ಇಬ್ಬರೂ ಕುಬೇರರೇ. ಇಬ್ಬರೂ ಕೋಟ್ಯಧಿಪತಿಗಳೇ. ಈ ಇಬ್ಬರ ಆಸ್ತಿಯ ಲೆಕ್ಕ ಈಗ ಸಿಕ್ಕಿದೆ. ವಿಶೇಷ ಏನೆಂದರೆ ಈ ಇಬ್ಬರ ಆಸ್ತಿಯೂ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ನಿಖಿಲ್ ಕುಮಾರಸ್ವಾಮಿ ಅವರ ಆಸ್ತಿ ಇದೀಗ ಅವರೇ ಘೋಷಿಸಿಕೊಂಡಿರುವಂತೆ 113 ಕೋಟಿ.
113 ಕೋಟಿ ರೂಪಾಯಿ ಆಸ್ತಿಯಲ್ಲಿ 78.15 ಕೋಟಿ ರೂ. ಮೌಲ್ಯದ ಚರಾಸ್ತಿ, 29.34 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ರೇವತಿ ನಿಖಿಲ್ ಹೆಸರಲ್ಲಿಯೂ 5.49 ಕೋಟಿ ರೂ. ಮೌಲ್ಯದ ಚರಾಸ್ತಿ, 43 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪುಟ್ಟ ಮಗ ಆವ್ಯಾನ್ ದೇವ್ ಹೆಸರಲ್ಲಿ 11 ಲಕ್ಷ ರೂಪಾಯಿ ಇದೆ.
ಇನ್ನು ಚಿನ್ನ ನಿಖಿಲ್ ಹೆಸರಲ್ಲಿ 1.488 ಕೆಜಿ (ಒಂದು ಕೆಜಿ 488 ಗ್ರಾಂ), 16 ಕೆಜಿ ಬೆಳ್ಳಿ ಇದೆ. ಪತ್ನಿ ರೇವತಿ ಹೆಸರಲ್ಲಿಯೂ 1.411 ಕೆಜಿ ಚಿನ್ನ (ಒಂದು ಕೆಜಿ 411 ಗ್ರಾಂ), 33.05 ಕೆಜಿ ಬೆಳ್ಳಿ, 13 ಕ್ಯಾರೆಟ್ ಡೈಮಂಡ್ ಇದೆ. 1 ಇನ್ನೋವಾ ಐ ಕ್ರಾಸ್, 1 ರೇಂಜ್ ರೋವರ್ ಹಾಗೂ 2 ಕ್ಯಾರಾವ್ಯಾನ್, 1 ಇನ್ನೋವಾ ಕ್ರಿಸ್ಟಾ ಕಾರು ಇವೆ. ನಿಖಿಲ್ ಹೆಸರಲ್ಲಿ ಒಟ್ಟು 70. 44 ಕೋಟಿ ರೂಪಾಯಿ ಸಾಲ ಇದೆ. ರೇವತಿ ಹೆಸರಲ್ಲಿ 4.96 ಕೋಟಿ ರೂ. ಸಾಲ ಇದೆ.
2023ರಲ್ಲಿ ನಿಖಿಲ್ ಆಸ್ತಿ ಎಷ್ಟಿತ್ತು..?
2023ರಲ್ಲಿ ನಿಖಿಲ್ ಕುಮಾರಸ್ವಾಮಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಆಗ ಅವರು ಘೋಷಿಸಿಕೊಂಡಿದ್ದ ಒಟ್ಟು ಆಸ್ತಿ ಮೌಲ್ಯ 77 ಕೋಟಿ ರೂ. ಆಗ ಅಂದರೆ 2023ರಲ್ಲಿ 46.81 ಕೋಟಿ ರೂ. ಮೌಲ್ಯದ ಚರಾಸ್ತಿ, 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇತ್ತು. ಈಗ ಚರಾಸ್ತಿ ಕಡಿಮೆಯಾಗಿದ್ದರೆ, ಸ್ಥಿರಾಸ್ತಿ ಹೆಚ್ಚಾಗಿದೆ. ರೇವತಿಯವರ ಆಸ್ತಿಯೂ 1.79 ಕೋಟಿಯಿಂದ 5.49 ಕೋಟಿ ರೂಗೆ ಏರಿದೆ. ಚಿನ್ನ ಬೆಳ್ಳಿಯ ಪ್ರಮಾಣದಲ್ಲಿ ತುಂಬಾ ವ್ಯತ್ಯಾಸವೇನೂ ಆಗಿಲ್ಲ. ಅದಕ್ಕೂ ಮುನ್ನ ಮಂಡ್ಯ ಲೋಕಸಭೆಯಲ್ಲಿ ಚುನಾವಣೆಗೆ ನಿಂತಿದ್ದಾಗ ನಿಖಿಲ್ ಅವರ ಆಸ್ತಿ 74 ಕೋಟಿ ಎಂದು ಘೋಷಿಸಿಕೊಂಡಿದ್ದರು. ನಂತರ ರಾಮನಗರ ಚುನಾವಣೆ ವೇಳೆ 3 ಕೋಟಿ ಹೆಚ್ಚಳವಾಗಿತ್ತು. ಈಗ ಒಂದು ವರ್ಷದಲ್ಲಿ 77 ಕೋಟಿಯಿಂದ 113 ಕೋಟಿಗೆ ಹೆಚ್ಚಳವಾಗಿದೆ. ಅಂದರೆ 36 ಕೋಟಿಗೂ ಹೆಚ್ಚಳವಾಗಿದೆ.
ಇನ್ನು ಸಿಪಿ ಯೋಗೇಶ್ವರ್ ವಿಚಾರಕ್ಕೆ ಬಂದರೆ.. ಸಿಪಿವೈ ಬಳಿ ಒಟ್ಟು 70 ಕೋಟಿ ಆಸ್ತಿ ಇದೆ. 7 ಕೋಟಿ, 25 ಲಕ್ಷ 20 ಸಾವಿರದ 470 ರೂಪಾಯಿ ಮೌಲ್ಯದ ಚರಾಸ್ತಿ ಪತ್ನಿ ಹೆಸರಲ್ಲಿ 25 ಕೋಟಿ 35 ಲಕ್ಷ 37 ಸಾವಿರದ 740 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದು, 7 ಕೋಟಿ 10 ಲಕ್ಷ 80 ಸಾವಿರದ 556 ರೂಪಾಯಿಯಷ್ಟು ಚರಾಸ್ತಿ ಇದೆ.
ಯೋಗೇಶ್ವರ್ ಹೆಸರಲ್ಲಿ 22 ಮೌಲ್ಯದ ಕೃಷಿ ಭೂಮಿ ಇದ್ದರೆ, ಪತ್ನಿ ಶೀಲಾ ಹೆಸರಲ್ಲಿ 2 ಕೋಟಿ ಮೌಲ್ಯದ ಭೂಮಿ ಇದೆ. ಶೀಲಾ ಅವರ ಹೆಸರಲ್ಲಿ ಕೃಷಿಯೇತರ ಭೂಮಿ 6.65 ಎಕರೆ ಇದೆ. ಒಟ್ಟಾರೆ ನೋಡಿದಾಗ ಆಸ್ತಿ ಸ್ವಲ್ಪ ಹೆಚ್ಚಾಗಿದೆ. ಆದರೆ ಸಾಲದ ಪ್ರಮಾಣ ಇನ್ನೂ ಹೆಚ್ಚಾಗಿದೆ. ಯೋಗೇಶ್ವರ್ ಹೆಸರಲ್ಲಿ ಒಟ್ಟು 10 ಕ್ರಿಮಿನಲ್ ಕೇಸ್ಗಳು ದಾಖಲಾಗಿವೆ ಎಂದು ಹೇಳಲಾಗಿದೆ. ಜೊತೆಗೆ ಯೋಗೇಶ್ವರ್ ಹೆಸರಲ್ಲಿ ಒಂದು ಮರ್ಸಿಡಿಸ್ ಬೆಂಜ್ ಹಾಗೂ ಒಂದು ಬಿಎಂಡಬ್ಲ್ಯೂ ಕಾರ್ ಇದೆ.



