ನಟ ದರ್ಶನ್ ಬೇಲ್ ಭವಿಷ್ಯ ಹೇಳಿದ್ದ ಸ್ವಾಮೀಜಿ, ಈಗ ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಯೋಗವಿದೆ. ಅವರು ಚನ್ನಪಟ್ಟಣದಲ್ಲಿ ಗೆದ್ದೇ ಗೆಲ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲಿಗೆ ನಿಖಿಲ್, ಎಂಎಲ್‌ಎ ನಿಖಿಲ್ ಆಗೇ ಆಗ್ತಾರೆ ಎಂದು ಖಚಿತವಾಗಿ ಹೇಳುತ್ತಿದ್ದಾರೆ. ಚನ್ನಪಟ್ಟಣ ಬೈ ಎಲೆಕ್ಷನ್ ಮತದಾನ ಮುಕ್ತಾಯವಾಗಿದ್ದು, ಫಲಿತಾಂಶ ನವೆಂಬರ್ 23ರಂದು ಬರಲಿದೆ. ರಾಜ್ಯದಲ್ಲಿ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದರೂ, ತೀವ್ರ ಕುತೂಹಲ ಹುಟ್ಟಿಸಿರುವ ಕ್ಷೇತ್ರ ಚನ್ನಪಟ್ಟಣ. ಇಲ್ಲಿ ಕಾಂಗ್ರೆಸ್ಸಿನಿಂದ ಸಿಪಿ ಯೋಗೇಶ್ವರ್ ಹಾಗೂ ಜೆಡಿಎಸ್ಸಿನಿಂದ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಗಳು. ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಬಿಜೆಪಿಯ ಬೆಂಬಲವೂ ಇದೆ. ಮಿತ್ರ ಪಕ್ಷದ ನಾಯಕರಾದ ವಿಜಯೇಂದ್ರ ಯಡಿಯೂರಪ್ಪ ಕೂಡಾ ನಿಖಿಲ್ ಪರ ಪ್ರಚಾರ ಮಾಡಿದ್ದಾರೆ. ಜ್ಯೋತಿಷ್ಯದ ಪ್ರಕಾರ ನಿಖಿಲ್ ಕೇವಲ ಎಂಎಲ್‌ಎ ಆಗುವುದಷ್ಟೇ ಅಲ್ಲ, ರಾಜಯೋಗ ಇರುವ ಕಾರಣ, ಇನ್ನೂ ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಹೇಳಲಾಗಿದೆ. ಅದಕ್ಕೆ ತಕ್ಕಂತೆ ಜೆಡಿಎಸ್‌ನಲ್ಲಿ ರಿಸಲ್ಟ್ ಹೊರಬಿದ್ದ ನಂತರ ಬದಲಾವಣೆ ಆಗಲಿದೆ, ಪಕ್ಷದ ಪದಾಧಿಕಾರಿಗಳು ಸೇರಿದಂತೆ ಹಲವು ಬದಲಾವಣೆ ನಿರೀಕ್ಷಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಮುಗಿದ ಮರುದಿನವೇ ಸಿಪಿ ಯೋಗೇಶ್ವರ್ ಹತಾಶೆಯ ಮಾತನ್ನಾಡಿದ್ದರು. ಜಮೀರ್ ಅಹ್ಮದ್ ಹೇಳಿಕೆಯಿಂದಾಗಿ ಒಕ್ಕಲಿಗರ ವೋಟು ಕೈತಪ್ಪಿವೆ. ನಮಗೆ ಬರಬೇಕಾದಷ್ಟು ಮತಗಳು ಬಂದಿಲ್ಲ. ಯಾರೇ ಗೆದ್ದರೂ ಕೂದಲೆಳೆ ಅಂತರ ಎಂದು ಹೇಳಿ ಪರೋಕ್ಷವಾಗಿ ಫಲಿತಾಂಶಕ್ಕೆ ಮೊದಲೇ ಸೋಲೊಪ್ಪಿಕೊಂಡಿದ್ದರು. ಇದೀಗ ಜ್ಯೋತಿಷಿಯೂ ಆಗಿರುವ ಡಾ ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
ಹೆಚ್‌ಡಿ ದೇವೇಗೌಡ ಅವರು ಮುಕಾಬಿಂಕಾ ದೇವಿ ಅಮ್ಮನ ಸನ್ನಿಧಿಯಲ್ಲಿ ಚಂಡಿಕಾಯಾಗ ಮಾಡಿಸಿದ್ದಕ್ಕೆ ನಿಖಿಲ್ ಕುಮಾರಸ್ವಾಮಿಗೆ ರಾಜಯೋಗ ಶುರುವಾಗಿದೆ ಎಂದಿರುವ ಡಾ.ಲಕ್ಷ್ಮೀಕಾಂತ್ ಆಚಾರ್ಯ ಗುರೂಜಿ ನಿಖಿಲ್ ಕುಮಾರಸ್ವಾಮಿಗೆ 2023 ರಿಂದಲೇ ರಾಜಯೋಗ ಶುರುವಾಗಿದೆ. ನಿಖಿಲ್ ಕುಮಾರಸ್ವಾಮಿ ಮೇಲೆ ಭಗವತಿಯ ಪರಿಪೂರ್ಣ ಆಶೀರ್ವಾದ ಆಗಿದೆ. ಅಮ್ಮನವರು ಒಪ್ಪಿಗೆ ಸೂಚಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಜಯಶೀಲರಾಗುವಂತಹ ಎಲ್ಲಾ ಅನುಗ್ರಹವನ್ನು ಅಮ್ಮನವರು ಮಾಡಿಕೊಟ್ಟಿದ್ದಾರೆ. ಖಂಡಿತವಾಗಿ ಗೆಲ್ಲುತ್ತಾರೆ. ಕಹಿ ನೆನಪುಗಳೆಲ್ಲಾ ಮಾಯವಾಗಿ ಒಳ್ಳೆಯ ರೀತಿಯ ಅನುಗ್ರಹ ಆಗುತ್ತೆ ಎಂದು ಭವಿಷ್ಯ ಹೇಳಿದ್ದಾರೆ.
ಯಾವುದೇ ರೀತಿಯ ಅಧಿಕಾರ ಸಿಗಬೇಕು ಎಂದರೆ ರಾಜಯೋಗ ಇರಬೇಕು. ರಾಜಯೋಗ ಇಲ್ಲದಿದ್ದರೆ ಅಧಿಕಾರ ಸಿಗುವುದಿಲ್ಲ. ಚಂಡಿಕಾಯಾಗದ ಅನುಷ್ಠಾನ ಮಾಡಿ ವಿಶೇಷವಾಗಿ ದೇವಿಗೆ ಪೂಜೆ ಸಲ್ಲಿಸುವವರಿಗೆ ಈ ಆಶೀರ್ವಾದ ಸಿಗಲಿದೆ. ನಿಖಿಲ್ ಅವರಿಗೀಗ ರಾಜಯೋಗದ ಸಮಯ ಎಂದಿದ್ದಾರೆ ಡಾ.ಲಕ್ಷ್ಮೀಕಾಂತ್ ಅಚಾರ್ಯ ಗುರೂಜಿ. ಇವರು ಹೇಳಿರುವ ಭವಿಷ್ಯ ಸತ್ಯವಾಗಲಿದೆಯೋ.. ಸುಳ್ಳಾಗಲಿದೆಯೋ ಎನ್ನುವುದು ನವೆಂಬರ್ 23ರಂದು ಗೊತ್ತಾಗಲಿದೆ.
ಅಂದಹಾಗೆ ಇದೇ ಸ್ವಾಮಿಗಳು ದರ್ಶನ್ ವಿಷಯದಲ್ಲಿ ಪಕ್ಕಾ ಭವಿಷ್ಯ ಹೇಳಿದ್ದರು. ಆಶ್ವಯುಜ ಮಾಸ ಅಂತ್ಯ ಕಾರ್ತಿಕ ಮಾಸದ ಪ್ರಾರಂಭದಲ್ಲಿ ದರ್ಶನ್ ಬೆಲ್ ಸಿಗುತ್ತೆ ಎಂದು ಭವಿಷ್ಯ ನುಡಿದಿದ್ದರು, ಅದೇ ರೀತಿಯಲ್ಲಿ ದರ್ಶನ್ ಜೈಲಿನಿಂದ ಹೊರ ಬಂದಿದ್ದರು.. ಇದೀಗ ನಿಖಿಲ್ ಕುಮಾರಸ್ವಾಮಿ ವಿಷಯದಲ್ಲಿ ಭವಿಷ್ಯ ನಿಜವಾಗುತ್ತಾ ಕಾದು ನೋಡಬೇಕು.
ಅಂದಹಾಗೆ ನಿಖಿಲ್ ಅವರಿಗೆ ಉನ್ನತ ಹುದ್ದೆ ನೀಡುವುದಕ್ಕೆ ಅಪಸ್ವರ ಎತ್ತುವವರೂ ಜೆಡಿಎಸ್‌ನಲ್ಲಿದ್ದಾರೆ. ಆದರೆ ಈ ರೀತಿ ಅಪಸ್ವರ ಎತ್ತುವ ನಾಯಕರಾರೂ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ನಿಷ್ಠರಲ್ಲ. ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರಿಗೆ ಹೆಚ್ಚು ನಿಷ್ಟರು ಎನ್ನುವುದು ದೇವೇಗೌಡ ಮತ್ತು ಕುಮಾರಸ್ವಾಮಿ ಲೆಕ್ಕಾಚಾರ. ಈ ರೀತಿ ಅಪಸ್ವರ ಎತ್ತುವ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಿದರೂ ಯಾವುದೇ ತೊಂದರೆ ಇಲ್ಲ ಎಂದು ಲೆಕ್ಕ ಹಾಕಿರುವ ದೇವೇಗೌಡರು, ನಿಖಿಲ್ ಪಟ್ಟಾಭಿಷೇಕಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.



