ಡಾ. ಮಂಜುನಾಥ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ. ಕುಮಾರಸ್ವಾಮಿಯ ಸೋದರಿಯ ಪತಿಯಾಗಿರುವ ಮಂಜುನಾಥ್, ನಿಖಿಲ್ ಅವರಿಗೆ ಸೋದರಮಾವನಾಗಬೇಕು. ಆದರೆ.. ಮಂಜುನಾಥ್ ಪರ ಪ್ರಚಾರ ನಡೆಸುವುದಕ್ಕೆ ಹೋಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಚೆನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ಧಾರೆ. ಹಾಗಂತ.. ವಿರೋಧದಿಂದ ಅಲ್ಲ. ಪ್ರೀತಿಯಿಂದ. ಇಷ್ಟಕ್ಕೂ ಚೆನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಡಿಮ್ಯಾಂಡ್ ಇಷ್ಟೇ. ಚನ್ನಪಟ್ಟಣ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಮಂಡ್ಯದಿಂದ ಸ್ಪರ್ಧಿಸಬಾರದು ಅನ್ನೋದು.
ಚೆನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಕುರಿತು ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರು, ನಾವು ಯಾವುದೇ ಕಾರಣಕ್ಕೂ ಕುಮಾರಸ್ವಾಮಿ ಅವರನ್ನು ಕ್ಷೇತ್ರದಿಂದ ಬಿಟ್ಟುಕೊಡುವುದಿಲ್ಲ. ಬೇಕಿದ್ದರೆ ನೀವೇ ಸ್ಪರ್ಧಿಸಿ ನಿಮ್ಮ ಪರ ನಾವೇ ನಿಂತು ಪ್ರಚಾರ ನಡೆಸುತ್ತೇವೆ ಎಂದು ಆಗ್ರಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್, ಮಂಡ್ಯದಿಂದ ಕುಮಾರಸ್ವಾಮಿ ಅವರು ಸ್ಪರ್ಧಿಸುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಕಾರ್ಯಕರ್ತರನ್ನು ಸಮಾಧಾನಿಸಿದ್ದಾರೆ.
ಕುಮಾರಸ್ವಾಮಿ ಚನ್ನಪಟ್ಟಣದಲ್ಲೇ ಇರಬೇಕೆಂದು ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟುಹಿಡಿದು, ಕುಮಾರಸ್ವಾಮಿ ಮಂಡ್ಯಕ್ಕೆ ಹೋಗದ ಕುರಿತು ಸ್ಪಷ್ಟಪಡಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿಗೆ ಮುತ್ತಿಗೆ ಹಾಕಿದರು. ಈ ವೇಳೆ ಕಾರ್ಯಕರ್ತರನ್ನು ಸಮಾಧಾನಪಡಿಸಿದ ನಿಖಿಲ್, ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧಿಸುವ ಕುರಿತು ಇನ್ನು ಯಾವುದೇ ತೀರ್ಮಾನವಾಗಿಲ್ಲ. ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಕುಮಾರಸ್ವಾಮಿ ಆಸ್ಪತ್ರೆಯಿಂದ ಹೊರಬಂದ ನಂತರ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಎಲ್ಲ ಅಭಿಪ್ರಾಯ ಪಡೆದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಹೃದಯ ಸಂಬಂಧಿ ಸಮಸ್ಯೆಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ವೈದ್ಯರು ಕುಮಾರಸ್ವಾಮಿ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆದು ಇದೇ 25ರಂದು ನಗರಕ್ಕೆ ಆಗಮಿಸಲಿದ್ದಾರೆ. ಬಳಿಕ ಲೋಕಸಭಾ ಚುನಾವಣೆಯತ್ತ ಗಮನಹರಿಸಲಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ಧಾರೆ.
ಮಂಡ್ಯಕ್ಕೆ ಕುಮಾರಸ್ವಾಮಿಯೇ ಅಭ್ಯರ್ಥಿ : ಮಂಡ್ಯ ಲೋಕಸಭಾ ಕ್ಷೇತ್ರ ಯಾರಿಗೆ ಎಂದು ತೀರ್ಮಾನವಾಗಿಲ್ಲವಾದರೂ.. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ತಿಳಿಸಿದ್ದಾರೆ. ನಾನೇ ಚುನಾವಣೆಯ ನೇತೃತ್ವ ವಹಿಸುತ್ತೇನೆ. ಅತ್ಯಂತ ಪ್ರಚಂಡ ಬಹುಮತದಲ್ಲಿ ಅವರನ್ನು ಗೆಲ್ಲಿಸುತ್ತೇವೆ. ಚೆನ್ನೈನಲ್ಲಿ ಕುಮಾರಸ್ವಾಮಿಯವರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮೂರ್ನಾಲ್ಕು ದಿನದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ಧಾರೆ.
ಮಂಡ್ಯ ಬಿಟ್ಟುಕೊಡಲ್ಲ : ಸುಮಲತಾ ಅಂಬರೀಷ್
ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರ ಜೊತೆಗೆ ಮಂಡ್ಯ ಟಿಕೆಟ್ ವಿಚಾರವಾಗಿ ಮಾತುಕತೆ ನಡೆಸಿದ ಬಳಿಕ ಬೆಂಗಳೂರಿಗೆ ಬಂದಿರುವ ಸುಮಲತಾ ಅಂಬರೀಷ್ ತಾನೇನಿದ್ದರೂ ಮಂಡ್ಯದಿಂದಲೇ ಸ್ಪರ್ಧಿಸುವುದು. ನನ್ನ ರಾಜಕೀಯ ಏನೇ ಆದ್ರೂ ಮಂಡ್ಯದಿಂದ ಮಾತ್ರ ಎನ್ನುವ ಮೂಲಕ ಮಂಡ್ಯ ಬಿಟ್ಟುಕೊಟ್ಟಿಲ್ಲ ಎಂಬ ಸಂದೇಶ ರವಾನಿಸಿದ್ಧಾರೆ ಸಂಸದರೂ ಆಗಿರುವ ಸುಮಲತಾ.



