ಮಾಜಿ ಸಚಿವ ಸಿ.ಪಿ.ಯೋಗೆಶ್ವರ್ ಅವರ ಕುಟುಂಬದ ಜಗಳ ಬೀದಿಗೆ ಬಂದು ಯಾವುದೋ ಕಾಲವಾಗಿದೆ. ಅಪ್ಪ ಮಗಳ ಜಗಳ ಹಾದಿ ಬೀದಿ ರಂಪಾಟವಾಗಿದೆ. ನಿಶಾ ಯೋಗೀಶ್ವರ್ ಅವರು ಸಿ.ಪಿ. ಯೋಗೀಶ್ವರ್ ಅವರ ಮಗಳು. ಅವರು ಈ ಲೋಕಸಭೆ ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ ಸೇರೋಕೆ ಮುಂದಾಗಿದ್ದರು. ಮನೆ ಬಾಗಿಲಿಗೆ ಬಂದವರಿಗೆ ಆಶೀರ್ವಾದ ಮಾಡಿದ್ದ ಡಿಕೆ ಶಿವಕುಮಾರ್, ಸದ್ಯಕ್ಕೆ ಬೇಡ ಎಂದು ಕಳುಹಿಸಿಕೊಟ್ಟಿದ್ದರು.
ಅದಕ್ಕೆ ಕುಟುಂಬದ ಜಗಳವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಬೇಡ ಎನ್ನುವುದೇ ಕಾರಣವಾಗಿತ್ತು. ಇದೆಲ್ಲದರ ಮೂಲ ಕಾರಣ ಸಿಪಿವೈ ಅವರಲ್ಲಿಯೇ ಇದೆ. ಯೋಗೀಶ್ವರ್ ಅವರಿಗೆ ಇಬ್ಬರು ಪತ್ನಿಯರು. ನಿಶಾ ದೊಡ್ಡ ಹೆಂಡತಿಯ ಮಗಳು. ನಿಶಾ ಅವರಿಗೆ ಒಬ್ಬ ತಮ್ಮನಿದ್ದಾನೆ. ಯೋಗೀಶ್ವರ್ ಅವರ ಇನ್ನೊಬ್ಬ ಪತ್ನಿಗೆ ಒಬ್ಬ ಮಗನಿದ್ಧಾನೆ. ಸಮಸ್ಯೆಯ ಮೂಲ ಇದೇ.
ಮಾಜಿ ಸಚಿವ ಸಿಪಿ ಯೋಗೆಶ್ವರ್ ಹಾಗೂ ಪುತ್ರಿ ನಿಶಾ ಯೋಗೆಶ್ವರ್ ನಡುವಿನ ಮುಸುಕಿನ ಗುದ್ದಾಟ, ಕುಟುಂಬದ ಕಲಹ ಇದೇ ಮೊದಲೇನಲ್ಲ, ಕಳೆದು ಹಲವು ವರ್ಷಗಳಿಂದ ಕುಟುಂಬದಲ್ಲಿ ಈ ರೀತಿ ಬಿರುಕು ಮೂಡಿದೆ. ಕಳೆದ ಹಲವು ವರ್ಷಗಳಿಂದ ಮೊದಲ ಪತ್ನಿಯ ಪುತ್ರಿ ನಿಶಾ ಹಾಗೂ ಸಿಪಿವೈ ನಡುವೆ ಕೋಲ್ಡ್ ವಾರ್ ನಡೆಯುತ್ತಲೇ ಇದೆ. ಯೋಗೀಶ್ವರ್ ಅವರಿಗೆ ಅತ್ತ ಮಗಳನ್ನೂ ಬಿಡಲೂ ಆಗದೆ.. ಎರಡನೇ ಪತ್ನಿಯನ್ನೂ ದೂರ ಇಡಲಾಗದೆ ತೊಳಲಾಡುತ್ತಿದ್ಧಾರೆ.
ನಿಶಾ ಯೋಗೀಶ್ವರ್ ಅವರು ಇದ್ದಕ್ಕಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ಧಾರೆ. ʻʻನಮ್ಮ ತಂದೆಗೆ ನಾವು ಬೇಡವಾಗಿದ್ದೇವೆ. ನಾನು ಹತ್ತು ವರ್ಷದವಳಿದ್ದಾಗಲೇ ನಮ್ಮನ್ನು ನಮ್ಮ ತಂದೆ ಮರೆತು ಬಿಟ್ಟಿದ್ದಾರೆ. ನಮ್ಮನ್ನು ರಾಜಕೀಯವಾಗಿಯೂ ಬೆಳೆಸಲಿಲ್ಲ, ಹಲವು ಚುನಾವಣೆಯಲ್ಲಿ ನಮ್ಮ ತಂದೆಯ ಪರವಾಗಿ ಪ್ರಚಾರ ಮಾಡಿದ್ದೇವೆ. ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿಯವರನ್ನು ಪರಿಚಯ ಮಾಡಿಸಿ ಅಂದ್ರೂ ನಮಗೆ ಗೌರವ ಕೊಡಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.
ಯೋಗೀಶ್ವರ್ ಅವರ ಎರಡನೇ ಪತ್ನಿಗೂ, ಮೊದಲ ಪತ್ನಿಯ ಮಕ್ಕಳಿಗೂ ಆಗಿ ಬರುತ್ತಿಲ್ಲ. ಅವರನ್ನು ಕಂಡರೆ ಇವರಿಗೆ ಆಗಲ್ಲ. ಇವರನ್ನು ಕಂಡರೆ ಅವರಿಗೆ ಆಗಲ್ಲ. ಯೋಗೀಶ್ವರ್ ಕೂಡಾ ಕಳೆದ ಕೆಲವು ವರ್ಷಗಳಿಂದ ಮೊದಲ ಹೆಂಡತಿ ಮತ್ತು ಮಕ್ಕಳನ್ನು ದೂರ ಇಟ್ಟಿದ್ಧಾರೆ.
ಇದೀಗ ಯೋಗೆಶ್ವರ್ ಹೆಸರು ಬಳಸಿಕೊಳ್ಳದಂತೆ ಸಿಪಿವೈ ಬೆಂಬಲಿಗರು ಕಮೆಂಟ್ ಮಾಡಿ ನಿಶಾಗೆ ಧಮ್ಕಿ ಹಾಕ್ತಾರಂತೆ, ತನ್ನ ಚಿಕ್ಕಮ್ಮ ಕೂಡ ನಮಗೆ ಆದರ್ಶ ತಾಯಿ ಆಗಲಿಲ್ಲ, ನಮ್ಮನ್ನು ಕಂಡರೆ ಕಾಲು ಕಸ ಮಾಡುತಿದ್ದರು, ಮೊದಲ ಪತ್ನಿಯ ಮಕ್ಕಳು ಎಂದು ನಮ್ಮನ್ನು ದೂರ ಮಾಡಿದ್ದಾರೆ. ತಂದೆ ನೋಡಲು ಮನೆಯ ಬಳಿ ಹೋದರೆ ನಮಗೆ ಹೊಡೆದು ಪೋಲಿಸರನ್ನು ಕರೆಸಿ ಬಾಯಿಗೆ ಬಂದ ಹಾಗೆ ಬೈಯಿಸುತ್ತಾರೆ. ನಮಗೆ ಸಾಕಷ್ಟು ನೋವು ನೀಡಿದ್ದಾರೆ. ನಮ್ಮವರೇ ಪರಕೀಯರಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ.. ಈ ವಿಷಯವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳೋದಿಲ್ಲ ಅನ್ನೋ ಸಂದೇಶವನ್ನಂತೂ ಡಿಕೆ ಶಿವಕುಮಾರ್ ಕೊಟ್ಟಿದ್ಧಾರೆ. ಪರ್ಸನಲ್ಲಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಯೋಗೀಶ್ವರ್ ಅವರಿಗೆ ಸಲಹೆ ನೀಡಿದ್ಧಾರಂತೆ ಡಿಕೆ ಶಿವಕುಮಾರ್. ಆದರೆ, ನಿಶಾ ಅವರಿಗೆ ತಾವು ಮಧ್ಯ ಪ್ರವೇಶಿಸುವುದು ಅನಿವಾರ್ಯ ಎನಿಸಿದರೆ ಖಂಡಿತಾ ಬರುತ್ತೇನೆ. ಒಬ್ಬ ಹಿರಿಯನಾಗಿ ನೆರವಾಗುತ್ತೇನೆಯೇ ಹೊರತು, ರಾಜಕೀಯವಾಗಿ ಅಲ್ಲ ಎಂದಿದ್ದಾರಂತೆ ಡಿಕೆ ಶಿವಕುಮಾರ್.
ಸಿನಿಮಾಗಳಲ್ಲಿ ಉದ್ದುದ್ದ ಭಾಷಣ ಹೊಡೆದಿದ್ದ, ವೇದಿಕೆಗಳು ಸಿಕ್ಕರೆ ತನ್ನಷ್ಟು ಒಳ್ಳೆಯವನು ಯಾರೂ ಇಲ್ಲ ಎಂದು ಹೇಳುವ ಯೋಗೀಶ್ವರ್, ಮಗಳ ಕಣ್ಣೀರು ಒರೆಸುತ್ತಾರಾ..? ಮಗಳು ಸೋಷಿಯಲ್ ಮೀಡಿಯಾದಲ್ಲಿ ಬಂದು ಕಣ್ಣೀರು ಹಾಕುವ ಸ್ಥಿತಿಗೆ ತಲುಪಿದ್ದೇಕೆ ಎನ್ನುವ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕಿದೆ.



