ಕನ್ನಡ ಟಿವಿ ಲೋಕದಲ್ಲಿ ಆಗಾಗ್ಗೆ ಬದಲಾವಣೆಗಳಾಗುತ್ತಲೇ ಇರುತ್ತವೆ. ಸುಮಾರು ದಶಕಗಳ ಕಾಲ ಉದಯ ಟಿವಿ ನಂ.1 ಆಗಿತ್ತು. ಅದನ್ನು ಹಿಂದೆ ಹಾಕಿದ್ದು ಕಲರ್ಸ್ ಕನ್ನಡ. ಕಲರ್ಸ್ ಕನ್ನಡವನ್ನು ಹಿಂದೆ ತಳ್ಳಿ ಜೀ ಕನ್ನಡ ಈಗ ನಂ.1 ಆಗಿದೆ. ಅದು ಶಾಶ್ವತವಾಗಿರುತ್ತದಾ.. ಗೊತ್ತಿಲ್ಲ. ಈಗ ಕನ್ನಡ ಸುದ್ದಿವಾಹಿನಿಗಳಲ್ಲಿ ನಂಬರ್ಸ್ ಅದಲು ಬದಲಾಗುತ್ತಿವೆ. TV9 ಶುರುವಾದಾಗಿನಿಂದ ಹಲವು ಚಾನೆಲ್ಲುಗಳು ಬಂದಿವೆ. ಕೆಲವು ಬಾಗಿಲು ಮುಚ್ಚಿವೆ. ಆದರೆ, TV9 ಅಲುಗಾಡದೆ ನಂ.1 ಸ್ಥಾನದಲ್ಲಿಯೇ ಇತ್ತು. ಅದರೆ.. ಇದೇ ಮೊದಲ ಬಾರಿಗೆ ನಂ.2 ಸ್ಥಾನಕ್ಕೆ ಕುಸಿದಿದೆ.
ಈ ವಾರ ರಿಲೀಸ್ ಆಗಿರುವ ಹೊಸ ಬಾರ್ಕ್ ರೇಟಿಂಗ್‌ನಲ್ಲಿ 15+ ಕೆಟಗರಿ ವೀಕ್ಷಕರಲ್ಲಿ ಟಿವಿ 9, 2ನೇ ಸ್ಥಾನದಲ್ಲಿದೆ. ಈ ಹಿಂದೆ ಬೆಂಗಳುರು, ರೂರಲ್.. ಇತ್ಯಾದಿ ಪ್ರತ್ಯೇಕ ಕೆಟಗರಿಗಳಲ್ಲಿ ಆಗಾಗ್ಗೆ ನಂ.1 ಸ್ಥಾನವನ್ನು ಬಿಟ್ಟು ಕೊಟ್ಟ ಇತಿಹಾಸ ಇದೆ. ಆದರೆ.. ಒಟ್ಟಾರೆಯಾಗಿ ಎಲ್ಲ ವಿಭಾಗಗಳಲ್ಲೂ ನಂ.1 ಪಟ್ಟವನ್ನು ಬೇರೆ ಚಾನೆಲ್ಲಿಗೆ ಬಿಟ್ಟುಕೊಟ್ಟಿರುವುದು ಇದೇ ಮೊದಲು.
ಟಿವಿ9 ತೆರವು ಮಾಡಿರುವ ಸ್ಥಾನಕ್ಕೆ ವಿರಾಜಮಾನವಾಗಿ ಕುಳಿತಿರುವುದು ನ್ಯೂಸ್ 18. ನ್ಯೂಸ್ 18ಗೆ ಸುದೀರ್ಘ ಇತಿಹಾಸವೇನೂ ಇಲ್ಲ. 2013-14ರಲ್ಲಿ ಈಟಿವಿ ನ್ಯೂಸ್ ಎಂದು ಶುರುವಾದ ಚಾನೆಲ್, ನಂತರ ನ್ಯೂಸ್ 18 ಆಗಿ ಬದಲಾಯ್ತು. ಈಟಿವಿ ನ್ಯೂಸ್ʻನ ಬದಲಾದ ಸ್ವರೂಪವೇ ಈಗ ಇರುವ ನ್ಯೂಸ್ 18.
ಬಿಡುಗಡೆಯಾಗಿರುವ 15+ ರೇಟಿಂಗ್‌ನಲ್ಲಿ ನ್ಯೂಸ್ 18 ನಂ.1 ಸ್ಥಾನದಲ್ಲಿದ್ದರೆ, ಟಿವಿ 9, 2ನೇ ಸ್ಥಾನದಲ್ಲಿದೆ. ಪಬ್ಲಿಕ್ ಟಿವಿ 3ನೇ ಹಾಗೂ ಸುವರ್ಣ ನ್ಯೂಸ್ 4ನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿರೋದು ನ್ಯೂಸ್ ಫಸ್ಟ್.
ಆದರೆ.. ಟಿವಿ ರೇಟಿಂಗಿನಲ್ಲಿ ಇನ್ನೊಂದು ಕೆಟಗರಿಯೂ ಬರುತ್ತದೆ. 22+ ರೇಟಿಂಗ್. ಆ ರೇಟಿಂಗಿನಲ್ಲಿ ಈಗಲೂ ಟಿವಿ9, ನಂ.1 ಸ್ಥಾನದಲ್ಲಿಯೇ ಇದೆ. ನಂ.2 ಸ್ಥಾನ ನ್ಯೂಸ್ 18ನದ್ದು. ಉಳಿದಂತೆ ಪಬ್ಲಿಕ್ ಟಿವಿ 3ನೇ, ಸುವರ್ಣ ನ್ಯೂಸ್ 4ನೇ ಹಾಗೂ ನ್ಯೂಸ್ ಫಸ್ಟ್ 5ನೇ ಸ್ಥಾನದಲ್ಲಿ ಮುಂದುವರೆದಿದೆ.
ಈ ವಾರ ರಿಲೀಸ್ ಆಗಿರುವುದು 46ನೇ ವಾರದ ಟಿಆರ್‌ಪಿ ರೇಟಿಂಗ್. ಸುಮಾರು ಒಂದೂ..ಒಂದೂವರೆ ವರ್ಷದ ಹಿಂದಿನವರೆಗೂ ಪಬ್ಲಿಕ್ ಟಿವಿ ನಂ.2 ಸ್ಥಾನದಲ್ಲಿತ್ತು. 3, 4ನೇ ಸ್ಥಾನದಲ್ಲಿ ಪರದಾಡುತ್ತಿದ್ದ ನ್ಯೂಸ್ 18, ನಂ.2ಗೆ ಏರಿದ ಮೇಲೆ ಕೆಳಗೆ ಇಳಿದೇ ಇಲ್ಲ. ಈಗ ನಂ.1 ಪಟ್ಟಕ್ಕೆ ಏರಿದೆ.
BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡುತ್ತದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ಥಿತವನ್ನು, ಜಾಹೀರಾತುಗಳನ್ನು ಸೆಳೆಯುತ್ತವೆ. ಸದ್ಯಕ್ಕೆ.. ಅಂದರೆ ಈ ವಾರದ ಮಟ್ಟಿಗೆ ಕರ್ನಾಟಕದ ನಂ.1 ನ್ಯೂಸ್ ಚಾನೆಲ್.. ನ್ಯೂಸ್ 18.



