ವಿಚಿತ್ರವೆಂದರೂ ಇದು ಸತ್ಯ. ಒಂದೆಡೆ ಎಐಸಿಸಿ ಆಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿದರೆ ಮಾಡಿದ ಪಾಪ ಹೋಗೋದಿಲ್ಲ. ಅದ್ಯಾಕೆ ಹೋಗ್ತಾರೋ.. ಏನೋ.. ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ದೇಶಾದ್ಯಂತ ಭಾರೀ ವಿರೋಧಗಳು ಕೇಳಿ ಬಂದಿದ್ದವು. ಸಿಎಂ ಸಿದ್ಧರಾಮಯ್ಯ ಕೂಡಾ ಖರ್ಗೆ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಇನ್ನೂ ವಿಶೇಷ ಎಂದರೆ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಪಕ್ಕಾ ನಾಸ್ತಿಕರು. ಸ್ಮಶಾನದಲ್ಲಿ ಹೊಸ ಕಾರಿಗೆ ಪೂಜೆ ಮಾಡುವ ಪ್ರಗತಿಪರ ನಾಯಕ. ಹಿಂದೂ ಧರ್ಮವನ್ನು ಅಶ್ಲೀಲಕ್ಕೆ ಹೋಲಿಸಿದವರು. ಈಗ ಅವರ ಪರವಾಗಿ ಮಹಾಕುಂಭ ಮೇಳದಲ್ಲಿ ಮುಂದಿನ ಸಿಎಂ ಎಂಬ ಕೂಗು ಹೇಳಿ ಬಂದಿದೆ.
ಕಾಂಗ್ರೆಸ್ಸಿನಲ್ಲೂ ನಿಂತಿಲ್ಲ ʻಮುಂದಿನ ಸಿಎಂʼ ಮುಸುಕಿನ ಗುದ್ದಾಟ
ಕರ್ನಾಟಕ ಕಾಂಗ್ರೆಸ್ ಮನೆ ಬೂದಿ ಮುಚ್ಚಿದ ಕೆಂಡದಂತಿದ್ದು, ಪಟ್ಟದ ಆಟ ಮುಂದುವರೆದಿದೆ. ಸಿಎಂ ರೇಸ್‌ನಲ್ಲಿ ಇರುವವರ ಬೆಂಬಲಿಗರು ಅಲ್ಲಲ್ಲಿ ಮುಂದಿನ ಸಿಎಂ ಕೂಗೆಬ್ಬಿಸ್ತಿದ್ದಾರೆ. ಈ ಕೂಗು ಇದೀಗ ಕುಂಭಮೇಳಕ್ಕೂ ವ್ಯಾಪಿಸಿದೆ. ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಅಂತಾ ಅಭಿಮಾನಿಯೊಬ್ಬ ಹರಕೆ ಹೊತ್ತಿದ್ದಾನೆ.
ಇತ್ತ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ಗೆ ‘ರಾಜ್ಯದ ಚುಕ್ಕಾಣಿ’ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳುತ್ತಿದ್ದಂತೆಯೇ ಕೈ ಪಾಳಯದಲ್ಲಿ ಸಂಚಲನ ಶುರುವಾಗಿದೆ. ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂಬ ಚರ್ಚೆ ಬಂದಾಗಲೆಲ್ಲಾ ವಿರೋಧಿ ಬಣವೂ ಅದೇ ವಿಚಾರವಿಟ್ಟು ಕೌಂಟರ್ ಕೊಡುತ್ತಿದೆ. ಅತ್ತ, ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು. ದಲಿತ ಸಿಎಂ ಆಗಬೇಕು ಎಂಬ ವಿಚಾರ ಮಹಾಕುಂಭಮೇಳಕ್ಕೂ ತಲುಪಿದೆ.
ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಅಭಿಮಾನಿಯೊಬ್ಬ ಹರಕೆ ಹೊತ್ತು ಪುಣ್ಯಸ್ನಾನ ಮಾಡಿದ್ದಾನೆ. ಇದಕ್ಕೆ ಸತೀಶ್ ಜಾರಕಿಹೊಳಿ ಸಪೋರ್ಟ್ ಇದ್ಯಾ.. ಕುಂಭಮೇಳದಲ್ಲಿ ಹರಕೆ ಹೊತ್ತರೆ ಬೇಡಿಕೆ ಈಡೇರುತ್ತಾ.. ಎಂದೆಲ್ಲ ಸತೀಶ್ ಜಾರಕಿಹೊಳಿ ಸಿದ್ಧಾಂತದ ವಿರೋಧಿಗಳು ಅಪಹಾಸ್ಯ ಮಾಡ್ತಿರೋದು ಗುಟ್ಟೇನಲ್ಲ.
ಇತ್ತ ಮಾಗಡಿ ಬಾಲಕೃಷ್ಣ ಹೇಳಿಕೆ ನಂತರ ಹಿರಿಯ ಸಚಿವರಾದ ಹೆಚ್‌ಕೆ ಪಾಟೀಲ್, ಬಾಲಕೃಷ್ಣ ಹೇಳಿಕೆಗೆ ಸಮರ್ಥನೆ ಅಥವಾ ವಿರೋಧ ಮಾಡದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತೇ ಅಂತಿಮ ಎಂದಿದ್ದಾರೆ. ಇನ್ನು ಸಚಿವ ಎಂಸಿ ಸುಧಾಕರ್ ʻಡಿಕೆ ಶಿವಕುಮಾರ್ ಸಿಎಂ ಆಗಬೇಕು ಅನ್ನೋದ್ರಲ್ಲಿ ತಪ್ಪೇನಿಲ್ಲ. ಇಷ್ಟಕ್ಕೂ ಅವರೇನೂ ಡಿಕೆ ಈಗಲೇ ಸಿಎಂ ಆಗಲಿ ಎಂದು ಹೇಳಿಲ್ಲʼ ಎಂದಿದ್ದಾರೆ.
ಈಗಾಗಲೇ ಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದಿದ್ದರು. ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದಿದ್ದರು. ಇದೀಗ ಭೋವಿ ಸಮಾಜದ ಸಿದ್ದರಾಮೇಶ್ವರ ಶ್ರೀಗಳು ಹೆಚ್‌ಕೆ ಪಾಟೀಲ್‌ಗೆ ಸಿಎಂ ಆಗುವ ಯೋಗ ಇದೆ ಎಂದಿದ್ದಾರೆ. ಈ ಬಗ್ಗೆ ಎಚ್ಚರಿಕೆಯಿಂದಲೇ ಪ್ರತಿಕ್ರಿಯಿಸಿದ ಕಾನೂನು ಸಚಿವರು, ಏನೂ ಹೇಳುವುದಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಎಲ್ಲವೂ ಕೂಲ್ ಆಯ್ತು ಎನ್ನುವ ಹೊತ್ತಿನಲ್ಲೇ ʻಕಾಂಗ್ರೆಸ್ಸಿನಲ್ಲಿ ಮತ್ತೆ ಸಿಎಂ ಬದಲಾವಣೆʼ ಕೂಗು ಜೋರಾಗಿದೆ.



