ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳಿವೆ. ರಾಜ್ಯಾಧ್ಯಕ್ಷರಾಗಿದ್ದರೂ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಒಂದು ಬಣ ಎದ್ದಿದ್ದು, ಅದನ್ನು ಕಂಟ್ರೋಲ್ ಮಾಡುವುದಕ್ಕೆ ವಿಜಯೇಂದ್ರ ಅವರಿಂದ ಆಗುತ್ತಿಲ್ಲ. ಯತ್ನಾಳ್ ಬಣದಲ್ಲಿರುವವರು ಅವರು, ಅವರೊಂದಿಗೆ ರಮೇಶ್ ಜಾರಕಿಹೊಳಿ, ಪ್ರತಾಪ್ ಸಿಂಹ, ಸಿಟಿ ರವಿ (ವಿಧಾನಪರಿಷತ್ ಪ್ರತಿಪಕ್ಷ ನಾಯಕರಾಗಿದ್ದರೂ, ಅವರೀಗ ಯತ್ನಾಳ್ ಬಣ), ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಸಿದ್ದೇಶ್ವರ.. ಮೊದಲಾದವರಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯಾಧ್ಯಕ್ಷ ಪಟ್ಟ ಇದ್ದರೂ, ಇಲ್ಲದಂತಿರುವುದು ವಿಜಯೇಂದ್ರ.
ಲೋಕಸಭೆಯಲ್ಲಿ ಬಿಜೆಪಿ ಒಳ್ಳೆಯ ಫಲಿತಾಂಶ ದಾಖಲಿಸಿದ್ದರೂ, ಅದರ ಕ್ರೆಡಿಟ್ ಮೋದಿಯವರದ್ದೇ ಹೊರತು, ವಿಜಯೇಂದ್ರನದ್ದಲ್ಲ ಎನ್ನುವ ಯತ್ನಾಳ್ ಬಣದ ನಾಯಕರು ಡಿಸೆಂಬರ್ ಅಥವಾ ಜನವರಿಯಲ್ಲಿ ಏನಾದ್ರೂ ನಿರ್ಣಯ ಆಗುತ್ತೆ ವಿಜಯೇಂದ್ರ ಇರುವವರೆಗೂ ನಾನು ಪ್ರಚಾರಕ್ಕೆ ಹೋಗಲ್ಲ. ವಿಜಯೇಂದ್ರ ಅಧ್ಯಕ್ಷ ಎಂದು ಒಪ್ಪಿಲ್ಲ, ಒಪ್ಪುವುದಿಲ್ಲ. ಅವರ ಸ್ಥಾನಮಾನದ ಕೆಲಸಕ್ಕೆ ನಾನು ವಿರೋಧ ಮಾಡಿಲ್ಲ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವರಿಷ್ಠರು ತೀರ್ಮಾನಿಸುತ್ತಾರೆ. ಬಹಿರಂಗವಾಗಿ ನಾನು ಕೆಲವೊಂದು ವಿಷಯಗಳನ್ನ ಹೇಳಲ್ಲ ಎನ್ನುತ್ತಾರೆ. ಈ ಮಾತನ್ನು ಬಹಿರಂಗವಾಗಿ ಹೇಳುವುದು ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಮಾತ್ರ. ಉಳಿದವರದ್ದು ಹಿಮ್ಮೇಳ.
ಹಾಗಾದರೆ, ಇಂತಹವರ ವಿರುದ್ಧ ರಾಜ್ಯಾಧ್ಯಕ್ಷರಾಗಿಯೂ ಸೈಲೆಂಟ್ ಆಗಿರೋದ್ಯಾಕೆ ಎಂಬ ಪ್ರಶ್ನೆಗೆ ವಿಜಯೇಂದ್ರ ಟಿವಿ9 ಸಂದರ್ಶನದಲ್ಲಿ ಉತ್ತರ ಕೊಟ್ಟಿದ್ದಾರೆ. ವಿಜಯೇಂದ್ರ ಅವರು ತಮ್ಮ ವಿರುದ್ಧದ ಹೊಂದಾಣಿಕೆ ರಾಜಕೀಯಕ್ಕೆ ಮೊದಲು ಉತ್ತರ ಕೊಟ್ಟು, ನಂತರ ಯತ್ನಾಳ್ ವಿರುದ್ಧ ಏಕೆ ಆಕ್ಷನ್ ಇಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಹಗರಣದ ಅತಿ ದೊಡ್ಡ ಹೋರಾಟ ನಡೆದಿದ್ದು ನನ್ನ ನೇತೃತ್ವದಲ್ಲಿಯೇ. ಅದಕ್ಕೂ ಕೆಲವರು ಕಲ್ಲು ಹಾಕೋ ಪ್ರಯತ್ನ ಮಾಡಿದರು. ಈಗ ಸಿದ್ದರಾಮಯ್ಯ ಒಂಟಿಗಾಲ ಮೇಲೆ ನಿಲ್ಲುವಂತಾಗಿದೆ. ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದರೆ ಇದೆಲ್ಲ ಆಗುತ್ತಿರಲಿಲ್ಲ ಎನ್ನುವ ವಿಜಯೇಂದ್ರ ತಮಗೆ ಯತ್ನಾಳ್ ವಿರುದ್ಧ ಬೇಸರ ಇದೆ ಅನ್ನೋದನ್ನ ಒಪ್ಪಿಕೊಳ್ತಾರೆ. ಆದರೆ ಯತ್ನಾಳ್ ವಿರುದ್ಧ ಆಕ್ಷನ್ ತೆಗೆದುಕೊಳ್ಳೋಕೆ ನಾನು ರಾಜ್ಯಾಧ್ಯಕ್ಷನಾಗಿಲ್ಲ. ನನ್ನ ಕೆಲಸ ಪಕ್ಷವನ್ನು ಸಂಘಟಿಸುವುದು, ಬಲಿಷ್ಠವನ್ನಾಗಿ ಮಾಡುವುದು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಗೆದ್ದೂ ಇದ್ದೇನೆ ಎಂದಿದ್ದಾರೆ.
ಹಾಗಾದರೆ ಯತ್ನಾಳ್ ಅವರ ವಿರುದ್ಧ ಕ್ರಮ ಇಲ್ಲವೇ ಎಂಬ ಪ್ರಶ್ನೆಗೆ ಅದು ಹೈಕಮಾಂಡ್ ಮಾಡಬೇಕಿರುವ ಕೆಲಸ. ಅವರೂ ಕೂಡಾ ಎಲ್ಲವನ್ನೂ ಗಮನಿಸುತ್ತಾ ಇರುತ್ತಾರಲ್ಲವೇ ಎಂದು ಮರುಪ್ರಶ್ನೆ ಹಾಕಿದ್ದಾರೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗಳು ನಡೆಯುತ್ತಲೆ ಇವೆ. ವಿಜಯೇಂದ್ರ ವಿರೋಧಿ ಬಣ ಮತ್ತಷ್ಟು ಬಲಿಷ್ಠವಾಗುತ್ತಲೇ ಹೋಗುತ್ತಿದೆ.
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಇನ್ನಿಲ್ಲದ ಕಸರತ್ತು ನಡೆಯುತ್ತಲೆ ಇವೆ. ಈಗಾಗಲೇ ಹಲವು ಸಭೆಗಳನ್ನು ಮಾಡಿ ತಮ್ಮ ಬೇಡಿಕೆಯನ್ನು ಹೈಕಮಾಂಡ್‌ಗೆ ರವಾನಿಸಲಾಗಿದೆ. ಹೀಗಾಗಿ ಡಿಸೆಂಬರ್ ಅಥವಾ ಜನವರಿಯಲ್ಲಿ ವಿಜಯೇಂದ್ರ ಬದಲಾವಣೆಯಾಗುತ್ತೆ ಎನ್ನುವ ಚರ್ಚೆಗಳು ನಡೆದಿವೆ.
ಆದರೆ ಸ್ವತಃ ಸೋತಿರುವ, ತಮ್ಮ ಸ್ವಂತ ಕ್ಷೇತ್ರದಲ್ಲೇ ಲೀಡ್ ಕೊಡಿಸುವುದಕ್ಕೆ ಆಗದ ನಾಯಕರ ಮಾತನ್ನು ಹೈಕಮಾಂಡ್ ಕೇಳೋದಿಲ್ಲ ಎನ್ನುವುದು ವಿಜಯೇಂದ್ರ ಪಡೆಯ ವಿಶ್ವಾಸ. ಏಕೆಂದರೆ ಯತ್ನಾಳ್ ಬಣದ ನಾಯಕರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಟೀಕಿಸುವ ಭರದಲ್ಲಿ ಹೈಕಮಾಂಡ್ ನಾಯಕರು ದುಡ್ಡು ತಗೊಂಡಿದ್ದಾರೆ ಎಂಬರ್ಥದಲ್ಲಿ ಮಾತನಾಡಿದ್ಧಾರೆ. ಆದರೆ ಈ ನಾಯಕರ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಲೆ ಪ್ರಬಲವಾಗಿದೆ.



