ಕನ್ನಡ ಹೋರಾಟಗಾರರ (kannada fighters) ಆಕ್ರೋಶಕ್ಕೆ ಸರ್ಕಾರಗಳು ನಡುಗುತ್ತವೆ. ಸಹಜವಾಗಿಯೇ ಟಿವಿ ಚಾನೆಲ್ಲುಗಳೂ ಅದಕ್ಕೆ ಹೊರತಲ್ಲ. ಈಗ ಹೆದರುವ ಸರದಿ ಕನ್ನಡದ ನಂ.1 ಕನ್ನಡ ಚಾನೆಲ್ ಝೀ ಕನ್ನಡದ್ದು (Zee Kannada Channel). ಹೋರಾಟಗಾರರು ಆಕ್ರೋಶಕ್ಕೆ ಕಿಚ್ಚಿಗೆ ರೊಚ್ಚಿಗೆ ಶರಣಾಗಿದೆ ಝೀ ಕನ್ನಡ ಟಿವಿ.
ಭೂಮಿಗೆ ಬಂದ ಭಗವಂತ. ಝೀ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಒಂದು. ನವೀನ್ ಕೃಷ್ಣ ಅವರು ಪ್ರಧಾನವಾಗಿ ನಟಿಸಿರುವ ಧಾರಾವಾಹಿ ಅತ್ತ ಅಪ್ಪಟ ದೈವಭಕ್ತರನ್ನೂ, ಇತ್ತ ಮೂಢನಂಬಿಕೆ ವಿರೋಧಿಗಳನ್ನೂ ಮೆಚ್ಚಿಸಿಕೊಂಡು ಗೆದ್ದಿರುವ ಧಾರಾವಾಹಿ. ಇಂತಹ ಧಾರಾವಾಹಿಯ ಒಂದು ಎಪಿಸೋಡ್‌ನ್ನು ಡಿಲೀಟ್ ಮಾಡಿದೆ ಝೀ ಕನ್ನಡ ಟಿವಿ. ಅದಕ್ಕೆ ಕಾರಣ ಆ ಎಪಿಸೋಡಿನಲ್ಲಿ ಕನ್ನಡ ಪರ ಹೋರಾಟಗಾರರನ್ನು ಗೂಂಡಾಗಳಂತೆ ಚಿತ್ರಿಸಲಾಗಿದೆ ಎಂಬ ಆರೋಪ.
ವಿವಾದವಾಗಿದ್ದಾದರೂ ಏನು..?
ಕನ್ನಡದ ಮಹತ್ವ ಸಾರುವ ಎಪಿಸೋಡುಗಳನ್ನು ಭೂಮಿಗೆ ಬಂದ ಭಗವಂತ (Bhoomige Banda Bhagavanta) ಧಾರಾವಾಹಿಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ಎಪಿಸೋಡುಗಳಲ್ಲಿ ಎಲ್ಲರಿಗೂ ಸಹ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಭಗವಂತ ದತ್ತ ಮೇಷ್ಟ್ರಾಗಿದ್ದಾರೆ. ಶಿವಪ್ರಸಾದ್ ಸಹ ತನ್ನ ಮಗನಿಗೆ ಕನ್ನಡದಲ್ಲಿ ಪ್ರತಿಯೊಂದು ಹೇಳಿಕೊಡುವ ಕೆಲಸವನ್ನ ಮಾಡುತ್ತಾ ಇದ್ದಾರೆ ನಮ್ಮ ಸುತ್ತಮುತ್ತ ಪ್ರತಿಭಟನೆಗಳು ನಡೆಯುವ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ ಎಂಬೆಲ್ಲಾ ಕಥೆಯನ್ನು ಹೇಳಲಾಗಿತ್ತು. ಈ ಎಪಿಸೋಡಿನಲ್ಲಿ ಶಿವಪ್ರಸಾದ್ ಮನೆ ಎದುರು ಇಂಗ್ಲಿಷಿನಲ್ಲಿ ಬೋರ್ಡ್ ಹಾಕುವ ಟೈಲರ್ ವಿರುದ್ಧ ಕನ್ನಡ ಸಂಘಟನೆಗಳು ಪ್ರತಿಭಟನೆ ಮಾಡುತ್ತವೆ. ಅಂಗಡಿ ಬೋರ್ಡಿಗೆ, ಟೈಲರಿಗೆ ಮಸಿ ಬಳಿಯುವ ಕೆಲಸಕ್ಕೆ ಕೈಹಾಕುತ್ತಾರೆ. ಆಗ ಶಿವಪ್ರಸಾದ್ ಭಗವಂತನ ಮೂಲಕ ಮಸಿ ಬಳಿಯುವುದನ್ನು ತಪ್ಪಿಸುವಂತೆ ಬೇಡಿ ಕೊಳ್ಳುತ್ತಾರೆ. ಆಗ ಭಗವಂತ ಕನ್ನಡ ಹೋರಾಟಗಾರರಿಗೆ ವ್ಯಾಕರಣ, ಕನ್ನಡದ ಮಹತ್ವ ಇತ್ಯಾದಿ ಪ್ರಶ್ನೆ ಮಾಡಿ ಮೊದಲು ಕನ್ನಡವನ್ನು ಚೆನ್ನಾಗಿ ಕಲಿಯೋಣ, ಕನ್ನಡವನ್ನು ಪ್ರೀತಿಯಿಂದ ಕಲಿಸೋಣ, ದ್ವೇಷದಿಂದ ಅಲ್ಲ ಎಂದು ಕನ್ನಡ ಹೋರಾಟಗಾರರಿಗೆ ತಿಳಿ ಹೇಳುವ ಕಥೆ ಎಪಿಸೋಡಿನಲ್ಲಿತ್ತು. ಆದರೆ ಕನ್ನಡ ಹೋರಾಟಗಾರರನ್ನು ಗೂಂಡಾಗಳಂತೆ, ಕನ್ನಡವೇ ಗೊತ್ತಿಲ್ಲದವರಂತೆ ಚಿತ್ರಿಸಲಾಗಿದೆ ಎಂದು ಆರೋಪಿಸಿ ಕನ್ನಡ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ನಡೆಸಿದ್ದವು. ಕೊನೆಗೆ ಝೀ ಕನ್ನಡ ಈಗ ಆ ಎಪಿಸೋಡ್ʻನ್ನೇ ತೆಗೆದು ಹಾಕಿದೆ.


ಇದೀಗ ಝೀ ಕನ್ನಡ, ಭೂಮಿಗೆ ಬಂದ ಭಗವಂತ ಧಾರಾವಾಹಿಯ ಪರ, ನವೀನ್ ಕೃಷ್ಣ ಅವರ ಪರ ಒಂದು ವಾದ ಕೇಳಿ ಬರುತ್ತಿದೆ. ಕನ್ನಡವನ್ನು ಪ್ರೀತಿಯಿಂದ ಕಲಿಸಿ ಎನ್ನುವುದರಲ್ಲಿ ಏನು ತಪ್ಪಿದೆ. ಕನ್ನಡ ಹೋರಾಟಗಾರರು ಗೂಂಡಾಗಳಂತೆಯೇ ವರ್ತಿಸುತ್ತಿದ್ದಾರೆ ಎನ್ನುವುದಾಗಿ ಕೆಲವರು ಆರೋಪಿಸುತ್ತಿದ್ದರೆ, ಇನ್ನೂ ಕೆಲವರು ಕನ್ನಡ ಸಂಘಟನೆಗಳೇ ಇಲ್ಲದೆ ಹೋಗಿದ್ದರೆ ಇವತ್ತು ಬೆಂಗಳೂರಿನಲ್ಲಿ ಕನ್ನಡವನ್ನು ಬೂದುಗನ್ನಡಿಯಲ್ಲಿ ಹಾಕಿಕೊಂಡು ಹುಡುಕಬೇಕಿತ್ತು. ಕನ್ನಡ ಮಾಯವಾಗಿ ಯಾವುದೋ ಕಾಲವಾಗಿರುತ್ತಿತ್ತು ಎನ್ನುತ್ತಿದ್ಧಾರೆ.



