ಸೈನಿಕ V/S ಅಭಿಮನ್ಯು ʻಕುರುಕ್ಷೇತ್ರ ಚನ್ನಪಟ್ಟಣʼ ಯಾರು ಸೋತರೂ.. ಹ್ಯಾಟ್ರಿಕ್ ಸೋಲು..!
ಚನ್ನಪಟ್ಟಣ. ಈಗ ರಾಜ್ಯದ ಅತ್ಯಂತ ಪ್ರತಿಷ್ಠಿತ ಕ್ಷೇತ್ರ. ಅಲ್ಲೀಗ ಕಾಂಗ್ರೆಸ್ಸಿಂದ ಸಿಪಿ ಯೋಗೇಶ್ವರ್ ಅಖಾಡಕ್ಕೆ ಇಳಿದಿದ್ದರೆ, ಜೆಡಿಎಸ್ʻನಿಂದ ನಿಖಿಲ್ ಕುಮಾರಸ್ವಾಮಿ ಯುದ್ಧಕ್ಕೆ ಧುಮುಕಿದ್ದಾರೆ. ನಿಖಿಲ್ ಜೊತೆಯಲ್ಲಿ ಬಿಜೆಪಿ ನಿಂತಿದೆ. ವಿಶೇಷ ಅಂದ್ರೆ ಇಬ್ಬರಿಗೂ ಚಿತ್ರರಂಗದ ನಂಟಿದೆ.
ನಿಖಿಲ್ ಚಿತ್ರರಂಗದಲ್ಲಿ ಹೀರೋ ಆಗಿ ಜಾಗ್ವಾರ್, ಸೀತಾರಾಮ ಕಲ್ಯಾಣ, ರೈಡರ್ ಸಿನಿಮಾ ಮಾಡಿದ್ದಾರೆ. ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರ ಅವರನ್ನು ಚಿತ್ರರಂಗದಲ್ಲಿ ಅಭಿಮನ್ಯು ಎಂದೇ ಗುರುತಿಸುವಂತೆ ಮಾಡಿದೆ. ಆದರೆ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರ ವಿರುದ್ಧ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 2023ರಲ್ಲಿ ಸೋತಿರುವ ನಿಖಿಲ್ ಅವರಿಗೆ ಇದು ೩ನೇ ಅದೃಷ್ಟ ಪರೀಕ್ಷೆ. ಗೆದ್ದರೆ ಸೋಲಿನ ಸರಪಳಿ ಕಳಚುತ್ತದೆ. ಸೋತರೆ.. ಹ್ಯಾಟ್ರಿಲ್ ಸೋಲು.
ಇನ್ನು ಸಿಪಿ ಯೋಗೇಶ್ವರ್ ಕೂಡಾ ಚಿತ್ರರಂಗದವರೇ. ಆರಂಭದಲ್ಲಿ ಚೋಟುಮೋಟು ಪಾತ್ರಗಳಲ್ಲಿ ನಟಿಸುತ್ತಿದ್ದ ಯೋಗೇಶ್ವರ್, ನಂತರ ತಾವೇ ನಿರ್ಮಾಪಕರಾಗಿ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಸೈನಿಕ ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಸೈನಿಕ ಚಿತ್ರದಿಂದ ಸೈನಿಕ ಎಂದೇ ಖ್ಯಾತರಾಗಿರುವ ಸಿಪಿ ಯೋಗೇಶ್ವರ್, ಇದುವರೆಗೆ ಚನ್ನಪಟ್ಟಣದಿಂದಲೇ 5 ಬಾರಿ ಗೆದ್ದಿದ್ದಾರೆ. 2018 ಹಾಗೂ 2023ರಲ್ಲಿ ಕುಮಾರಸ್ವಾಮಿ ವಿರುದ್ಧವೇ ಸೋತಿದ್ದಾರೆ. ಈ ಬಾರಿಯೂ ಸೋತರೆ ಅವರಿಗೂ ಅದು ಹ್ಯಾಟ್ರಿಕ್ ಸೋಲು. ಗೆದ್ದರೆ ಸೋಲಿನ ಸರಪಳಿ ಕಳಚಿಕೊಳ್ಳುತ್ತೆ.
ಈ ಕ್ಷೇತ್ರ ಗೆಲ್ಲೋದು ಮಾಜಿ ಸಿಎಂ ಕುಮಾರಸ್ವಾಮಿಗೆ ಅತಿ ದೊಡ್ಡ ಸವಾಲು ಹಾಗೂ ಪ್ರತಿಷ್ಠೆ. ಏಕೆಂದರೆ ಅದು ಕುಮಾರಸ್ವಾಮಿಯವರೇ ನಿಂತು ಗೆದ್ದಿದ್ದ ಕ್ಷೇತ್ರ. ಈಗ ಸಂಸದರಾಗಿ, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಗೆ ತಮ್ಮ ಮಗನನ್ನು ಈ ಬಾರಿಯಾದರೂ ಗೆಲ್ಲಿಸಿಕೊಳ್ಳಬೇಕು ಎಂಬ ಹಠ ಇದೆ. ಇನ್ನು ಡಿಕೆ ಶಿವಕುಮಾರ್ ಅವರಿಗೆ ಇದು ಇನ್ನೊಂದು ರೀತಿ ಪ್ರತಿಷ್ಠೆ. ಡಿಕೆಶಿ ಅವರಿಗೆ ಇದು ತಮ್ಮ ತವರು ಜಿಲ್ಲೆ ಹಾಗೂ ತಮ್ಮನ ಲೋಕಸಭಾ ಕ್ಷೇತ್ರದ ವ್ಯಾಪಿಗೆ ಬರುವ ಕ್ಷೇತ್ರ. ಹೀಗಾಗಿ ಗೆಲ್ಲಲೇಬೇಕು ಎಂಬ ಪ್ರತಿಷ್ಠೆ. ಇನ್ನು ಸಿದ್ಧರಾಮಯ್ಯ ಅವರಿಗೂ ಕೂಡಾ ಇದು ಮುಡಾ ಹಗರಣ ಮತ್ತಿತರ ಆರೋಪಗಳ ಹಿನ್ನೆಲೆಯಲ್ಲ ಪ್ರತಿಷ್ಠೇಯೇ. ಆದರೆ ಚನ್ನಪಟ್ಟಣದಲ್ಲಿ ನಿಂತಿರೋ ಸಿಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ, ಇಬ್ಬರಲ್ಲಿ ಯಾರಾದರೊಬ್ಬರು ಸೋಲಲೇ ಬೇಕು. ಯಾರೇ ಸೋತರೂ ಅವರಿಗೆ ಇದು ಹ್ಯಾಟ್ರಿಕ್ ಸೋಲು ಎನ್ನುವುದು ವಿಶೇಷವೂ ಹೌದು. ವಿಚಿತ್ರವೂ ಹೌದು.
ಒಟ್ಟಿನಲ್ಲಿ ಎಲ್ಲರಿಗೂ ಪ್ರತಿಷ್ಠೆಯ ಯುದ್ಧವಾಗಿರೋ ಚನ್ನಪಟ್ಟಣ ಸೈನಿಕ ವರ್ಸಸ್ ಅಭಿಮನ್ಯು ಕುರುಕ್ಷೇತ್ರವಾಗಿ ಬದಲಾಗಿದೆ. ಸೋಲಿನ ಸರಪಳಿ ಕಳಚಿಕೊಳ್ಳೋ ಉತ್ಸಾಹ ಇಬ್ಬರಲ್ಲೂ ಇದೆ. ಸದ್ಯಕ್ಕೆ ಮೇಲ್ನೋಟಕ್ಕೆ ಸಿಪಿವೈ ಕೈ ಮೇಲಾದಂತೆ ಕಾಣುತ್ತಿದೆ.



