ಬ್ಯಾಗ್ ಪೈಪರ್ (ಬಿಪಿ), ಓಲ್ಡ್ ಟಾವೆರಿನ್ (ಓಟಿ), 8 ಪಿಎಂ. ಇಷ್ಟೂ ಬ್ರಾಂಡುಗಳ ರೇಟು ದುಬಾರಿಯಾಗಿದೆ. ಜ.1 ರಿಂದಲೇ ಬ್ಯಾಗ್ ಪೈಪರ್ (ಬಿಪಿ), ಓಲ್ಡ್ ಟಾವೆರಿನ್ (ಓಟಿ), 8 ಪಿಎಂ ಮದ್ಯದ ದರ ಒಂದು ಕೇಸ್‌ಗೆ ಸಾವಿರ ರುಪಾಯಿಗೂ ಅಧಿಕ ಹೆಚ್ಚಳವಾಗಿದೆ. ಇವೆಲ್ಲವೂ ಬಡವರು ಮತ್ತು ಮಧ್ಯಮ ವರ್ಗದವರ ಬ್ರಾಂಡ್ ಎಂದೇ ಹೆಸರು ಮಾಡಿದ್ದ ಬ್ರಾಂಡ್ʻಗಳು. ಕಳೆದ ವರ್ಷ ಬಜೆಟ್ಟಿನಲ್ಲಿ ಲಿಕ್ಕರ್ ಮೇಲಿದ್ದ ಸೆಸ್ ಹೆಚ್ಚಿಸಲಾಗಿತ್ತು. ಅದಾದ ಮೇಲೆ ಮೊತ್ತ ಮೊದಲ ಬಾರಿಗೆ ಕುಡುಕರು ಕಡಿಮೆ ಬೆಲೆಯ ಬ್ರಾಂಡುಗಳತ್ತ ವಾಲಿದ್ದರು. ಇದೀಗ ಕುಡುಕರು ಬ್ಯಾಗ್ ಪೈಪರ್ (ಬಿಪಿ), ಓಲ್ಡ್ ಟಾವೆರಿನ್ (ಓಟಿ), 8 ಪಿಎಂಗಳನ್ನೂ ಬಿಟ್ಟು, ಅದಕ್ಕಿಂತ ಕಡಿಮೆ ಬೆಲೆಯ ಬ್ರಾಂಡುಗಳತ್ತ ಹೋಗಬಹುದು ಎನ್ನುವುದು ಬಾರ್ ಮಾಲೀಕರ ಟೆನ್ಷನ್ನು.
ಮದ್ಯ ತಯಾರಿಕಾ ಕಂಪನಿಗಳು ಗುಣಮಟ್ಟಕ್ಕೆ ತಕ್ಕಂತೆ ಬೆಲೆಯಲ್ಲಿ 18 ಸ್ಲ್ಯಾಬ್‌ಗಳನ್ನು ಹೊಂದಿದ್ದು ಓಟಿ, 8 ಪಿಎಂ ಮೂರನೇ ಸ್ಲ್ಯಾಬ್‌ನಿಂದ 4 ನೇ ಸ್ಲ್ಯಾಬ್‌ಗೆ ಸ್ಥಳಾಂತರವಾಗಿವೆ. 4 ನೇ ಸ್ಲ್ಯಾಬ್‌ನಲ್ಲಿದ್ದ ಬಿಪಿ 5 ನೇ ಸ್ಥಾನಕ್ಕೆ ಪಲ್ಲಟವಾಗಿದೆ. ಬಿಪಿ ಹಳೆಯ ರೇಟ್ 5357 ಇದ್ದು, ಹೊಸ ರೇಟಿನ ಪ್ರಕಾರ 6943 ರೂ. ಕೊಡಬೇಕು. ಓಟಿಯ ರೇಟು ಕೂಡಾ 4341ರಿಂದ 5357 ರೂ.ಗೆ ಏರಿಕೆಯಾಗಿದೆ. 8 ಪಿಎಂ ದರವೂ 4341 ರೂ.ನಿಂದ 5357 ರೂ.ಗೆ ಏರಿಕೆಯಾಗಿದೆ. ಇದು ಫುಲ್ ಬಾಟಲ್ ಲೆಕ್ಕ. ಕ್ವಾರ್ಟರುಗಳ ಲೆಕ್ಕವೂ ಕನಿಷ್ಠ 100 ರೂ. ಏರಿಕೆಯಾಗಲಿದೆ.
ಎಂಆರ್‌ಪಿ ಔಟ್‌ಲೆಟ್‌ಗಳಲ್ಲಿ 180 ಎಂಎಲ್‌ನ ಓಟಿ ಮತ್ತು 8 ಪಿಎಂ 100 ರಿಂದ 123 ರುಪಾಯಿಗೆ, ಬಿಪಿಯು 123 ರಿಂದ 159 ರುಪಾಯಿಗೆ ಹೆಚ್ಚಳವಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ ಸ್ಟೋರ್‌ಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಬೆಲೆ ಹೆಚ್ಚಳಕ್ಕೆ ಮದ್ಯದ ಕಂಪನಿಗಳು ಈ ಮೊದಲೇ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದು ಇದಕ್ಕೆ ಇಲಾಖೆ ಅನುಮತಿ ನೀಡಿದೆ.
ಬೆಲೆ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದ ತಕ್ಷಣ ಇದನ್ನು ಕರ್ನಾಟಕ ರಾಜ್ಯ ಪಾನೀಯ ನಿಗಮ( ಕೆಎಸ್‌ಬಿಸಿಎಲ್ )ಕ್ಕೆ ತಿಳಿಸಲಿದೆ. ಬಳಿಕ ಬಾರ್ ಆ್ಯಂಡ್ ರೆಸ್ಟೋರೆಂಟ್, ವೈನ್ಸ್ ಸ್ಟೋರ್ ಸೇರಿದಂತೆ ಮದ್ಯ ಸರಬರಾಜುದಾರರಿಗೆ ಕೆಎಸ್‌ಬಿಸಿಎಲ್ ಹೊಸ ದರಗಳನ್ನು ವಿಧಿಸಿ ಮದ್ಯ ಪೂರೈಸಲಿದೆ. ಬೆಲೆ ಹೆಚ್ಚಳದ ಮುನ್ಸೂಚನೆ ಇದ್ದುದ್ದರಿಂದ ಕೆಲವರು ಮೊದಲೇ ಹೆಚ್ಚಿನ ಪ್ರಮಾಣದಲ್ಲಿ ನಿಗಮದಿಂದ ಈ ಬ್ರಾಂಡ್‌ನ ಮದ್ಯಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಲೆ ಏರಿಸಿದ್ದು ಸರ್ಕಾರ ಅಲ್ಲ : ಈ ದರ ಏರಿಕೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ದರ ಏರಿಸಿದ್ದು ರಾಜ್ಯ ಸರ್ಕಾರ ಅಲ್ಲ. ಅಬಕಾರಿ ಇಲಾಖೆ ದರ ಹೆಚ್ಚಳ ಮಾಡಿಲ್ಲ. ರಾಜ್ಯ ಸರ್ಕಾರ ಯಾವುದೇ ಮದ್ಯದ ದರ ಹೆಚ್ಚಿಸಿಲ್ಲ, ತೆರಿಗೆಯನ್ನೂ ಜಾಸ್ತಿ ಮಾಡಿಲ್ಲ, ಉತ್ಪಾದನಾ ವೆಚ್ಚ ಅಧಿಕವಾಗಿದ್ದರಿಂದ ಮದ್ಯ ತಯಾರಿಕಾ ಕಂಪನಿಗಳು ದರ ಹೆಚ್ಚಳ ಮಾಡಿವೆ ಎಂದು ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.



