ರಾಜ ಸರ್ಕಾರದ ಎಲ್ಲ ಸಚಿವರಿಗೂ (Ministers) ಹೊಸ ಕಾರು ಖರೀದಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ 33 (33 Ministers) ಸಚಿವರಿಗೆ ಕಾರು ನೀಡಲಾಗುತ್ತಿದ್ದು, ಬರೋಬ್ಬರಿ 9 ಕೋಟಿ 90 ಲಕ್ಷ ರೂ ಬಳಕೆ ಮಾಡಲಾಗುತ್ತಿದೆ. 30 ಲಕ್ಷ ರೂ ಬೆಲೆಯ ಇನ್ನೋವಾ ಕಾರುಗಳನ್ನು (Innova Car) ಖರೀದಿ ಮಾಡಲು ನಿರ್ಣಯಿಸಲಾಗಿದ್ದು, (Innova Car) ಕಾರುಗಳನ್ನು ನೇರವಾಗಿ ಕಂಪನಿಯಿಂದಲೇ ಖರೀದಿ ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಇನ್ನು ನೇರ ಖರೀದಿಗೆ ಅನುಕೂಲ ಆಗುವಂತೆ 4 ಜಿ ವಿನಾಯಿತಿಯನ್ನು ಸರ್ಕಾರ ನೀಡಿದೆ. ಇತ್ತೀಚೆಗೆ ಮಾರುಕಟ್ಟೆಗೆ ಬಂದ ಹೊಸ ಇನ್ನೋವಾ ಹೈಕ್ರಾಸ್ (Innova High cross Car) ಹೈಬ್ರಿಡ್ ಕಾರುಗಳನ್ನೇ ಖರೀದಿ ಮಾಡಲು ನಿರ್ಧರಿಸಲಾಗಿದೆ. ಯಾವುದೇ ಶೋರೂಂ ಮೂಲಕ ಅಲ್ಲದೆ, ನೇರವಾಗಿ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯಿಂದಲೇ (Toyota Kirloskar) ನೇರವಾಗಿ ಖರೀದಿ ಮಾಡಲು ನಿರ್ಧಾರ ಮಾಡಲಾಗಿದೆ.
ಮೊದಲು ಸಚಿವರಿಗೆ ಕಾರು ಖರೀದಿಗೆ 15 ಲಕ್ಷ ರೂ. ಮಿತಿ ಇತ್ತು. ಆ ಮೊತ್ತವನ್ನು 15ರಿಂದ 21 ಲಕ್ಷಕ್ಕೆ ಏರಿಸಿ ಆದೇಶ ಮಾಡಲಾಗಿತ್ತು. ಅದು ಸಿದ್ದರಾಮಯ್ಯ ಸಿಎಂ ಆಗಿದ್ದ ಮೊದಲನೇ ಅವಧಿಯಲ್ಲಿ. ಈಗ ಆ ಮೊತ್ತವನ್ನು 30 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.
ಸಿದ್ದರಾಮಯ್ಯ (CM Siddarmaiah) ಅಧಿಕಾರಕ್ಕೆ ಬಂದಾಗ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡುವ, ಅನಗತ್ಯ ಖರ್ಚುಗಳಿಗೆ ಹಣ ನೀಡದೇ ಇರುವ ತೀರ್ಮಾನಕ್ಕೆ ಬಂದಿದ್ದರು. ಅದನ್ನು ಬಹಿರಂಗವಾಗಿ ಹೇಳಿಯೂ ಇದ್ದರು. ಸಚಿವರ ಮನೆ/ಬಂಗಲೆಗಳ ನವೀಕರಣ, ಹೊಸ ಕಾರು ಇತ್ಯಾದಿಗಳಿಗೆ ಖರ್ಚು ಮಾಡುವುದನ್ನು ಕಡಿಮೆ ಮಾಡುವುದಾಗಿ ಹೇಳಿದ್ದರು. ಆದರೆ ಈ ವಿಷಯದಲ್ಲಿ ನುಡಿದಂತೆಯೇ ನಡೆದವರು ಸಿದ್ದರಾಮಯ್ಯ ಮಾತ್ರ. ಉಳಿದಂತೆ ಎಲ್ಲರೂ ಖರ್ಚು ಮಾಡಿದ್ದಾರೆ. ಜೊತೆಗೆ ಇತ್ತೀಚೆಗೆ ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣ ಇಲ್ಲ. ಅನುದಾನ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದು ಪ್ರತಿಪಕ್ಷಗಳ ಪಾಲಿಗೆ ಆಹಾರ ಒದಗಿಸಿತ್ತು. ಇದೀಗ ಇದ್ದಕ್ಕಿದ್ದಂತೆ ಪ್ರತಿಯೊಬ್ಬ ಸಚಿವರಿಗೂ ಹೊಸ ಕಾರು ಕೊಡುತ್ತಿರುವ ಸರ್ಕಾರಿ ಆದೇಶವನ್ನು ಬಿಜೆಪಿ, ಜೆಡಿಎಸ್ ಪ್ರಶ್ನೆ ಮಾಡುತ್ತಿದ್ದರೆ, ಮಂತ್ರಿಗಳಾದವರಿಗೆ ಒಂದು ಕಾರು ತಗೊಳ್ಳೋದು ತಪ್ಪಾ ಎನ್ನುತ್ತಿದ್ದಾರೆ ಮಿನಿಸ್ಟರ್ಸ್.



