ಭಾರತದಲ್ಲಿ ನಂ.1 ಶ್ರೀಮಂತ ಯಾರು.. ಈ ಪ್ರಶ್ನೆಗೆ ಮೊದಲು ಅಂಬಾನಿ ಎಂಬ ಹೆಸರು ಫಿಕ್ಸ್ ಆಗಿತ್ತಾದರೂ.. ಇತ್ತೀಚೆಗೆ ಅದು ಬದಲಾಗಿದೆ. ಏರಿಳಿತ ಕಾಣುತ್ತಲೇ ಇದೆ. ಒಮ್ಮೆ ಅದಾನಿ.. ಮತ್ತೊಮ್ಮೆ ಅಂಬಾನಿ ನಡುವೆ ಟಾಪ್ 01 ಪಟ್ಟ ಹಾವು ಏಣಿ ಆಟ ಆಡುತ್ತಲೇ ಇದೆ. ಆದರೆ ಈಗ ಬಂದಿರೋ ಪಟ್ಟಿಯಲ್ಲಿ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮತ್ತೊಮ್ಮೆ ನಂಬರ್ ಒನ್ ಸ್ಥಾನ ಅಲಂಕರಿಸಿದ್ದಾರೆ.
ಮುಖೇಶ್ ಅಂಬಾನಿ ಮತ್ತೆ ನಂ.1 ಪಟ್ಟಕ್ಕೇರಿದ್ದರೆ, ಅದಾನಿ ಕುಟುಂಬ ನಂ.2 ಸ್ಥಾನಕ್ಕೆ ಬಂದಿದೆ. ಎಂ3ಎಂ ಇಂಡಿಯಾ ಹಾಗೂ ಹುರೂನ್ ರಿಸರ್ಚ್ ಇನ್ಸ್ಟಿಟ್ಯೂಟ್ ಜಂಟಿಯಾಗಿ ಬಿಡುಗಡೆ ಮಾಡಿದ 14ನೇ ಆವೃತ್ತಿಯಲ್ಲಿ ಮುಕೇಶ್ ಅಂಬಾನಿ ಹಾಗೂ ಕುಟುಂಬದವರು 9.55 ಲಕ್ಷ ಕೋಟಿ ರೂ ನಿವ್ವಳ ಆಸ್ತಿಯೊಂದಿಗೆ ನಂ.1 ಪಟ್ಟದಲ್ಲಿದ್ದಾರೆ. ಗೌತಮ್ ಅದಾನಿ ಹಾಗೂ ಕುಟುಂಬದ ಆಸ್ತಿಮೌಲ್ಯ 8.15 ಲಕ್ಷ ಕೋಟಿ ರೂ ಇದೆ. ವ್ಯತ್ಯಾಸ ಜಸ್ಟ್ ಒಂದು ಲಕ್ಷ ಕೋಟಿ.. ಅಷ್ಟೇ.
ಭಾರತದ ಟಾಪ್ 10 ಶ್ರೀಮಂತರು..!
- ಮುಕೇಶ್ ಅಂಬಾನಿ ಕುಟುಂಬ: 9.55 ಲಕ್ಷ ಕೋಟಿ ರೂ
- ಗೌತಮ್ ಅದಾನಿ ಕುಟುಂಬ: 8.14 ಲಕ್ಷ ಕೋಟಿ ರೂ
- ರೋಷನಿ ನಾದರ್ ಮಲ್ಹೋತ್ರಾ ಕುಟುಂಬ: 2.84 ಲಕ್ಷ ಕೋಟಿ ರೂ
- ಸೈರಸ್ ಪೂನಾವಾಲ ಕುಟುಂಬ: 2.46 ಲಕ್ಷ ಕೋಟಿ ರೂ
- ಕುಮಾರಮಂಗಲಂ ಬಿರ್ಲಾ ಕುಟುಂಬ: 2.32 ಲಕ್ಷ ಕೋಟಿ ರೂ
- ನೀರಜ್ ಬಜಾಜ್ ಕುಟುಂಬ: 2.32 ಲಕ್ಷ ಕೋಟಿ ರೂ
- ದಿಲೀಪ್ ಸಾಂಘವಿ: 2.30 ಲಕ್ಷ ಕೋಟಿ ರೂ
- ಅಜೀಮ್ ಪ್ರೇಮ್ಜಿ ಕುಟುಂಬ: 2.21 ಲಕ್ಷ ಕೋಟಿ ರೂ
- ಗೋಪಿಚಂದ್ ಹಿಂದೂಜಾ ಫ್ಯಾಮಿಲಿ: 1.85 ಲಕ್ಷ ಕೋಟಿ ರೂ
- ರಾಧಾಕಿಶನ್ ದಮಾನಿ ಕುಟುಂಬ: 1.82 ಲಕ್ಷ ಕೋಟಿ ರೂ
ಈ ಪಟ್ಟಿಯಲ್ಲಿ ಅಚ್ಚರಿ ಹುಟ್ಟಿಸಿರುವುದು 3ನೇ ಸ್ಥಾನದಲ್ಲಿರುವ ರೋಷನಿ ನಾದರ್ ಮಲ್ಹೋತ್ರಾ ಕುಟುಂಬ. ಅವರ ಒಟ್ಟು ಆಸ್ತಿ 2.84 ಲಕ್ಷ ಕೋಟಿ ರೂ. ಎಚ್ಸಿಎಲ್ ಟೆಕ್ನಾಲಜೀಸ್ನ ರೋಷನಿ ನಾದರ್ ಮಲ್ಹೋತ್ರಾ ಹಾಗೂ ಕುಟುಂಬವು ಇದೇ ಮೊದಲ ಬಾರಿಗೆ ಟಾಪ್-3 ಸ್ಥಾನ ಪಡೆದಿದೆ. ಇದರೊಂದಿಗೆ ರೋಷನಿ ನಾದರ್ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ್ದಾರೆ.
ಪರ್ಪ್ಲೆಕ್ಸಿಟಿ ಎನ್ನುವ ಎಐ ಕಂಪನಿಯ ಸ್ಥಾಪಕ ಅರವಿಂದ್ ಶ್ರೀನಿವಾಸ್ ಭಾರತದ ಅತ್ಯಂತ ಕಿರಿಯ ವಯಸ್ಸಿನ ಬಿಲಿಯನೇರ್ ಎನಿಸಿದ್ದಾರೆ. 31 ವರ್ಷದ ಇವರ ಆಸ್ತಿ ಮೌಲ್ಯ 21,190 ಕೋಟಿ ರೂ.
ಮುಂಬೈ ನಗರದಲ್ಲಿ ಅತಿಹೆಚ್ಚು ಬಿಲಿಯನೇರ್ಗಳಿದ್ದಾರೆ. ಈ ವಾಣಿಜ್ಯ ನಗರಿಯಲ್ಲಿರುವ ಬಿಲಿಯನೇರ್ಗಳ ಸಂಖ್ಯೆ 451. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 223 ಬಿಲಿಯನೇರ್ಗಳಿದ್ದಾರೆ. ಐಟಿ ನಗರಿ ಹಾಗೂ ಸ್ಟಾರ್ಟಪ್ಗಳ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಬಿಲಿಯನೇರ್ಗಳ ಸಂಖ್ಯೆ 116 ಇದೆ.
ಒಂದು ಬಿಲಿಯನ್ ಡಾಲರ್ಗೂ ಅಧಿಕ (ಸುಮಾರು 8,900 ಕೋಟಿ ರೂ) ಆಸ್ತಿಮೌಲ್ಯ ಇರುವ ಶ್ರೀಮಂತರ ಸಂಖ್ಯೆ ಭಾರತದಲ್ಲಿ 350ರ ಗಡಿ ದಾಟಿದೆ. 13 ವರ್ಷಗಳ ಹಿಂದಿನ ಪಟ್ಟಿಗೆ ಹೋಲಿಸಿದರೆ ಭಾರತೀಯ ಬಿಲಿಯನೇರ್ಗಳ ಸಂಖ್ಯೆ ಆರು ಪಟ್ಟು ಹೆಚ್ಚಿದೆ. ಇವರೆಲ್ಲರ ಸಂಪತ್ತು ಒಟ್ಟು ಸೇರಿಸಿದರೆ 167 ಲಕ್ಷ ಕೋಟಿ ರೂ ಆಗುತ್ತದೆ.



