ಈ ಬಾರಿಯ ದೆಹಲಿ ಭೇಟಿಯ ಸ್ಪೆಷಲ್ ಸುದ್ದಿಯೇನಂದರೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ದೇವೇಗೌಡರ ಕುಟುಂಬ. ಈ ಭೇಟಿಯಲ್ಲಿ ದೇವೇಗೌಡ, ಕುಮಾರಸ್ವಾಮಿ ಜೊತೆ ರೇವಣ್ಣ ಮತ್ತು ಪ್ರಜ್ವಲ್ ಕೂಡಾ ಇದ್ದರು. ನಿಖಿಲ್ ಇರಲಿಲ್ಲ. ಜಿಟಿ ದೇವೇಗೌಡರೂ ಇರಲಿಲ್ಲ. ಮೋದಿ ಮತ್ತು ದೇವೇಗೌಡರ ಮಧ್ಯೆ ಸುದೀರ್ಘ ಮಾತುಕತೆಯೂ ನಡೆಯಿತು. ಅದಾದ ನಂತರ ಕುಮಾರಸ್ವಾಮಿ ಮಾತನಾಡಿದರು. ಲೋಕಸಭೆಗೆ ನಾನಾಗಲಿ, ನಿಖಿಲ್ ಆಗಲಿ ಸ್ಪರ್ಧೆ ಮಾಡಲ್ಲ ಎಂದರ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ.
ಖಿಲ್ 28 ಲೋಕಸಭಾ ಕ್ಷೇತ್ರದಲ್ಲಿ ಸಂಚಾರ ಮಾಡ್ತಾರೆ. ಯಾವುದೇ ಕಾರಣಕ್ಕೂ ಚುನಾವಣೆಗೆ ನಿಲ್ಲಲ್ಲ ಎಂದ ಕುಮಾರಸ್ವಾಮಿ ಜೊತೆಯಲ್ಲೇ ಆದರೆ, ಜನರೇ ನಿಲ್ಲಬೇಕು ಅಂತ ಹೇಳುತ್ತಿದ್ದಾರೆ. ನಿಖಿಲ್ 2ನೇ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆಂಬ ಅನುಕಂಪದ ಅಲೆಯಿದ್ದು, ಮಂಡ್ಯದಲ್ಲಿ ಸ್ಪರ್ಧೆ ಮಾಡಲಿ ಎಂದು ಹೇಳುತ್ತಿದ್ದಾರೆ. ಜನರಿಗೆ ನಿಖಿಲ್ ಬಗ್ಗೆ ಅನುಕಂಪ ಇದೆ. ಆದ್ರೆ ನಿಖಿಲ್ ಅಭ್ಯರ್ಥಿ ಆಗೋ ಬಗ್ಗೆ ಪಕ್ಷದಲ್ಲಿ ತೀರ್ಮಾನ ಆಗಿಲ್ಲಎಂದಿದ್ದಾರೆ.
2019ರಲ್ಲಿ ಚುನಾವಣೆ ನಡೆದಾಗ ಮಂಡ್ಯದಲ್ಲಿ ನಿಖಿಲ್ ನಿಲ್ಲುವುದಿಲ್ಲ ಎನ್ನಲಾಗಿತ್ತು. ಆದರೆ ಕಡೆಯ ಕ್ಷಣದಲ್ಲಿ ಒತ್ತಾಯ ಕೇಳಿಬಂದ ಹಿನ್ನೆಲೆ ಎಂಬ ಕಾರಣ ನೀಡಿ ನಿಖಿಲ್ ಸ್ಪರ್ಧೆ ಘೋಷಿಸಲಾಗಿತ್ತು. ಅದಾದ ನಂತರವೂ ಅಷ್ಟೇ, ಕುಮಾರಸ್ವಾಮಿ ಅವರಿಗೇ ಗೊತ್ತಿಲ್ಲದಂತೆ ಅನಿತಾ ಕುಮಾರಸ್ವಾಮಿಯವರು ನಿಖಿಲ್ ಹೆಸರನ್ನು ರಾಮನಗರ ಕ್ಷೇತ್ರಕ್ಕೆ ಘೋಷಿಸಿಬಿಟ್ಟಿದ್ದರು. ಎರಡೂ ಕಡೆ ನಿಖಿಲ್ ಸೋತಿದ್ದರು. ಈಗಲೂ ಕೂಡಾ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಾಯ ಇದೆ. ಒತ್ತಡವೂ ಇದೆ ಎನ್ನುತ್ತಿದ್ಧಾರೆ ಕುಮಾರಸ್ವಾಮಿ.
ಲೋಕಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡ್ತೀರಾ ಎನ್ನುವ ಪ್ರಶ್ನೆಗೆ ನನ್ ಎದುರಿಗೆ ಆ ಥರ ಆಲೋಚನೆ ಇಲ್ಲ. ಮಾಧ್ಯಮದಲ್ಲಿ ಈ ಥರ ಸುದ್ದಿ ಬರ್ತಿದೆ. ನಮ್ಮ ಜನರು, ಕಾರ್ಯಕರ್ತರು ಹಾಗೆ ಅನ್ಕೊಂಡಿದ್ದಾರೆ. ನಾನು ಇಲ್ಲಿ ಬಂದ್ರೆ ಡೆವಲಪ್ಮೆಂಟ್ ಆಗುತ್ತದೆ, ಒಳ್ಳೇದಾಗುತ್ತೆ ಅಂತ ಅವರವರ ಭಾವನೆಯಿದೆ. ನಮ್ಮನ್ನ ಬಿಜೆಪಿ ಸ್ನೇಹಿತರು ಸಹ ಆ ಥರ ಅನ್ಕೊಂಡಿದ್ದಾರೆ. ನಾನು ಚುನಾವಣೆ ನಿತ್ಕೊಂಡ್ರೆ ಒಳ್ಳೇದಾಗುತ್ತೆ ಅಂತ. ನನಗೆ ಆ ಥರ ಆಲೋಚನೆ ಇಲ್ಲ. ನಾನು ಕರ್ನಾಟಕದಲ್ಲೇ ಇರೋಕೆ ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಸೆಂಟ್ರಲ್ ಮಿನಿಸ್ಟರ್ ಆಗ್ತಾರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಯಾರ ಹಣೆ ಮೇಲೆ ಏನ್ ಬರ್ದಿದೆ ಅಂತ ಗೊತ್ತಿಲ್ಲ. ರಾಜಕೀಯದಲ್ಲಿ ಏನ್ ಬೇಕಾದ್ರು ಆಗಬೋದು. ಯಾರ್ ಹಣೆ ಮೇಲೆ ಏನ್ ಬರ್ದಿದೆ ನೋಡೋಣ. ಮೊನ್ನೆ ಚುನಾವಣೆ ರಿಸಲ್ಟ್ ಬಂದ್ಮೇಲೆ ಹೊಸಬರು ಮುಖ್ಯಮಂತ್ರಿ ಆದರು. ಹಾಗಾಗಿ ರಾಜಕೀಯದಲ್ಲಿ ಯಾವಾಗ ಬೇಕಾದ್ರು ಏನ್ ಬೇಕಾದ್ರೂ ಆಗಬೋದು ಅಷ್ಟೇ. ಇನ್ನು ನಾವು ಎಷ್ಟು ಗೆಲ್ತಿವಿ, ಅಲ್ಲೆಲ್ಲ ಕಡೆ ಕ್ಷೇತ್ರ ಬೇಕು ಅಂತ ಕೇಳ್ತೇವೆ. ನಾವು ಎಲ್ಲೆಲ್ಲಿ ಗೆಲ್ತಿವಿ ಅಂತ ನಮ್ಮ ಬಳಿ ರಿಪೋರ್ಟ್ ಇದೆ. ಆ ರಿಪೋರ್ಟ್ ಪ್ರಕಾರ ನಾವು ಕೆಲಸ ಮಾಡ್ತೇವೆ. ಸೀಟ್ ಹಂಚಿಕೆ ಒಂದೇ ಪ್ರಮುಖವಲ್ಲ. ವಿಶ್ವಾಸ ಮುಖ್ಯ, ಆ ನಿಟ್ಟಿನಲ್ಲಿ ಕೆಲಸ ಮಾಡ್ತೇವೆ ಎಂದೂ ಹೇಳಿದ್ದಾರೆ.
ಸೀಟ್ ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವ ಯಾವ ಕ್ಷೇತ್ರದಲ್ಲಿ ಯಾರ್ಯಾರು ನಿಲ್ತಾರೆ ಅಂತ ನಾವು ಫೈನಲ್ ಮಾಡ್ತೇವೆ. ಅದರ ಬಗ್ಗೆ ಸಮಸ್ಯೆಯಿಲ್ಲ. ಒಂದು ಸೀಟ್ ಹೆಚ್ಚು ಕಮ್ಮಿ ಆಗುತ್ತದೆ, ಅದರಲ್ಲಿ ಏನು ಸಮಸ್ಯೆ ಇಲ್ಲ. ವಿಶ್ವಾಸ ಬೇಕು ಅಷ್ಟೇ, ಅದನ್ನ ನಾವು ಉಳಿಸಿಕೊಳ್ಳಬೇಕು. ಜನವರಿ ಅಂತ್ಯದ ಒಳಗೆ ನಾವು ಎಲ್ಲಾ ನಿರ್ಧಾರ ಮಾಡ್ತೇವೆ ಎಂದಿದ್ದಾರೆ ಕುಮಾರಸ್ವಾಮಿ.



