ಟೈಮ್ಸ್ ನೌ, ಇಂಡಿಯಾ ಟುಡೇ ನಂತರ ಮತ್ತೊಂದು ಮೆಗಾ ಸಮೀಕ್ಷೆ ಹೊರಬಿದ್ದಿದೆ. ಟೈಮ್ಸ್ ನೌ, ಇಂಡಿಯಾ ಟುಡೇಯಂತೆಯೇ ಈ ಸಮೀಕ್ಷೆಯಲ್ಲೂ ಮೋದಿಗೆ ಜಯಭೇರಿ ಸಿಕ್ಕಿದೆ. ಸಂಸತ್ ಅಧಿವೇಶನ ಸೇರಿದಂತೆ ಹಲವು ವೇದಿಕೆಗಳಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಬೇಕೆಂದರೆ ಬಿಜೆಪಿ ಕನಿಷ್ಟ 370 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು ಎಂದಿದ್ದರು. ಇದಕ್ಕೆ ತಕ್ಕಂತೆ ಝೀ ನ್ಯೂಸ್ ಹಾಗೂ ಮ್ಯಾಟ್ರಿಜ್ ಸಮೀಕ್ಷಾ ಸಂಸ್ಥೆ ನಡೆಸಿದ ಸರ್ವೆಯಲ್ಲಿ ಬಿಜೆಪಿ ಸಾರಥ್ಯದ ಎನ್‌ಡಿಎ ಮೈತ್ರಿ ಕೂಟಕ್ಕೆ 377 ಸ್ಥಾನ ಸಿಗಬಹುದು ಎಂದು ಹೇಳಿದೆ. ಫೆಬ್ರವರಿ 5 ರಿಂದ 27ರ ತನಕ ನಡೆಸಿದ ಸಮೀಕ್ಷೆ ಇದು.
ಈಗ ಚುನಾವಣೆ ನಡೆದರೆ 543 ಸೀಟುಗಳ ಪೈಕಿ ಎನ್‌ಡಿಎ ಮೈತ್ರಿಕೂಟ 377 ಮತ್ತು ಇಂಡಿಯಾ ಮೈತ್ರಿಕೂಟ 94 ಸ್ಥಾನ ಗೆಲ್ಲಲಿದೆ. ಮೋದಿ ಅಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆ ಆಗಲಿದೆ. ಅಂದರೆ ಕಳೆದ ಬಾರಿ ಗೆದ್ದ ಸ್ಥಾನಗಳಿಗಿಂತ ಎನ್ʻಡಿಎ 40+ ಹೆಚ್ಚು ಸ್ಥಾನಗಳಿಸಲಿದ್ದರೆ, ಇಂಡಿಯಾ ಒಕ್ಕೂಟ ಕೇವಲ 2 ಸ್ಥಾನ ಹೆಚ್ಚು ಗಳಿಸಲಿದೆ. ಆದರೆ, ಅತೀ ಹೆಚ್ಚು ನಷ್ಟ ಅನುಭವಿಸಲಿರುವುದು ಇತರೆ ಪಕ್ಷಗಳು.
ಕರ್ನಾಟಕದ ಫಲಿತಾಂಶ ಏನಾಗುತ್ತೆ..?
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಪ್ರತಿಪಕ್ಷ ಬಿಜೆಪಿ ಜೆಡಿಎಸ್ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿದೆ. ಸಮೀಕ್ಷೆಯ ವರದಿ ಪ್ರಕಾರ ಬಿಜೆಪಿ ಮೈತ್ರಿಕೂಟ 23 ಮತ್ತು ಆಡಳಿತ ಪಕ್ಷ ಕಾಂಗ್ರೆಸ್ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ ಈ ಬಾರಿ 20+ ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬ ಗುರಿ ಹಾಕಿಕೊಂಡಿದೆ. ಆದರೆ ಈ ಚುನಾವಣಾ ಪೂರ್ವ ಸಮೀಕ್ಷೆ ಕಾಂಗ್ರೆಸ್ ನಾಯಕರಿಗೆ ನಿರಾಸೆ ತಂದಿದೆ. ಪಕ್ಷದ ಹೈಕಮಾಂಡ್ ಸಹ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ನಾಯಕರಿಗೆ ಟಾಸ್ಕ್ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2024ರಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಕೂಟವು 23 ಸ್ಥಾನಗಳನ್ನು ಜಯಿಸಲಿದ್ದು, 5 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದ ಪಕ್ಕದ ತೆಲಂಗಾಣದಲ್ಲಿಯೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 9, ಬಿಜೆಪಿ 5, ಬಿಆರ್‌ಎಸ್ 2, ಇತರರು 1 ಸ್ಥಾನದಲ್ಲಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆ ಅಂದಾಜಿಸಿದೆ.
ಇನ್ನು ಉತ್ತರ ಪ್ರದೇಶದಲ್ಲಿ 78 (ಒಟ್ಟು ಕ್ಷೇತ್ರ 80), ಬಿಹಾರ 37 (ಒಟ್ಟು ಕ್ಷೇತ್ರ 40), ಮಹಾರಾಷ್ಟ್ರ 40 (ಒಟ್ಟು ಸ್ಥಾನ 45), ಅಸ್ಸಾಂ 11 (ಒಟ್ಟು 12), ಜಾರ್ಖಂಡ್ 13 (ಒಟ್ಟು 14), ಮಧ್ಯಪ್ರದೇಶ & ಛತ್ತೀಸ್ʻಘಡ 39 (ಒಟ್ಟು 40).. ಹೀಗೆ ದೊಡ್ಡ ರಾಜ್ಯಗಳಲ್ಲಿ ದೊಡ್ಡ ಗೆಲುವು ಸಾಧಿಸಲಿದೆ. ಅಲ್ಲದೆ ಗುಜರಾತ್ (26), ರಾಜಸ್ಥಾನ್ (25) ಉತ್ತರಾಖಂಡ್ (05), ದೆಹಲಿ (07) ಸ್ಥಾನ ಗೆದ್ದು ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಹೇಳಲಾಗಿದೆ.
ಅಂದಹಾಗೆ ಈ ಚುನಾವಣೆಯಲ್ಲಿ ಮತದಾರರು ಮೋದಿ ಎನ್ನುವ ಕಾರಣಕ್ಕೇ ಬಿಜೆಪಿಯನ್ನು ಗೆಲ್ಲಿಸಲಿದ್ದಾರಂತೆ. ಅಷ್ಟೇ ಅಲ್ಲ, ರಾಮಮಂದಿರ ಮತದಾರರ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮೋದಿ ಪ್ರಧಾನಿ ಎಂಬ ಕಾರಣಕ್ಕೇ ಬಿಜೆಪಿಗೆ ವೋಟ್ ಹಾಕುತ್ತೇವೆ ಎಂದವರ ಪ್ರಮಾಣ ಶೇ.52.



