ರಾಜ್ಯದಲ್ಲಿ ಜೆಡಿಎಸ್‌ಗೆ ಹೊಸ ಶಕ್ತಿ ತುಂಬುವ ಪ್ರಯತ್ನಗಳು ಶುರುವಾಗಿವೆ. ಪಕ್ಷ ಸಂಘಟನೆ ನಿಟ್ಟಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯ ಪ್ರವಾಸ ಆರಂಭವಾಗಿದೆ. ಪಕ್ಷ ಸಂಘಟನೆ ನಿಟ್ಟಿನಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರವಾಸ ಮುಗಿದ ನಂತರ ರಾಜ್ಯಾಧ್ಯಕ್ಷ ಹುದ್ದೆಗೆ ಪಟ್ಟಾಭಿಷೇಕವೂ ನೆರವೇರಲಿದೆ. ನಿಖಿಲ್ ಕುಮಾರಸ್ವಾಮಿ ಕೈಗೊಂಡಿರುವ ‘ಸಂಘಟನಾ ರಾಜ್ಯ ಪ್ರವಾಸ’ ಹಾಗೂ ‘ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನ’ಕ್ಕೆ ಚಾಲನೆ ನೀಡಲಾಗುತ್ತಿದೆ. ಆದರೆ ಜೆಡಿಎಸ್ ಕಾರ್ಯಕರ್ತರ ಅತಿ ದೊಡ್ಡ ಸಮಸ್ಯೆ ಬಗೆಹರಿಯುವ ಯಾವ ಸೂಚನೆಗಳೂ ಸದ್ಯಕ್ಕೆ ಕಾಣ್ತಾ ಇಲ್ಲ.
ʻʻಪ್ರತೀ ಚುನಾವಣೆಯಲ್ಲೂ ಪಕ್ಷ 22% ಮತಗಳನ್ನು ಪಡೆಯುತ್ತಿತ್ತು. ಈಗ ಅದರ ಪ್ರಮಾಣ ಕಡಿಮೆ ಆಗಿದೆ.ಇನ್ನೂ ಕಡಿಮೆ ಆಗುತ್ತಲೇ ಹೋಗ್ತಿದೆ. ಜನರ ಭಾವನೆ ಅರ್ಥ ಮಾಡಿಕೊಳ್ಳುವುದಕ್ಕಾಗಿ ಪ್ರವಾಸ ಮಾಡುತ್ತಿದ್ದೇನೆ ಎಂದಿದ್ದಾರ ನಿಖಿಲ್. ಒಟ್ಟು 58 ದಿನಗಳ ಕಾಲ ತುಮಕೂರು, ರಾಯಚೂರು, ಕೊಪ್ಪಳ. ವಿಜಯನಗರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ 90 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಅಂದರೆ, ದಿನಕ್ಕೆ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಪಕ್ಷದ ಸ್ಥಳೀಯ ಮುಖಂಡರು, ಗ್ರಾಪಂ, ತಾಪಂ, ಜಿಪಂ ಸದಸ್ಯರು, ಬೂತ್, ಹೋಬಳಿ, ತಾಲೂಕು ಮಟ್ಟದ ಪದಾಧಿಕಾರಿಗಳೊಂದಿಗೆ ನಿಖಿಲ್ ಸಭೆ ನಡೆಸಿ ಬೇರು ಮಟ್ಟದಿಂದ ಪಕ್ಷದ ಬಲವರ್ಧನೆ ಬಗ್ಗೆ ಚರ್ಚಿಸಲಿದ್ದಾರೆ. ಮುಖಂಡರು ಹಾಗೂ ಪದಾಧಿಕಾರಿಗಳ ಅನಿಸಿಕೆ ಹಾಗೂ ಸಲಹೆಗಳನ್ನು ಆಲಿಸಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಪಕ್ಷದ ತಯಾರಿ ಸೇರಿ ಪಕ್ಷ ಸಂಘಟನೆ ಕುರಿತು ಮುಖಂಡರೊಂದಿಗೆ ಚರ್ಚಿಸಲಿದ್ದಾರೆ.
ಇದು ನಿಖಿಲ್ ವಿಷಯವಾದರೆ, ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ನಾನು ಇನ್ನೂ ನಿಮ್ಮ ಜೊತೆ ಹದಿನೈದು ಇಪ್ಪತ್ತು ವರ್ಷ ಕಾಲ ಇರುತ್ತೇನೆ. ಜನತಾದಳವೂ ಇರುತ್ತದೆ. ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಜೆಡಿಎಸ್ ಬಿಟ್ಟು ಬನ್ನಿ ಎನ್ನುವವರಿಗೆ ಈ ಸಭೆಯ ಮೂಲಕ ಉತ್ತರ ಕೊಟ್ಟಿದ್ದೀರಿ. ಧೈರ್ಯದಿಂದ ಹೊರಡಿ, ಈ ಸಲ ಜನತಾದಳ, ಬಿಜೆಪಿ ಮೈತ್ರಿ ಸರಕಾರ ಬರಲಿದೆ. ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಕೈಲಾಗದವರು ಅಪಪ್ರಚಾರ ಮಾಡುತ್ತಾರೆ. ಅವರಿಗೆಲ್ಲ ದಿಟ್ಟ ಉತ್ತರ ಕೊಡೋಣ ಎಂದು ಹೇಳಿದ್ದಾರೆ.
ಇದರ ನಡುವೆ ಕುಮಾರಸ್ವಾಮಿ ಸೇರಿದಂತೆ ಬಹುತೇಕ ನಾಯಕರು ಮಾಡುತ್ತಿರುವ ಪ್ರಾಬ್ಲಂ ಗೊತ್ತಾಗಿದ್ದೂ ಆಯ್ತು. ಏನೆಂದರೆ ಪಕ್ಷದ ಕಾರ್ಯಕರ್ತರು ತಮ್ಮ ತಮ್ಮ ಬೇಡಿಕೆಗಳನ್ನು ಬರೆದು ತಂದಿದ್ದರು. ಆದರೆ ಅದೆಲ್ಲವನ್ನೂ ಮಾತನಾಡಿದ ನಂತರ ನೋಡುತ್ತೇನೆ ಎಂದರು ಕುಮಾರಸ್ವಾಮಿ. ಇಲ್ಲ.. ಇಲ್ಲ.. ನೀವು ಆಮೇಲೆ ಅದನ್ನು ಮರೆತೇ ಹೋಗುತ್ತೀರಿ.. ಪತ್ರಗಳನ್ನೂ ತೆಗೆದುಕೊಳ್ಳಲ್ಲ.. ಎಂದು ಹಠ ಹಿಡಿದು ಕಾರ್ಯಕರ್ತರು, ಮೊದಲೇ ಪತ್ರಗಳನ್ನು ಕೊಟ್ಟರು. ಜೆಡಿಎಸ್ ಸಮಸ್ಯೆಯೇ ಇದು. ಪಕ್ಷಕ್ಕೆ ಕಾರ್ಯಕರ್ತರು ಬೇಕು. ನಾಯಕರನ್ನು ಗೆಲ್ಲಿಸಿಕೊಂಡು ಬರಬೇಕು. ಆದರೆ, ಅದೇ ಕಾರ್ಯಕರ್ತರು ತಮ್ಮ ಕೆಲಸ ಆಗಬೇಕು ಎಂದರೆ ನಾಯಕರನ್ನು ಗೆಲ್ಲಿಸಿದ್ದಕ್ಕೆ ವಹಿಸಿದ ಶ್ರಮಕ್ಕಿಂತ ಹೆಚ್ಚಿನ ಶ್ರಮ ಹಾಕಿ ಹೋರಾಡಬೇಕು. ನಿಖಿಲ್ ಕುಮಾರಸ್ವಾಮಿ ಈ ಸಮಸ್ಯೆಯನ್ನು ಮೊದಲು ಅಡ್ರೆಸ್ ಮಾಡಬೇಕು ಎಂದಿದ್ದಾರೆ ಪಕ್ಷದ ಕೆಲವು ಹಿರಿಯ ಕಾರ್ಯಕರ್ತರು.
ಕೊನೆಗೆ ಪತ್ರ ಪಡೆದುಕೊಂಡ ಕುಮಾರಸ್ವಾಮಿ, ಇನ್ನೂ ಹದಿನೈದಿಪ್ಪತ್ತು ವರ್ಷ ಗಟ್ಟಿಯಾಗಿರ್ತೇನೆ ಹೆದರಬೇಡಿ ಎಂದು ಹೇಳಿದ್ಧಾರೆ.



