ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದಿದ್ದಾರೆ ಜೈನಮುನಿ ಗುಣಧರ ನಂದಿ ಮಹಾರಾಜ್. ಹುಬ್ಬಳ್ಳಿಯ ವರೂರು ನವಗ್ರಹ ಕ್ಷೇತ್ರದಲ್ಲಿ ಜೈನಮುನಿ ಗುಣಧರ ನಂದಿ ಮಹಾರಾಜ್ ಹೇಳಿಕೆ ನೀಡಿದ್ದು ʻʻಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕಾಗಿ ಕಷ್ಟ ಪಟ್ಟಿದ್ದಾರೆ, ಅವರು ಸಿಎಂ ಆಗಲಿʼʼ ಎಂದು ಆಶೀರ್ವಾದ ಮಾಡಿದ್ದಾರೆ. ನೀವು ಆಶೀರ್ವಾದ ಮಾಡಿದಾಗಲೆಲ್ಲ ನಮಗೆ ಏಟು ಬೀಳ್ತಾ ಇರುತ್ತೆ ಎಂದಿರುವ ಡಿಕೆಶಿ ಈ ಮೊದಲು ವಿನಯ್ ಗುರೂಜಿ ಅವರೂ ಕೂಡಾ ʻಡಿಕೆಶಿ ಸಿಎಂ ಆಗುತ್ತಾರೆʼ ಎಂದು ಹೇಳಿದ್ದನ್ನೂ ಸ್ಮರಿಸಿದ್ದಾರೆ.
ಇತ್ತ ಬೆಳಗಾವಿಯಲ್ಲಿ ಪ್ರಿಯಾಂಕಾ ವಾದ್ರಾ ಎದುರು ಡಿಕೆಶಿ ಸಿಎಂ ಆಗಲಿ ಎಂಬ ಘೋಷಣೆ ಕೇಳಿ ಬಂದಿದ್ದು, ʻʻಕಾಯುವುದಕ್ಕೆ ನಾನು ಸಿದ್ಧನಿದ್ದೇನೆ, ಆತುರವೇನೂ ಇಲ್ಲʼʼ ಎಂದಿದ್ದಾರೆ ಡಿಕೆಶಿ. ಅಭಿಮಾನಿಗಳು ಕೂಗುವುದು ಅವರ ಇಷ್ಟ, ಕೂಗುತ್ತಾರೆ.ಅಗತ್ಯ ಸಂದರ್ಭದಲ್ಲಿ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.
ಇನ್ನು ಖರ್ಗೆ ವಾರ್ನಿಂಗ್ ಕೊಟ್ಟ ನಂತರ ಕಾಂಗ್ರೆಸ್ ಒಳಗೇ ಇದ್ದ ಭಿನ್ನಮತ ಸಡನ್ ಕೂಲ್ ಆಗಿದೆ. ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಭೈರತಿ ಸುರೇಶ್ ಊಟಕ್ಕೆ ಸೇರುವುದು ಸಹ ಡಿನ್ನರ್ ಪಾಲಿಟಿಕ್ಸಾ, ಡಿನ್ನರ್ ಮಾಡುವುದಕ್ಕೆ ನಮ್ಮಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದರೆ ಪ್ರತ್ಯೇಕ ಸಭೆಗಳನ್ನ ಮಾಡದಂತೆ ಎಐಸಿಸಿ ಸೂಚನೆ ನೀಡಿದೆ, ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತಿದ್ದೇವೆ. ಮುಖ್ಯಮಂತ್ರಿಗಳು ಎಷ್ಟು ಮುಖ್ಯಾನೋ ಡಿಸಿಎಂ ಸಹ ಅಷ್ಟೇ ಮುಖ್ಯ, ಅಧಿಕಾರ ಹಂಚಿಕೆ ಕುರಿತು ನನಗೆ ಗೊತ್ತಿಲ್ಲ, ಯಾರಿಗೆ ಯಾವ್ಯಾವ ಸ್ಥಾನ, ಅಧಿಕಾರ ಕೊಡಬೇಕು ಅನ್ನೋದು ಹೈ ಕಮಾಂಡ್‌ಗೊತ್ತು, ನಾವೆಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಅತ್ತ ಡಿಕೆ ಶಿವಕುಮಾರ್ ಪಕ್ಷವನ್ನು ಉಳಿಸುವುದು, ಸರ್ಕಾರವನ್ನು ಭದ್ರವಾಗಿಡುವುದೇ ನನ್ನ ಕರ್ತವ್ಯ. ಇದರ ಹೊರತಾಗಿ ನನಗೆ ಬೇರೆ ಯಾವುದೇ ಕರ್ತವ್ಯಗಳಿಲ್ಲ. ನನಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ. ನಾನು ಆರಂಭದಿಂದಲೂ ಪಕ್ಷಕ್ಕಾಗಿ ಹಲವು ಸಂದರ್ಭಗಳಲ್ಲಿ ತ್ಯಾಗಗಳನ್ನು ಮಾಡಿದ್ದೇನೆ. ದಿ. ಎನ್. ಧರಂ ಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ತ್ಯಾಗ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯ ಸಮಯದಲ್ಲಿಯೂ ಸಹ, ನಾನು ಹಿಂದೆ ಸರಿದು ತ್ಯಾಗ ಮಾಡಿದ್ದೇನೆ. ನನಗೆ ಪಕ್ಷವೇ ಮುಖ್ಯ. ನಾನು ಪಕ್ಷದಿಂದ ಬೆಳೆದವನು. ವಿದ್ಯಾರ್ಥಿ ನಾಯಕನಾಗಿದ್ದ ನನ್ನನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿತ್ತು. ಮಾಧ್ಯಮದವರು ಯಾರ ಮಾತನ್ನೋ ಕೇಳಬೇಡಿ ಎಂದಿದ್ದಾರೆ. ಆದರೆ ವಿಷಯ ಅದಲ್ಲ.. ಕೊನೆಯಲ್ಲಿ ಹೇಳಿರುವ ಆ ಇನ್ನೊದು ಮಾತು. ಷ್ಟು ದಿನ ಶಿವಕುಮಾರ್ ಅವರು ತ್ಯಾಗ ಮಾಡುತ್ತಾರೆ, ತ್ಯಾಗಕ್ಕೆ ಫಲ ಯಾವಾಗ ಸಿಗುತ್ತದೆ ಎಂದು ಕೇಳಿದಾಗ, “ನಾನು ತ್ಯಾಗ ಮಾಡಿಕೊಂಡೆ ಬಂದಿದ್ದೇನೆ. ಮುಂದೆಯೂ ತ್ಯಾಗ ಮಾಡುತ್ತೇನೆ. ನನಗೆ ಫಲದ ಅವಶ್ಯಕತೆಯೇ ಇಲ್ಲ. ಜನಕ್ಕೆ ಒಳೆಯದಾಗುತ್ತಿದೆಯಲ್ಲ, ಅಷ್ಟು ಸಾಕು ನನಗೆʼ ಎಂದಿದ್ದಾರೆ. ಅದು ಮುಗಿಯುತ್ತಿದ್ದಂತೆಯೇ ಅಗತ್ಯ ಸಂದರ್ಭದಲ್ಲಿ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ. ರಾಜ್ಯ ರಾಜಕೀಯ ಮತ್ತೊಮ್ಮೆ ದಿಕ್ಕು ಬದಲಿಸುತ್ತಿದೆ.



