ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದವರು ಕರೆಯೋದು ಬಾಕ್ಸಾಫೀಸ್ ಸುಲ್ತಾನ್ ಎಂದೇ. ದರ್ಶನ್ ಅವರ ಅಟ್ಟರ್ ಫ್ಲಾಪ್ ಚಿತ್ರಗಳೂ ನಿರ್ಮಾಪಕರಿಗೆ ಲಾಸ್ ಮಾಡುವುದಿಲ್ಲ. ಆದರೆ ಅದನ್ನು ರೀ-ರಿಲೀಸ್ ಚಿತ್ರಗಳಿಗೆ ಹೇಳೋಕಾಗಲ್ಲ. ಅದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದೆ ನವಗ್ರಹ.
ಚಿತ್ರದಲ್ಲಿ ನಟಿಸಿದ್ದ ನಟರೆಲ್ಲ ಖ್ಯಾತ ವಿಲನ್ ಕಲಾವಿದರ ಮಕ್ಕಳು.
ಸ್ವತಃ ದರ್ಶನ್ ಮತ್ತು ನಿರ್ದೇಶಕ ದಿನಕರ್ ತೂಗುದೀಪ ಶ್ರೀನಿವಾಸ್ ಅವರ ಮಗನಾದರೆ,
ವಿನೋದ್ ಪ್ರಭಾಕರ್ (ಟೈಗರ್ ಪ್ರಭಾಕರ್),
ಗಿರಿ (ದಿನೇಶ್ ಪುತ್ರ),
ಧರ್ಮ (ಕೀರ್ತಿರಾಜ್ ಮಗ)
ಸೃಜನ್ ಲೋಕೇಶ್ (ಲೋಕೇಶ್ ಅವರ ಪುತ್ರ)
ತರುಣ್ ಕಿಶೋರ್ (ಸುಧೀರ್ ಪುತ್ರ)
ನಾಗೇಂದ್ರ ಅರಸ್ (ಸುಂದರ ಕೃಷ್ಣ ಅರಸ್ ಪುತ್ರ)
ಎಲ್ಲರೂ ವಿಲನ್ ಮಕ್ಕಳು. ಇವರೆಲ್ಲ ನಟಿಸಿದ್ದ ನವಗ್ರಹ ಕಳೆದ ವಾರ ರಿಲೀಸ್ ಆಗಿತ್ತು. 80+ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಏಕೆಂದರೆ ನವಗ್ರಹ ಚಿತ್ರಕ್ಕೆ ದಿನಕರ್ ನಿರ್ದೇಶಕ. ಅಲ್ಲದೇ ದರ್ಶನ್ ಅವರದ್ದೇ ಹೋಂ ಬ್ಯಾನರ್ ಸಿನಿಮಾ. ಹೀಗಾಗಿ ನವಗ್ರಹ ಚಿತ್ರದ ಬಿಡುಗಡೆಯನ್ನೂ ಹೊಸ ಚಿತ್ರದಂತೆಯೇ ರೀ-ರಿಲೀಸ್ ಮಾಡಲಾಗಿತ್ತು. ಚಿತ್ರತಂಡದವರೆಲ್ಲ ಸೇರಿ ಪ್ರಮೋಟ್ ಮಾಡಿದ್ದರು. ಕೆಲವು ಯೂಟ್ಯೂಬ್ ಚಾನೆಲ್ಲುಗಳಿಗೆ ಸಂದರ್ಶನವನ್ನೂ ನೀಡಿದ್ದರು. ಆದರೆ ನವಗ್ರಹದ ಬಾಕ್ಸಾಫೀಸ್ ಗಳಿಕೆ ಒಂದು ಕೋಟಿಯನ್ನೂ ದಾಟಿಲ್ಲ.
‘ನವಗ್ರಹ’ ಸಿನಿಮಾ ಮರು ಬಿಡುಗಡೆ ಯಲ್ಲಿ ಸುಮಾರು 61 ಲಕ್ಷ ಕಲೆಕ್ಷನ್ ಮಾಡಿದೆ ಎಂಬ ಲೆಕ್ಕ ಸಿಕ್ಕಿದೆ. 80+ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ, ವಾರಾಂತ್ಯದ ಹೊತ್ತಿಗೆ 8-9 ಚಿತ್ರಮಂದಿರಗಳಲ್ಲಿ ಮಾತ್ರವೇ ಪ್ರದರ್ಶನ ಕಾಣುತ್ತಿತ್ತು. ಮೊದಲ ದಿನ, ಮೊದಲ ಶೋ ಅಬ್ಬರ ಬಿಟ್ಟರೆ, ಉಳಿದಂತೆ ಚಿತ್ರಮಂದಿರಕ್ಕೆ ಜನ ಬರಲಿಲ್ಲ.
2008ರಲ್ಲಿ 2 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದ ನವಗ್ರಹ, ರೀ-ರಿಲೀಸ್ ಆದಾಗ 1 ಕೋಟಿ ಕಲೆಕ್ಷನ್ ಕೂಡಾ ಮಾಡಿಲ್ಲ. ನವಗ್ರಹ ರಿ-ರಿಲೀಸ್ ವೇಳೆ ದರ್ಶನ್ ಅಭಿಮಾನಿಗಳು ಮುಗಿಬಿದ್ದು ಬರುತ್ತಾರೆ ಎಂಬ ನಿರೀಕ್ಷೆಯಂತೂ ಇತ್ತು. ಆದರೆ ಸಿನಿಮಾದ ಕ್ರೌಡ್ ಫಸ್ಟ್ ಡೇ ಫಸ್ಟ್ ಶೋಗಷ್ಟೇ ಸೀಮಿತವಾಯ್ತು.
ದರ್ಶನ್ ಫ್ಯಾನ್ಸ್ ಆರ್ಭಟ ನೋಡಿ ಚಿತ್ರ ಕನಿಷ್ಠ 2-3 ಕೋಟಿ ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹಾಗೆ ನೋಡಿದರೆ ಕರಿಯಾ ಬಿಟ್ಟರೆ ಉಳಿದ ಚಿತ್ರಗಳ್ಯಾವುವೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿಲ್ಲ. ಶಾಸ್ತ್ರಿ, ರಾಬರ್ಟ್, ಸಾರಥಿ, ದಾಸ, ಮೆಜೆಸ್ಟಿಕ್.. ಹೀಗೆ ದರ್ಶನ್ ಜೈಲು ಸೇರಿದಾಗಿನಿಂದ ಹಲವು ಚಿತ್ರಗಳು ರಿ-ರಿಲೀಸ್ ಆಗಿವೆ. ಆದರೆ ಫಸ್ಟ್ ಡೇ ಫಸ್ಟ್ ಶೋ ಆರ್ಭಟವಿರುತ್ತದೆಯೇ ಹೊರತು, ಮಿಕ್ಕಂತೆ ಖಾಲಿ ಹೊಡೆಯುತ್ತವೆ. ಇಷ್ಟಕ್ಕೂ ಎಷ್ಟೋ ವರ್ಷಗಳ ಹಿಂದೆ ಬಂದು, ಟಿವಿಯಲ್ಲಿ ನೋಡಿ ನೋಡಿ, ಒಟಿಟಿಯಲ್ಲಿ ಕ್ಲಿಕ್ ಮಾಡಿದಾಗ ಸಿಗುವ, ಯೂಟ್ಯೂಬಿನಲ್ಲಿ ಸದಾ ನೋಡಬಹುದಾದ ಚಿತ್ರವನ್ನು ದುಡ್ಡು ಕೊಟ್ಟು ಯಾರು ಬಂದು ನೋಡುತ್ತಾರೆ..? ಇಷ್ಟಕ್ಕೂ ನವಗ್ರಹ ಒಳ್ಳೆಯ ಕಮರ್ಷಿಯಲ್ ಸಿನಿಮಾ ಎನ್ನಬಹುದೇ ಹೊರತು, ಕ್ಲಾಸಿಕ್ ಚಿತ್ರವಂತೂ ಅಲ್ಲವಲ್ಲ.



