ಮುಂಬೈನ 14 ವರ್ಷದ ಕಿಯಾನ್ ಶಾ ಅವರು ಮೆಕೊ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ಶಿಪ್ನ ಮೂರನೇ ಸುತ್ತಿನಲ್ಲಿ ಜಯಗಳಿಸಿದ್ದಾರೆ. ಇದು ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಅವರ ಮೊದಲ ಗೆಲುವು. ಮದ್ರಾಸ್ ಇಂಟರ್ ನ್ಯಾಷನಲ್ ಕಾರ್ಟಿಂಗ್ ಅರೆನಾ (MIKA)ದಲ್ಲಿ ನಡೆದ ಸ್ಪರ್ಧೆಯಲ್ಲಿ ಟೀಮ್ ರಾಯೊ ರೇಸಿಂಗ್ನ ಪರ ಸ್ಪರ್ಧಿಸಿದ ಕಿಯಾನ್ ಪ್ರಾಬಲ್ಯ ಮೆರೆದು ಜೂನಿಯರ್ ರೊಟಾಕ್ಸ್ ವಿಭಾಗದ ಫೈನಲ್ನಲ್ಲಿ ಗೆಲುವು ಸಾಧಿಸಿದರು.
ಕಿಯಾನ್ ರೇಸ್ ಅವರು ಎರಡೂ ಪ್ರಾಕ್ಟೀಸ್ ಅವಧಿಗಳಲ್ಲಿ ಅಗ್ರಸ್ಥಾನ ಪಡೆದಿದ್ದಷ್ಟೇ ಅಲ್ಲ.. ಅತಿವೇಗದ ರೇಸರ್ ಆಗಿ ಹೊರಹೊಮ್ಮಿದರು. ಇದರಿಂದ ಪೋಲ್ ಪೊಸಿಷನ್ ಸಹ ಗಳಿಸಿದರು. ಅರ್ಹತಾ ಲ್ಯಾಪ್ ಅನ್ನು 50.530 ಸೆಕೆಂಡ್ಗಳಲ್ಲಿ ಮುಗಿಸಿದರು. 18 ರೇಸರ್ಗಳ ಪೈಕಿ 8 ಮಂದಿಯನ್ನು ಕಿಯಾನ್ ಕೇವಲ ಅರ್ಧ ಸೆಕೆಂಡ್ ಕಡಿಮೆ ಸಮಯದಲ್ಲಿ ಹಿಂದಿಕ್ಕಿದ್ದು ವಿಶೇಷವಾಗಿತ್ತು.
ಕಿಯಾನ್ಗೆ ಭಾರೀ ಪೈಪೋಟಿ ನೀಡಿದ ಚೆನ್ನೈನ ಶಿವಾನ್ ಕಾರ್ತಿಕ್ (50.672 ಸೆಕೆಂಡ್) 2ನೇ ಹಾಗೂ ಇಶಾಂತ್ ವೆಂಕಟೇಶನ್ (50.731 ಸೆಕೆಂಡ್) 3ನೇ ಸ್ಥಾನ ಪಡೆದರು.
1.2 ಕಿ.ಮೀ. ಉದ್ದದ ಎಫ್ಐಎ ಗ್ರೇಡ್ 1 ಅಂತಾರಾಷ್ಟ್ರೀಯ ಕಾರ್ಟಿಂಗ್ ಸರ್ಕ್ಯೂಟ್ ಕುರಿತು ಮಾತನಾಡಿದ ಕಿಯಾನ್ “ ಈ ರೇಸ್ಗೆ ಸಾಕಷ್ಟು ಪ್ರಾಕ್ಟೀಸ್ ಮಾಡಿದ್ದೆ. ಗೆಲ್ಲುವುದಷ್ಟೇ ನನ್ನ ಗುರಿಯಾಗಿತ್ತು. ಅತ್ಯುತ್ತಮ ಗುಣಮಟ್ಟದ ಕಾರ್ಟ್ ಸಿದ್ಧಪಡಿಸಿ ಕೊಟ್ಟ ನನ್ನ ತಂಡಕ್ಕೆ ಧನ್ಯವಾದ “ ಎಂದಿರುವ ಕಿಯಾನ್, ಗೆಲುವನ್ನು ತಮ್ಮ ತಂದೆ ತಾಯಿಗೆ ಅರ್ಪಿಸಿದರು.
8 ಬಾರಿ ರಾಷ್ಟ್ರೀಯ ಚಾಂಪಿಯನ್ ಹಾಗೂ ರಾಯೋ ರೇಸಿಂಗ್ನ ಸ್ಟೀಪನ್ ರಾಯೋ ‘ನಾನು ನೋಡಿದ ಕೆಲವು ಉತ್ತಮ ರೇಸ್ಕ್ರಾಫ್ಟ್ ಸಾಮರ್ಥ್ಯ ಕಿಯಾನ್ ಅವರಲ್ಲಿದೆ. ಆತನಲ್ಲಿ ವೇಗವಿದೆ ಮತ್ತು ಸಾಕಷ್ಟು ಪರಿಶ್ರಮ ವಹಿಸುತ್ತಿದ್ದಾನೆ. ಇದು ಕೇವಲ ಪ್ರಾರಂಭವಷ್ಟೇ ಎಂದು ಅಭಿನಂದಿಸಿದ್ದಾರೆ.
ಹೀಟ್ 1 ಕಿಯಾನ್ ಪೋಲ್ನಿಂದ ಉತ್ತಮ ಆರಂಭದೊಂದಿಗೆ ಶುರುವಾಗಿದ್ದಷ್ಟೇ ಅಲ್ಲ, ಬಹಳ ಬೇಗ ಎಲ್ಲರನ್ನೂ ಹಿಂದಿಕ್ಕಿದರು. ಅವರ ಹಿಂದೆ, ಪುಣೆಯ ಕ್ರೆಸ್ಟ್ ಮೋಟಾರ್ ಸ್ಪೋರ್ಟ್ಸ್ನ ಆರಫಾತ್ ಶೇಖ್ ಮತ್ತು ಸ್ವರ್ಣವ್ ದಾಸ್ ಇಬ್ಬರೂ, ಚೆನ್ನೈನ ರೇಸ್ಗಳನ್ನು ಹಿಂದಕ್ಕೆ ಹಾಕಿ ಕಿಯಾನ್ ಜೊತೆ ನೇರಾನೇರ ಸ್ಪರ್ಧೆ ನಡೆಸಿದರು. ಆದರೆ, ಕಿಯಾನ್ 2.5 ಸೆಕೆಂಡ್ ಅಂತರ ಕಾಯ್ದುಕೊಂಡು ಸುಲಭವಾಗಿಯೇ ಗೆದ್ದರು.
ಹೀಟ್ 2 ನಲ್ಲೂ ಕಿಯಾನ್ ಆರಂಭಿಕ ಮುನ್ನಡೆ ಪಡದರು. ಆದರೆ ಶೇಖ್ ಅತ್ಯುತ್ತಮ ಚಾಲನೆಯೊಂದಿಗೆ ರೇಸ್ ಗೆದ್ದರು. ವೆಂಕಟೇಶನ್ ಮೂರನೇ ಸ್ಥಾನ ಪಡೆದರು. ಪ್ರಮುಖ ಪ್ರಿ-ಫೈನಲ್ನಲ್ಲಿ ಕಿಯಾನ್ ಮತ್ತೊಮ್ಮೆ ಪೋಲ್ ಪೊಸಿಷನ್ನಿಂದ ಆರಂಭಿಸಿದರು. ಅದ್ಭುತವಾದ ಆರಂಭ ಸಿಕ್ಕರೂ, ಲ್ಯಾಪ್ 2 ರಲ್ಲಿ ಆಕ್ಸಿಡೆಂಟ್ ಆಯ್ತು. ಹೀಗಾಗಿ ರೇಸ್ ಮತ್ತೆ ನಡೆಯಿತು. ಮತ್ತೊಮ್ಮೆ ಕಿಯಾನ್ ಅತ್ಯುತ್ತಮ ಆರಂಭ ಮಾಡಿ, ಪ್ರತಿ ಲ್ಯಾಪ್ನಲ್ಲೂ ಅಂತರ ಹೆಚ್ಚಿಸಿಕೊಳ್ಳುತ್ತಾ ಸಾಗಿದ ಕಿಯಾನ್ 14 ಲ್ಯಾಪ್ಗಳ ಪ್ರಿ ಫೈನಲ್ ಗೆದ್ದರು.
ಫೈನಲ್ನಲ್ಲಿ ಮತ್ತೊಮ್ಮೆ ಪೋಲ್ ಪೊಸಿಷನ್ನಿಂದ ರೇಸ್ ಆರಂಭಿಸಿ, ಆಕರ್ಷಕ ರೇಸ್ ಮೂಲಕ ಗೆಲುವು ಸಾಧಿಸಿದರು ಕಿಯಾನ್. ಬೆಂಗಳೂರಿನ ರಿಷಿಕ್ ರೆಡ್ಡಿ 2ನೇ ಹಾಗೂ ಚೆನ್ನೈನ ಎಶಾಂತ್ ವೆಂಕಟೇಶನ್ 3ನೇ ಸ್ಥಾನ ಪಡೆದರು.
ಕಿಯಾನ್ ಎರಡು ವರ್ಷಗಳ ಹಿಂದೆ ರಾಯೊ ರೇಸಿಂಗ್ನೊಂದಿಗೆ 2-ಸ್ಟ್ರೋಕ್ ಕಾರ್ಟಿಂಗ್ ಪ್ರಾರಂಭಿಸಿದರು. ಈ ವರ್ಷ ಅವರು ಏಷ್ಯನ್ ರೊಟಾಕ್ಸ್ ಚಾಂಪಿಯನ್ಶಿಪ್ನಲ್ಲೂ ಪಾಲ್ಗೊಂಡಿರುವ ಅವರು, ಸದ್ಯ ಎರಡು ಪೋಡಿಯಂ ಫಿನಿಶ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.



