ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ. ಇಬ್ಬರೂ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಜೆಡಿಎಸ್, ಈಗ ಎನ್ಡಿಎ ಅಂಗಪಕ್ಷ. ಈ ಬಾರಿಯ ಲೋಕಸಭೆ ಚುನಾವಣೆಯನ್ನು ಒಟ್ಟಿಗೇ ಎದುರಿಸಲಿದ್ಧಾರೆ. ಹೀಗಾಗಿಯೇ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕ ನಂತರ ದೇವೇಗೌಡರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡಿದ್ದರು. ಇತ್ತ ಮೈತ್ರಿ ಪಕ್ಕಾ ಆದ ನಂತರ ನಿಖಿಲ್ ಕುಮಾರಸ್ವಾಮಿ ಅವರೂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ವಿಜಯೇಂದ್ರ ಮತ್ತು ಕುಮಾರಸ್ವಾಮಿ ಭೇಟಿಯಾಗಿದೆ.
ಆಗ ನಮ್ಮ (ಕುಮಾರಸ್ವಾಮಿ-ಯಡಿಯೂರಪ್ಪ) ಕಾಂಬಿನೇಷನ್ ಚೆನ್ನಾಗಿ ಕೆಲಸ ಮಾಡಿತ್ತು. ನಾವು ಅಡಿಪಾಯ ಹಾಕಿದ್ದೇವೆ ಮತ್ತು ಈಗ ಆ ಮ್ಯಾಜಿಕ್ ಅನ್ನು ಮರಳಿ ತರುವುದು ನಿಖಿಲ್ ಮತ್ತು ವಿಜಯೇಂದ್ರ ಇಬ್ಬರದ್ದೂ ಆಗಿದೆ ಎಂದ ಕುಮಾರಸ್ವಾಮಿ ಮುಂದಿನ ವರ್ಷ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಮೈತ್ರಿ ಪಕ್ಷ ಗೆಲ್ಲಲು ವಿಜಯೇಂದ್ರ ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಸಂಘಟಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ಧಾರೆ.
ನಾವಿಬ್ಬರೂ ಒಟ್ಟಾಗಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಮತ್ತು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುವ ಬಗ್ಗೆ ಚರ್ಚಿಸಿದ್ದೇವೆ. ಸೀಟು ಹಂಚಿಕೆ ವಿಷಯದ ಬಗ್ಗೆ ಈವರೆಗೂ ಯಾವುದೇ ಚರ್ಚೆಯಾಗಿಲ್ಲ. ಅಂತಹ ವಿಚಾರಗಳನ್ನು ದೆಹಲಿಯಲ್ಲಿ ವ್ಯವಹರಿಸುತ್ತೇವೆ, ಇಲ್ಲಿ ಅಲ್ಲ ಎಂದು ದೆಹಲಿಯತ್ತ ಕೈ ತೋರಿಸಿದರು ಕುಮಾರಸ್ವಾಮಿ. ಜಂಟಿ ಪ್ರಚಾರದ ಅಗತ್ಯವಿದ್ದರೆ ಇಬ್ಬರೂ (ನಿಖಿಲ್ ಮತ್ತು ವಿಜಯೇಂದ್ರ) ರಾಜ್ಯ ಪ್ರವಾಸ ಮಾಡುತ್ತಾರೆ ಎಂದ ಕುಮಾರಸ್ವಾಮಿ, ನಿಖಿಲ್ ಅವರನ್ನು ಪಕ್ಷದ ಮುನ್ನೆಲೆಗೆ ತರುವ ಸುಳಿವನ್ನೂ ಬಿಟ್ಟು ಕೊಟ್ಟರು.
ಇತ್ತ ವಿಜಯೇಂದ್ರ ಅವರೂ ಕೂಡಾ ಕುಮಾರಸ್ವಾಮಿ ಅವರ ಜೊತೆಗೂಡಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತೇವೆ ಎಂದರಲ್ಲದೆ ಮೋದಿ, ನಡ್ಡಾ, ಅಮಿತ್ ಶಾ,ಹೆಚ್ ಡಿಕೆ ಅವರು ಈಗಾಗಲೇ ದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ. ಬಿಜೆಪಿ- ಜೆಡಿಎಸ್ ಒಗ್ಗಟ್ಟಾಗಲು ನಿರ್ಧರಿಸಲಾಗಿದೆ. ನಾನು ಕೂಡ ಈಗಾಗಲೇ ಮಾಜಿ ಪ್ರಧಾನಿಗಳಾದ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಹಿರಿಯರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಜತೆಯೂ ಚರ್ಚಿಸಿದ್ದೇನೆ. ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ವೆ ಎಂದು ಹೇಳಿದ್ದಾರೆ.



