೇಳಿಕೆ ನೀಡುತ್ತಿರುವ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಒತ್ತಾಯಿಸಿರುವ ಬಿಜೆಪಿಯ 2 ಸಂಘಟನಾ ಜಿಲ್ಲೆಗಳ ಅಧ್ಯಕ್ಷರ ಮನವಿಯನ್ನೇ ಸ್ವೀಕರಿಸುವುದಕ್ಕೆ ಹಿಂದೆ ಮುಂದೆ ನೋಡಿ, ಒತ್ತಾಯಿಸಿದ ಮೇಲೆ ಸ್ವೀಕಾರ ಮಾಡಲಾಗಿದೆ. ಪಕ್ಷದ 32 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಸಹಿ ಒಳಗೊಂಡ ಮನವಿ ಪತ್ರವನ್ನೂ ತರುಣ್ ಅವರಿಗೆ ಸಲ್ಲಿಸಲಾಗಿದೆ. ಇದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸುವುದಾಗಿ ಅವರು ಭರವಸೆಯನ್ನೂ ನೀಡಿದ್ದಾರಂತೆ.
‘ಸಂಘಟನಾ ಪರ್ವ’ ಸಭೆಯಲ್ಲಿ ಪಕ್ಷದ ಸಂಘಟನೆ ಬಗ್ಗೆ ತರುಣ್ ಅವರು ತಮ್ಮ ಮಾತು ಮುಗಿಸಿ ಇನ್ನೇನಾದರೂ ಇದ್ದರೆ ಹೇಳಿ ಎಂದು ಔಪಚಾರಿಕವಾಗಿ ಹೇಳಿದಾಗ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಸೇರಿ ಹಲವು ಮುಖಂಡರು ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ್ದಾರಂತೆ. ಶಿಸ್ತಿನ ಪಕ್ಷ ಎಂದು ಹೆಸರಾಗಿದ್ದ ಬಿಜೆಪಿಯಲ್ಲಿ ಈಗ ಅಶಿಸ್ತು ತಾಂಡವವಾಡುತ್ತಿದೆ. ಬಸನಗೌಡ ಪಾಟೀಲ ಯತ್ನಾಳ್ ಸೇರಿ ಕೆಲವರು ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ನಮ್ಮ ಪಕ್ಷ ಮತ್ತು ನಾಯಕರನ್ನು ಬಯ್ಯುತ್ತಿದ್ದಾರೆ. ಅವರ ಅಸಮಾಧಾನ ಏನೇ ಇದ್ದರೂ ಅದನ್ನು ಪಕ್ಷದ ವೇದಿಕೆಗಳಲ್ಲಿ ಪ್ರಸ್ತಾಪಿಸಬೇಕು. ನಾವು ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದಲ್ಲಿ ಹೋದಾಗ ಕಾರ್ಯಕರ್ತರು ಮತ್ತು ಜನ ಇತ್ತೀಚಿನ ಭಿನ್ನಾಭಿಪ್ರಾಯಗಳ ಬಗ್ಗೆ ಕೇಳುತ್ತಿದ್ದಾರೆ. ನಮಗೆ ಮುಜುಗರವಾಗುತ್ತಿದೆ. ಇದನ್ನು ಸರಿ ಮಾಡಿ. ಇಲ್ಲವೇ ಅಂಥವರ ವಿರುದ್ಧ ಕ್ರಮ ಜರುಗಿಸಿ ಎಂದು ಹಲವರು ಒತ್ತಾಯಿಸಿದರಂತೆ.
ಇದಕ್ಕೆ ಪ್ರತಿಕ್ರಿಯಿಸಿದ ತರುಣ್, ನಾನು ಸಂಘಟನೆ ವಿಷಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಆಗಮಿಸಿದ್ದೇನೆ. ನಿಮ್ಮ ಅಭಿಪ್ರಾಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸುತ್ತೇನೆ ಎಂದು ಹೇಳಿದ್ಧಾರೆ. ಇದಾದ ಬಳಿಕ 32 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಸಹಿ ಒಳಗೊಂಡ ಪತ್ರ ನೀಡಲು ಕೆಲ ಜಿಲ್ಲಾಧ್ಯಕ್ಷರು ತೆರಳಿದಾಗ, ತರುಣ್ ಅವರು ಆ ಪತ್ರ ಸ್ವೀಕರಿಸಲು ಆರಂಭದಲ್ಲಿ ಹಿಂದೇಟು ಹಾಕಿದ್ದಾರೆ. ಕೊನೆಗೆ ಒತ್ತಾಯ ಮಾಡಿದ ಬಳಿಕ ಸ್ವೀಕರಿಸಿ ವರಿಷ್ಠರ ಗಮನಕ್ಕೆ ತಲುಪಿಸುವೆ ಎಂದು ಹೇಳಿದರು ಎನ್ನಲಾಗಿದೆ. ಒಟ್ಟಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರೂ ಅತ್ತೂಕರೆದು ಔತಣ ಕೊಟ್ಟಂತೆ ಕೊನೆಗೂ ದೂರು ಕೊಟ್ಟಿದ್ದಾರಷ್ಟೇ. ಶಿಸ್ತು ಕ್ರಮದ ಯಾವ ಭರವಸೆಯನ್ನೂ ನೀಡಿಲ್ಲ.
ಇದೇ ತಿಂಗಳ 7ರಂದು ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ ಬೆಂಗಳೂರಿಗೆ ಆಗಮಿಸಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಆಗ ಈ ಬಗ್ಗೆ ಚರ್ಚಿಸಿ ಎಂದು ಸಲಹೆ ನೀಡಿ ಎಂದು ತರುಣ್ ಚುಗ್ ಹೇಳಿದ್ದಾರಂತೆ. ಒಟ್ಟಿನಲ್ಲಿ ಯತ್ನಾಳ್ ಮತ್ತವರ ಬೆಂಬಲಿಗರು ದೆಹಲಿಗೆ ಹೋಗಿಯೂ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಹೈಕಮಾಂಡ್ ಕೃಪಾಕಟಾಕ್ಷ ಇಲ್ಲದೆ ಯತ್ನಾಳ್ ಹೀಗೆಲ್ಲ ಮಾತನಾಡುವುದಕ್ಕೆ ಸಾಧ್ಯವಿಲ್ಲ.



