ಚಂದನ್ ಶೆಟ್ಟಿ ನಿವೇದಿತಾ ಡೈವೋರ್ಸ್ : ಮಕ್ಕಳ ಬಯಕೆ ಕಾರಣವಾ..? ಹೀಗೊಂದು ಪ್ರಶ್ನೆ ಈಗ ಎಲ್ಲೆಡೆ ಓಡಾಡುತ್ತಿದೆ. ಚಿತ್ರರಂಗದ ಜನಪ್ರಿಯ ಹಾಗೂ ಕಿರುತೆರೆಯ ಲವ್ಲೀ ಕಪಲ್ ಎಂದೇ ಹೆಸರಾಗಿದ್ದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವೈವಾಹಿಕ ಜೀವನ ಅಂತ್ಯ ಕಂಡಿದೆ. ಅವರಿಬ್ಬರದ್ದೂ ಅಂತಿಂತಾ ಲವ್ ಸ್ಟೋರಿ ಅಲ್ಲ.
ಅವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಬಿಗ್ ಬಾಸ್ ಮನೆಯಲ್ಲಿ. 2017ರಲ್ಲಿ ‘ಬಿಗ್ ಬಾಸ್ ಕನ್ನಡ 5’ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸ್ಪರ್ಧಿಸಿದ್ದರು. ಚಂದನ್ ಶೆಟ್ಟಿ ಆಗಿನ್ನೂ ಸಿನಿಮಾ ಮ್ಯೂಸಿಕ್ ಡೈರೆಕ್ಟರ್ ಆಗಿರಲಿಲ್ಲ. ಆದರೆ, ರ್ಯಾಪರ್ ಆಗಿ ಕ್ಲಿಕ್ ಆಗಿದ್ದರು. ಕನ್ನಡಕ್ಕದು ಹೊಸದು.
ಇತ್ತ ನಿವೇದಿತಾ ಗೌಡ, ಗೊಂಬೆಯಂತಿದ್ದರು. ನಿವೇದಿತಾ ಅವರನ್ನ ಗೊಂಬೆ.. ಎಂದು ಫೇಮಸ್ ಮಾಡಿದ್ದು ಚಂದನ್ ಶೆಟ್ಟಿ. ನಿವೇದಿತಾ ಅವರ ವಿಚಿತ್ರ ಕನ್ನಡ, ಕನ್ನಡ ಟಿವಿ ಪ್ರೇಕ್ಷಕರಿಗೆ ತಮಾಷೆಯಾಗಿ ಕಂಡಿತ್ತಷ್ಟೇ ಅಲ್ಲ, ನಿವೇದಿತಾ ಅವರನ್ನು ಸ್ಟಾರ್ ಮಾಡಿತು. ಚಂದನ್ ಶೆಟ್ಟಿ ಹೃದಯಕ್ಕೆ ಸೈಲೆಂಟಾಗಿ ಲಗ್ಗೆ ಇಟ್ಟಿದ್ದರು ನಿವೇದಿತಾ.
೨019ರಲ್ಲಿ ಮೈಸೂರಿನ ಯುವ ದಸರಾ ವೇದಿಕೆ ಮೇಲೆ ಬಹಿರಂಗವಾಗಿ ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಲವ್ ಪ್ರಪೋಸ್ ಮಾಡಿದ್ದರು. ಆಗ ಅದು ದೊಡ್ಡ ಸೆನ್ಸೇಷನ್. ಯುವ ದಸರಾದಲ್ಲಿ ಈ ರೀತಿ ಮಾಡಬಹುದಾ.. ಎಂದು ದೊಡ್ಡ ಸುದ್ದಿಯಾಗಿತ್ತು. ವಿವಾದವಾಗಿತ್ತು. ಕೊನೆಗೆ ಅದು ತಣ್ಣಗಾಯ್ತು. ಫೆಬ್ರವರಿ 25, 2020 ರಂದು ಮೈಸೂರಿನಲ್ಲಿ ಚಂದನ್ ಶೆಟ್ಟಿ – ನಿವೇದಿತಾ ಗೌಡ ಅವರ ಆರತಕ್ಷತೆ ಅದ್ಧೂರಿಯಾಗಿ ನಡೆದಿತ್ತು. ಫೆಬ್ರವರಿ 26, 2020 ರಂದು ಚಂದನ್ ಶೆಟ್ಟಿ – ನಿವೇದಿತಾ ಗೌಡ ಮದುವೆ ಶಾಸ್ತ್ರೋಕ್ತವಾಗಿ ಜರುಗಿತ್ತು.
ಇದೀಗ ದಾಂಪತ್ಯ ನಾಲ್ಕೇ ವರ್ಷಕ್ಕೆ ಕೊನೆಯಾಗಿದೆ. ಜೂನ್ 6 ರಂದು ಬೆಂಗಳೂರಿನ ಶಾಂತಿನಗರದಲ್ಲಿರುವ ಫ್ಯಾಮಿಲಿ ಕೋರ್ಟ್‌ನಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೋರ್ಟ್ ಮೊರೆಹೋಗಿದ್ದಾರೆ. ಜೂನ್ 7 ರಂದು ಕೋರ್ಟ್‌ಗೆ ಹಾಜರಾಗಿದ್ದಾರೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ. ’ನಾವಿಬ್ಬರೂ ಇನ್ನು ಮುಂದೆ ಒಟ್ಟಿಗೆ ಬಾಳಲು ಸಾಧ್ಯವಿಲ್ಲ’’ ಎಂದು ಹೇಳಿಕೆ ಕೊಟ್ಟಿದ್ದಾರೆ.
ವಿಚ್ಚೇದನ ಅರ್ಜಿಯ ಕೇಸ್ ನಂಬರ್ MC 3388/2024. ಚಂದನ್ ಶೆಟ್ಟಿ ಕೋರ್ಟ್‌ನಲ್ಲಿ ನ್ಯಾಯಾಧೀಶರ ಮುಂದೆ ಕೆಲ ವಿಚಾರಗಳಲ್ಲಿ ಇಬ್ಬರಿಗೂ ಭಿನ್ನಾಭಿಪ್ರಾಯಗಳಿವೆ. ವೃತ್ತಿ ಜೀವನದ ಬಗ್ಗೆ ಕನಸುಗಳಿವೆ. ಪರಸ್ಪರ ಒಪ್ಪಿಗೆ ಮೇರೆಗೆ ಬೇರೆಯಾಗುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದರೆ, ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಇಚ್ಛೆ ಇದೆ ಎಂದು ಹೇಳಿಕೆ ನೀಡಿದ್ಧಾರೆ ನಿವೇದಿತಾ ಗೌಡ. ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡಿಲ್ಲ. ಹೀಗಾಗಿ, ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ.
ವಿಚ್ಚೇದನದ ನಂತರವೂ ಇಬ್ಬರೂ ಗೆಳೆತನ ಕಾಯ್ದಿಟ್ಟುಕೊಂಡಿರುವುದು ವಿಶೇಷ. ಕೋರ್ಟಿನಲ್ಲಿ ಅಕ್ಕಪಕ್ಕ ಕುಳಿತಿದ್ದ ಚಂದನ್ ಮತ್ತು ನಿವೇದಿತಾ, ಖುಷಿ ಖುಷಿಯಾಗಿ, ನಗು ನಗುತ್ತಾ ಮಾತನಾಡಿದ್ದಾರೆ. ಕೋರ್ಟಿಂದ ಹೊರ ಬಂದ ಮೇಲೆ ಪೋಸ್ಟ್ ಹಾಕಿದ್ಧಾರೆ.
ಇಬ್ಬರದ್ದೂ ಒಂದೇ ಪೋಸ್ಟ್. ಅದರ ಸಾರಾಂಶ ಇಷ್ಟು.ʻʻನಾವು ನಮ್ಮ ಮದುವೆಯನ್ನು ಕಾನೂನುಬದ್ಧವಾಗಿ ಕೊನೆಗೊಳಿಸುತ್ತಿದ್ದೇವೆ. ನಮ್ಮ ನಿರ್ಧಾರವನ್ನು ಗೌರವಿಸಿ, ನಮ್ಮ ಖಾಸಗಿತನವನ್ನು ಗೌರವಿಸಿʼʼ ಎಂಬುದಷ್ಟೆ.
ಮೂಲಗಳ ಪ್ರಕಾರ ಚಂದನ್ ಅವರಿಗೆ ಮಕ್ಕಳನ್ನು ಪಡೆಯುವ ಬಯಕೆ ಇತ್ತು. ಆದರೆ, ನಿವೇದಿತಾ ಅವರಿಗೆ ಅದು ಇಷ್ಟವಿರಲಿಲ್ಲ ಎನ್ನಲಾಗಿದೆ. ನಿವೇದಿತಾ ಅವರು ಸಿನಿಮಾ ಕೆರಿಯರ್ ಮೇಲೆ ಗಮನ ಹರಿಸಿದ್ದರು. ಅವಕಾಶಗಳೂ ಬರುತ್ತಿದ್ದವು. ಈ ಸಮಯದಲ್ಲಿ ಮಕ್ಕಳು ಬೇಡ ಎಂದು ಹೇಳಿದ್ದರಂತೆ. ಚಂದನ್ ಶೆಟ್ಟಿ ಅವರಿಗೀತ 34 ವರ್ಷ. ಮದುವೆಯಾಗಿ 4 ವರ್ಷಗಳಾಗಿವೆ.
ಗುಡ್ ನ್ಯೂಸ್ ಯಾವಾಗ ಕೊಡ್ತೀರಾ? ಅನ್ನೋದು ಇಬ್ಬರಿಗೂ ಎದುರಾಗುತ್ತಿದ್ದ ಪ್ರಶ್ನೆ. ಇನ್ನೂ ಟೈಮ್ ಇದೆ ಎನ್ನುತ್ತಿದ್ದ ದಂಪತಿ, ಈಗ ಅದೇ ಕಾರಣಕ್ಕೆ ದೂರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ ಜೋಡಿ ಇದು. ಬಿಗ್ ಬಾಸ್ ಅಷ್ಟೇ ಅಲ್ಲ, ಹಲವು ರಿಯಾಲಿಟಿ ಶೋ, ಸ್ಟೇಜ್ ಶೋಗಳಲ್ಲಿ ಇಬ್ಬರೂ ಜೋಡಿಯಾಗಿ ಮಿಂಚುತ್ತಿದ್ದರು. ಕೆಲವೇ ದಿನಗಳ ಹಿಂದೆ ಅಂದರೆ ಮೇ 12ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ನಿವೇದಿತಾಗೆ ಹ್ಯಾಪಿ ಬರ್ತ್‌ಡೇ ಲವ್ ಯು ಎಂದೇ ಸಂಬೋಧಿಸಿದ್ದರು ಚಂದನ್ ಶೆಟ್ಟಿ. ಅದಕ್ಕೆ ರಿಯಾಕ್ಟ್ ಮಾಡಿದ್ದ ನಿವೇದಿತಾ, ಥ್ಯಾಂಕ್ಯು ಕುಕಿ ಎಂದಿದ್ದರು. ಕುಕಿ ಅನ್ನೋದು ನಿವೇದಿತಾ, ಚಂದನ್ ಶೆಟ್ಟಿಗೆ ಕರೆಯುತ್ತಿದ್ದ ಪೆಟ್ ನೇಮ್. ಒಂದು ವಾರದ ಹಿಂದಷ್ಟೇ ಕನ್ನಡದ ಸಿನಿಮಾ ಒಂದರ ಪ್ರಮೋಷನ್ ಕಾರ್ಯಕ್ರಮದಲ್ಲಿ ಜೊತೆಯಾಗಿ ನಗು ನಗುತ್ತಾ ಭಾಗವಹಿಸಿದ್ದ ಜೋಡಿ ದಿಢೀರ್ ಡೈವೋರ್ಸ್ ತೆಗೆದುಕೊಂಡಿದೆ.
ಒಟ್ಟಿನಲ್ಲಿ ಮಕ್ಕಳ ವಿಷಯಕ್ಕೆ, ಮಗು ಬೇಕು ಎನ್ನುವ ವಿಚಾರಕ್ಕೆ ಇಬ್ಬರ ದಾಂಪತ್ಯ ಮುರಿದು ಬಿದ್ದಿದೆ ಎನ್ನುತ್ತಿವೆ ಮೂಲಗಳು.



