ಚನ್ನಪಟ್ಟಣ ಉಪ ಚುನಾವಣಾ ಕಣ ಇದೀಗ ಮತದಾನ ಮುಗಿದ ಬಳಿಕ ಫಲಿತಾಂಶಕ್ಕೂ ಮುನ್ನ ಬುಕ್ಕಿಗಳ ಹಾಟ್ ಫೇವರಿಟ್ ಆಗಿದೆ. ಮತ ಎಣಿಕೆ ನ. 23ಕ್ಕೆ ನಡೆಯಲಿದೆ. ಇದರ ನಡುವೆ ಇಡೀ ಕ್ಷೇತ್ರದಲ್ಲಿ ಬೆಟ್ಟಿಂಗ್ ಜೋರಾಗಿಯೇ ನಡೆಯುತ್ತಿದೆ. ದುಡ್ಡು, ಕುರಿ, ಕೋಳಿ, ಜಮೀನು, ಬೈಕುಗಳನ್ನಿಟ್ಟು ಬೆಟ್ಟಿಂಗ್ ಆಡುತ್ತಿದ್ದಾರೆ.
ಮಂಡ್ಯ, ರಾಮನಗರ, ಹಾಸನ, ತುಮಕೂರು ಭಾಗದ ಚುನಾವಣೆಗಳೆಂದರೆ ಅಲ್ಲಿ ಬೆಟ್ಟಿಂಗ್ ಸರ್ವೆ ಸಾಮಾನ್ಯ, ಇಲ್ಲಿನ ಚುನಾವಣೆಗಳನ್ನು ಬೆಟ್ಟಿಂಗ್ ಇಲ್ಲದೆ ಊಹಿಸಿಕೊಳ್ಳುವುದು ಅಸಾಧ್ಯ.
ಸೋಲು, ಗೆಲುವು ಹಾಗೂ ಗೆಲುವಿನ ಅಂತರಕ್ಕೆ ಲಕ್ಷ ಲಕ್ಷ ಹಣ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಚನ್ನಪಟ್ಟಣ ತಾಲೂಕು ಮಾತ್ರವಲ್ಲದೇ ಅಕ್ಕಪಕ್ಕದ ತಾಲೂಕುಗಳು, ಜಿಲ್ಲೆಗಳಲ್ಲೂ ಸಹ ಫಲಿತಾಂಶದ ಮೇಲೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ. ಅಲ್ಲದೇ ಗುರುವಾರ ಸಿ.ಪಿ.ಯೋಗೇಶ್ವರ್ ಹೇಳಿಕೆ ಬಳಿಕವೂ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಕೂಡಾ ಹೆಚ್ಚಾಗಿದೆ. ಯಾವ ಭಾಗದಲ್ಲಿ ಯಾರಿಗೆ ಲೀಡ್, ಎಷ್ಟು ಮತಗಳು ಲೀಡ್ ಸೇರಿದಂತೆ ಇನ್ನಿತರ ವಿಚಾರಗಳ ಮೇಲೂ ಒನ್ ಟು ಡಬಲ್ ಎಂಬತೆ ಬೆಟ್ಟಿಂಗ್ ಕಟ್ಟಲಾಗುತ್ತಿದೆ.
ಮಂಡ್ಯ ಜಿಲ್ಲೆಯ ಜನರ ಕಣ್ಣು ಬಿದ್ದಿರೋದು ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಮೇಲೆ. ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಿದ್ದು ಸಹ ಮಂಡ್ಯ ಜಿಲ್ಲೆಯ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು. ಮತದಾನದ ಬಳಿಕ ಕಾರ್ಯಕರ್ತರು ಮಾತ್ರವಲ್ಲ ಸಾಮಾನ್ಯ ಜನರು ಸಹ ಈ ಫಲಿತಾಂಶದ ಮೇಲೆ ಬಾಜಿ ಕಟ್ಟುತ್ತಿದ್ದಾರೆ.
ಸಣ್ಣ ಸಣ್ಣ ಟೀ ಅಂಗಡಿಗಳೇ ಬೆಟ್ಟಿಂಗ್ ಜಾಲದ ಸೆಂಟರ್‌ಗಳಾಗಿವೆ. ಬೆಟ್ಟಿಂಗ್ ಆಡಲು ನಿತ್ಯವೂ ಅಂಗಡಿಗಳ ಮುಂದೆ ಜನ ಜಮಾಯಿಸುತ್ತಿದ್ದಾರೆ. ಅಲ್ಲಿ ಬಾಜಿ ಕಟ್ಟುವ ಮೂಲಕ ನಿಖಿಲ್‌ಗೆ ಈ ಬಾರಿ ಗೆಲುವು ಖಚಿತ ಎನ್ನುತ್ತಿದ್ದಾರೆ ಮಂಡ್ಯ ಮಂದಿ. 50,000ದಿಂದ 5 ಲಕ್ಷದವರೆಗೆ ಜನ ಬೆಟ್ಟಿಂಗ್ ಆಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬೆಟ್ಟಿಂಗ್ ಹಿನ್ನೆಲೆಯಲ್ಲಿ ದಲ್ಲಾಳಿಗಳಿಗೂ ಲಾಭ ಹೆಚ್ಚಾಗಿದೆ. ಸದ್ದಿಲ್ಲದೆ ವ್ಯವಹಾರ ಕುದುರಿಸುತ್ತಿರೋ ಏಜೆಂಟ್‌ಗಳೂ ಅಧಿಕ ಲಾಭ ಗಳಿಸುತ್ತಿದ್ದಾರೆ. ಬೆಟ್ ಕಟ್ಟಲು ಮಂಡ್ಯ ಜನರಿಂದಲೇ ಹೆಚ್ಚಿನ ಆಸಕ್ತಿ ಕಂಡು ಬಂದಿದೆ. ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಗ್ಗೆ ಚನ್ನಪಟ್ಟಣದ ಜನರಿಗಿಂತ ಮಂಡ್ಯದಲ್ಲೇ ಹೆಚ್ಚು ಕುತೂಹಲ ಮೂಡಿದೆ. ಇದಕ್ಕೆ ಕಾರಣ ಬೆಟ್ಟಿಂಗ್ ಅನ್ನೋದನ್ನು ಜನ ಗುಟ್ಟಾಗಿ ಮಾತನಾಡಿಕೊಳ್ಳುತ್ತಾರೆ.
ಚನ್ನಪಟ್ಟಣ ಚುನಾವಣಾ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟದಂತೆ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಯಾರೂ ಕೂಡ ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ. ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಆರಾಮಾಗಿರಿ. ಬೆಟ್ಟಿಂಗ್ನಿಂದ ಎಷ್ಟೋ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚುನಾವಣೆಯ ಫಲಿತಾಂಶ ವಿಚಾರವಾಗಿ ಯಾರೂ ಬೆಟ್ಟಿಂಗ್ ಕಟ್ಟಬೇಡಿ. ಫೋನ್ ಸ್ವಿಚ್ ಆಫ್ ಮಾಡಿ ಮಲಗಿಬಿಡಿ, ಬೆಟ್ಟಿಂಗ್ ಕಟ್ಟಿ ಆರ್ಥಿಕ ನಷ್ಟ ಅನುಭವಿಸಬೇಡಿ ಎಂದು ಮಾಧ್ಯಮದ ಮೂಲಕ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.



