ನಟ್ಟು ಬೋಲ್ಟು ಟೈಟ್ ಫೈಟಿನಲ್ಲಿ ಚಿತ್ರರಂಗದವರು ಒಂದಷ್ಟು ಜನ ಮಾತನಾಡ್ತಿದ್ದಾರೆ. ಚಿತ್ರೋತ್ಸವಕ್ಕೆ ಜನ ಬಂದಿಲ್ಲ. ಇದು ಚಿತ್ರರಂಗದವರಿಗಾಗಿ ಸರ್ಕಾರ ಮಾಡ್ತಿರೋ ಕಾರ್ಯಕ್ರಮ. ಕೆಲಸ ಆಗಬೇಕು ಅಂದಾಗ ಬರ್ತೀರ. ನೋಡ್ಕೋತೀನಿ. ನಟ್ಟುಬೋಲ್ಟು ಟೈಟ್ ಮಾಡೋದು ನಮಗೆ ಗೊತ್ತು ಎಂದೂ ಡಿಸಿಎಂ ಡಿಕೆ ಶಿವಕುಮಾರ್ ಹಾಕಿರೋ ಧಮ್ಕಿ ಈಗ ರಾಜ್ಯದ ಹಾಟ್ ನ್ಯೂಸ್. ಆದರೆ ಯಾರೂ ಮಾಡದ ಒಂದು ಕೆಲಸ ಏನೆಂದರೆ ಅದೇ ವೇದಿಕೆಯಲ್ಲಿದ್ದ ಶಿವಣ್ಣ ಅವರಾಗಲೀ, ರಾಯಭಾರಿ ಕಿಶೋರ್ ಅವರಾಗಲೀ ಸೈಲೆಂಟ್ ಆಗಿದ್ದುದ್ದು ಯಾಕೆ ಅನ್ನೋದು..
ಅಂಬೇಡ್ಕರ್ ವಾದಿ ಕಿಶೋರ್ ಸೈಲೆಂಟ್..!
ನಟ ಕಿಶೋರ್ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ರಾಯಭಾರಿ. ಬಾಯಿ ಬಿಟ್ಟರೆ ಮಾತನಾಡುವುದು ಅಂಬೇಡ್ಕರ್,ಬುದ್ದ, ಬಸವಣ್ಣನವರ ಬಗ್ಗೆ. ಈ ವೇದಿಕೆಯಲ್ಲಿಯೂ ಕೂಡಾ ಕಿಶೋರ್ ಇಂತದ್ದೇ ವಿಷಯದ ಬಗ್ಗೆ ಮಾತನಾಡಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವವನ್ನು ಸದಾಶಯದೊಂದಿಗೆ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದ್ದೇನೆ ಎಂದೆಲ್ಲ ಭಾಷಣ ಮಾಡಿದ್ದಾರೆ. ಕಿಶೋರ್ ಹೀಗೆ ಹೇಳಿದ ಕೆಲವೇ ಕ್ಷಣಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಈ ರೀತಿಯಲ್ಲಿ ಧಮ್ಕಿ ಹಾಕಿದ್ದಾರೆ. ಡಿಸಿಎಂ ಡಿಕೆಶಿ ಮಾತಿನಲ್ಲಿ ಅದ್ಯಾವ ಅಂಬೇಡ್ಕರ್, ಬಸವಣ್ಣ, ಬುದ್ದನನ್ನು ಕಂಡರೋ ಕಿಶೋರ್. ಇದು ಪ್ರಜಾಪ್ರಭುತ್ವವನ್ನು ಉಳಿಸುವ ಮಾತಂತೂ ಅಲ್ಲ. ಆದರೆ.. ಕಿಶೋರ್ ಫುಲ್ ಸೈಲೆಂಟ್.
ದೊಡ್ಮನೆಯ ಶಿವಣ್ಣ.. ಇಷ್ಟೊಂದು ಸೈಲೆಂಟ್ ಆಗಬೇಕಾಗಿರಲಿಲ್ಲ..!
ಇನ್ನು ಶಿವಣ್ಣ ಕೂಡಾ ಅಲ್ಲೇ ಇದ್ದರು. ಡಿಕೆ ವಾರ್ನಿಂಗ್ ಕೊಟ್ಟಿದ್ದದ್ದು ಯಾರೋ ಒಬ್ಬ ನಾಯಕನಿಗಲ್ಲ. ಇಡೀ ಚಿತ್ರರಂಗಕ್ಕೆ. ಚಿತ್ರರಂಗ ಎಂದರೆ ಒಂದು ಕುಟುಂಬ ಎಂದು ಪದೇ ಪದೇ ಹೇಳುವ ಶಿವಣ್ಣ, ಅಘೋಷಿತವಾಗಿಯೇ ಯಜಮಾನನ ಲೆವೆಲ್ಲಿಗೆ ಬಂದಿದ್ದಾರೆ. ಶಿವಣ್ಣ ಕೂಡಾ ಡಿಕೆ ಮಾತು ತಪ್ಪು ಎಂದು ಕೂಡಾ ಹೇಳಲಿಲ್ಲ. ಶಿವಣ್ಣ, ಸ್ವಾಭಿಮಾನವನ್ನೇ ಮರೆತರೆ.. ಇದು ಶಿವಣ್ಣ ಅಭಿಮಾನಿಗಳೂ ಕೂಡಾ ಕೇಳ್ತಿರೋ ಪ್ರಶ್ನೆ.
ಇನ್ನು ನಟ್ಟು ಬೋಲ್ಟು ಟೈಟ್ ಹೇಳಿಕೆಗೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಪದೇ ಪದೇ ಡಾ.ರಾಜ್ ಹೆಸರು ಎಳೆದು ತರುತ್ತಿದ್ಧಾರೆ. ಡಾ.ರಾಜ್ ಹೆಸರು, ಗೋಕಾಕ್ ಚಳವಳಿಯನ್ನ ಕನ್ನಡಿಗರು ಮರೆಯುವುದಿಲ್ಲ. ಹಾಗಂತ ಮಾಡಿದ ತಪ್ಪು ಕೆಲಸಗಳಿಗೆಲ್ಲ ಡಾ.ರಾಜ್ ಹೆಸರು ತರಬೇಡಿ ಎನ್ನುತ್ತಿದ್ದಾರೆ.
ಇಷ್ಟಕ್ಕೂ ಡಿಸಿಎಂ ಹೇಳಿಕೆ ತಪ್ಪು ಎನ್ನುತ್ತಿರುವುದೆಲ್ಲ ಒಂದೋ ಚಿತ್ರರಂಗದಲ್ಲಿ ದುಡಿದು ಸುಸ್ತಾಗಿ, ಮೂಲೆಗೆ ಕುಳಿತವರು. ಚಿತ್ರರಂಗದಲ್ಲಿ ಅವಕಾಶ ಇಲ್ಲದವರು. ನಾವು ಸ್ಟಾರ್.. ನಮಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೆ ಎಂದು ಕೊಚ್ಚಿಕೊಳ್ಳೋ ಯಾವೊಬ್ಬ ಸ್ಟಾರ್ ನಟ ಕೂಡಾ ಡಿಸಿಎಂ ಡಿಕೆ ವಿರುದ್ಧ ತುಟಿಬಿಚ್ಚಿಲ್ಲ. ಯಶ್, ದರ್ಶನ್, ಸುದೀಪ್, ದುನಿಯಾ ವಿಜಯ್ (ಇವರನ್ನು ಡಿಕೆ ಹೊಗಳಿದ್ದಾರೆ. ಇವರು ಮಾತನಾಡಲ್ಲ), ಉಪೇಂದ್ರ, ಗಣೇಶ್, ಧ್ರುವ ಸರ್ಜಾ.. ಯಾವೊಬ್ಬ ಸ್ಟಾರ್ ನಟ ಕೂಡಾ ಮಾತನಾಡಿಲ್ಲ. ಅನ್ಯಾಯವನ್ನ ಸಹಿಸಿಕೊಳ್ಳೋ ಮಾತೇ ಇಲ್ಲ ಅನ್ನೋದೆಲ್ಲ ಕೇವಲ ಸಿನಿಮಾಗಳಲ್ಲಿ ಡೈಲಾಗ್ ಹೊಡೆಯೋಕೆ ಮಾತ್ರ ಎನ್ನುವುದನ್ನಂತೂ ಸಾಬೀತು ಮಾಡಿದ್ದಾರೆ.



