ಒಂದು ಸಿನಿಮಾದಲ್ಲಿ ಇಬ್ಬರು ಮೂವರು ಹೀರೋಗಳು ಒಟ್ಟಿಗೇ ಅಭಿನಯಿಸುವುದು ಯಾವುದೋ ಕಾಲಕ್ಕೆ ಮುಗಿದು ಹೋದ ಅಧ್ಯಾಯ ಎಂಬಂತಾಗಿ ಹೋಗಿದೆ. ಒಂದು ಕಾಲವಿತ್ತು. ಅಂಬರೀಷ್ –ವಿಷ್ಣುವರ್ಧನ್ -ಪ್ರಭಾಕರ್ – ಅನಂತ್ ನಾಗ್ – ಶಂಕರ್ ನಾಗ್ – ರವಿಚಂದ್ರನ್ ಒಟ್ಟೊಟ್ಟಿಗೇ ಅಭಿನಯಿಸುತ್ತಿದ್ದರು. ಇಬ್ಬರು ನಟಿಸುವುದು ಸಾಮಾನ್ಯ ಸಂಗತಿಯಾಗಿತ್ತು. ಮೂವರು ನಾಲ್ವರು ಹೀರೋಗಳು ಒಟ್ಟೊಟ್ಟಿಗೇ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದರು. ಪುಟ್ಟ ಪುಟ್ಟ ಪಾತ್ರಗಳಲ್ಲಿ ಬಂದು ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಅದು ಅಪರೂಪವಾಗಿದೆ. ಶಿವಣ್ಣ ಬಿಟ್ಟರೆ ಬೇರೆಯವರು ಹೀರೋ ಆಗಿರುವ ಚಿತ್ರಗಳಲ್ಲಿ ಸ್ಟಾರ್ ನಟರು ಅಭಿನಯಿಸುವುದೇ ಅಪರೂಪ. ಅಂಥಾದ್ದರಲ್ಲಿ ದುನಿಯಾ ವಿಜಯ್ ಎಂಬ ಸ್ಟಾರ್ ನಟ, ಕೋಮಲ್ ಎಂಬ ಕಾಮಿಡಿ ಕಿಂಗ್ ಇಬ್ಬರೂ ನಿಖಿಲ್ ಕುಮಾರಸ್ವಾಮಿ ಎಂಬ ಉದಯೋನ್ಮುಖ ನಟನ ಚಿತ್ರದಲ್ಲಿ ಒಟ್ಟಿಗೇ ನಟಿಸುತ್ತಿದ್ದಾರೆ.
ಹೀರೋ ಕಂ ಡೈರೆಕ್ಟರ್ ಆಗಿರುವ ವಿಜಯ್ ಅವರಿಗೆ ನಿಖಿಲ್ ಅವರ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವಿದೆ. ಅವರಷ್ಟೇ ಅಲ್ಲದೆ ಈ ಚಿತ್ರದಲ್ಲಿ ನಟ ಕೋಮಲ್ ಅವರೂ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ಆದರೆ ಇನ್ನೂ ವಿಜಯ್ ಅವರು ನಟಿಸುವುದಕ್ಕೆ ಅಧಿಕೃತ ಒಪ್ಪಿಗೆ ಕೊಟ್ಟಿಲ್ಲ ಎನ್ನಲಾಗಿದ್ದು, ಬಹುತೇಕ ಮಾತುಕತೆ ಮುಗಿದಿದೆ.
ಲೈಕಾ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ನಿಖಿಲ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನ ಬಿಗ್ ಬಜೆಟ್ ಮೂವಿ. ದುನಿಯಾ ವಿಜಯ್ ಅವರನ್ನು ಚಿತ್ರತಂಡ ಅಪ್ರೋಚ್ ಮಾಡಿದ್ದು, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಿರ್ದೇಶಕ ಲಕ್ಷ್ಮಣ್ ಅವರು ವಿಜಯ್ ಅವರನ್ನು ಭೇಟಿಯಾಗಿ ಕಥೆ ಹೇಳಿದ್ದಾರೆ. ವಿಜಯ್ ಅವರಿಗೂ ಕಥೆ & ಪಾತ್ರ ಇಷ್ಟವಾಗಿದ್ದು, ಅವರು ಬಹುತೇಕ ಗ್ರೀನ್ ಸಿಗ್ನಲ್ ನೀಡುವುದು ಖಚಿತ ಎನ್ನಲಾಗಿದೆ. ಇತ್ತೀಚೆಗೆ ತೆಲುಗಿನ ‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಎದುರು ದುನಿಯಾ ವಿಜಯ್ ವಿಲನ್ ಪಾತ್ರ ಮಾಡಿದ್ದರು.
ನಿಖಿಲ್ ಎದುರು ತೆಲುಗಿನ ‘ರಂಗಬಲಿ’ ಸಿನಿಮಾದಲ್ಲಿ ನಟಿಸಿದ್ದ ಯುಕ್ತಿ ತರೇಜಾ ನಾಯಕಿ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿ, ಬೇರೆ ಭಾಷೆಗಳಿಗೆ ಡಬ್ ಮಾಡುವ ಪ್ಲ್ಯಾನ್ ಇದೆ. ಇನ್ನೂ ಹೆಸರಿಡದ ಈ ಸಿನಿಮಾಗೆ ರಘು ನಿಡುವಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ.
ಇತ್ತ ದುನಿಯಾ ವಿಜಯ್ ಭೀಮ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ಧಾರೆ. ಭೀಮ ಚಿತ್ರಕ್ಕೆ ವಿಜಯ್ ಹೀರೋ ಅಷ್ಟೇ ಅಲ್ಲ, ಡೈರೆಕ್ಟರ್ ಕೂಡಾ ಹೌದು. ಸಲಗ ಚಿತ್ರದ ನಂತರ ವಿಜಯ್ ಅವರೇ ನಿರ್ದೇಶಿಸಿ ನಟಿಸಿರುವ ಭೀಮ ಚಿತ್ರದ ಹಾಡುಗಳು ಈಗಾಗಲೇ ಸೆನ್ಸೇಷನ್ ಸೃಷ್ಟಿಸಿವೆ.



