ಎಲ್.ಕೆ.ಅಡ್ವಾಣಿ. ಶ್ರೀರಾಮ ಜನ್ಮಭೂಮಿ ಹೋರಾಟದಲ್ಲಿ ಮರೆಯಲಾಗದ ಮರೆಯಬಾರದ ಹೆಸರು. 90ರ ದಶಕದಲ್ಲಿ ರಾಮಜನ್ಮಭೂಮಿ ಹೋರಾಟಕ್ಕೆ ಸ್ಫೂರ್ತಿ ತುಂಬಿದವರೇ ಎಲ್.ಕೆ. ಅಡ್ವಾಣಿ. ಅಂತಹ ಅಡ್ವಾಣಿಯವರು ರಾಮ ಮಂದಿರ ಪ್ರತಿಷ್ಠಾಪನೆಗೆ ಬರುತ್ತಾರೋ.. ಇಲ್ಲವೋ.. ಎಂಬ ಅನುಮಾನಗಳಿದ್ದವು. ಚಂಪತ್ ರಾಯ್ ಅವರ ಹೇಳಿಕೆಯಿಂದಾಗಿ ಕರಸೇವಕರೂ ಮುಜುಗರಕ್ಕೊಳಗಾಗಿದ್ದರು. ಆದರೆ ಅಡ್ವಾಣಿ ಬರುತ್ತಿದ್ದಾರೆ. ವಯಸ್ಸು 90 ದಾಟಿರುವ ಕಾರಣ ಅಡ್ವಾಣಿ ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ವೇಳೆಯಲ್ಲಿಯೇ ಅಡ್ವಾಣಿ ತಮ್ಮ ರಾಮರಥ ಯಾತ್ರೆ, ಮೋದಿಯವರಿಂದ ಪ್ರತಿಷ್ಠಾಪನೆ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಂಡಿದ್ದಾರೆ. ಹಿಂದಿ ಸಾಹಿತ್ಯ ಮಾಸ ಪತ್ರಿಕೆ ರಾಷ್ಟ್ರಧರ್ಮದಲ್ಲಿ ಅಡ್ವಾಣಿ ವಿಶೇಷ ಲೇಖನ ಬರೆದಿದ್ದಾರೆ. ‘ಶ್ರೀ ರಾಮ ಮಂದಿರ: ಫುಲ್‌ಫಿಲ್‌ಮೆಂಟ್ ಆಫ್ ಡಿವೈನ್ ಡ್ರೀಮ್’ ಎನ್ನುವ ಶೀರ್ಷಿಕೆಯಲ್ಲಿ ಸಂದರ್ಶನ ಪ್ರಕಟವಾಗಿದೆ. ಲೇಖನದ ಆಯ್ದ ಭಾಗಗಳ ಸಾರಾಂಶ ಹೀಗಿದೆ.
ನಾನು ಸಾರಥಿಯಷ್ಟೇ :
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವೇ ನಿರ್ಮಾಣ ಆಗಬೇಕು ಎಂದು ವಿಧಿಯೇ ನಿರ್ಧಾರ ಮಾಡಿತ್ತು. ರಥಯಾತ್ರೆ ಪ್ರಾರಂಭವಾದ ಕೆಲವೇ ದಿನಗಳಲ್ಲಿ, ನಾನು ಕೇವಲ ಇದಕ್ಕೆ ಸಾರಥಿ ಎಂದು ಅರಿತುಕೊಂಡಿದ್ದೆ. ಆ ರಥವೇ ರಥಯಾತ್ರೆಯ ಮುಖ್ಯ ಸಂದೇಶವಾಹಕವಾಗಿತ್ತು. ದೇವಾಲಯ ನಿರ್ಮಿಸುವ ಪವಿತ್ರ ಉದ್ದೇಶವನ್ನು ಪೂರೈಸಿದ ಕಾರಣ ಅದು ಪೂಜನೀಯವೂ ಆಗಿತ್ತು.ಯಾಕೆಂದರೆ, ಆ ರಥ ರಾಮ ಜನ್ಮಭೂಮಿಗೆ ಹೊರಟಿತ್ತು.
ಮೋದಿ ಶ್ರೀರಾಮನ ಆಯ್ಕೆ : ಇಂದು ಐತಿಹಾಸಿಕ ರಥಯಾತ್ರೆಗೆ 33 ವರ್ಷವಾಗಿದೆ. 1990ರ ಸೆಪ್ಟೆಂಬರ್ 25ರ ಬೆಳಗ್ಗೆ ರಥಯಾತ್ರೆ ಆರಂಭವಾಗಿತ್ತು. ನಿಜವಾಗಿಯೂ ಹೇಳುತ್ತೇನೆ, ಈ ಯಾತ್ರೆಯನ್ನು ಆರಂಭ ಮಾಡಿದ ದಿನ, ಭಗವಾನ್ ರಾಮನ ಮೇಲಿನ ನಂಬಿಕೆ ದೇಶದಲ್ಲಿ ಚಳವಳಿ ರೂಪವನ್ನು ತೆಗೆದುಕೊಳ್ಳುತ್ತದೆ ಎಂದು ನಮಲ್ಲಿದ್ದ ಯಾರಿಗೂ ಅನಿಸಿರಲಿಲ್ಲ. ರಥಯಾತ್ರೆಯ ವೇಳೆ ಈಗಿನ ಪ್ರಧಾನಿ ನರೇಂದ್ರ ಮೋದಿ ನನ್ನ ಸಹಾಯಕರಾಗಿದ್ದರು. ಇಡೀ ರಥಯಾತ್ರೆಯ ಪ್ರಯಾಣದಲ್ಲಿ ಅವರು ನನ್ನ ಜೊತೆಗಿದ್ದರು. ಅಂದು ಅವರು ಇಷ್ಟು ಪ್ರಸಿದ್ಧರಾಗಿರಲಿಲ್ಲ. ಆದರೆ, ಅದಾಗಲೇ ರಾಮ ಮಾತ್ರ ತನ್ನ ದೇವಸ್ಥಾನದ ಪುನರ್‌ನಿರ್ಮಾಣಕ್ಕೆ ವಿಶೇಷ ಭಕ್ತನನ್ನು ಆರಿಸಿಕೊಂಡಿದ್ದ. ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇವಸ್ಥಾನವನ್ನು ಉದ್ಘಾಟನೆ ಮಾಡಿದಾಗ, ದೇಶದ ಪ್ರತಿಯೊಬ್ಬರನ್ನು ಅವರು ಪ್ರತಿನಿಧಿಸುತ್ತಾರೆ.
ಅಟಲ್ ಇರಬೇಕಿತ್ತು :
ರಾಮ ಮಂದಿರ ಸಾಕಾರವಾಗುತ್ತಿದೆ. ಇಂಥದ್ದೊಂದು ಕ್ಷಣವನ್ನು ನೋಡಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇರಬೇಕಿತ್ತು. ತಮಗೆ ಅವರ ಅನುಪಸ್ಥಿತಿ ಕಾಡುತ್ತಿದೆ.
ಹಳ್ಳಿ ಹಳ್ಳಿಗಳಲ್ಲೂ ರೋಮಾಂಚನ :
ರಥಯಾತ್ರೆಯ ವೇಳೆ ದೂರ ದೂರದ ಹಳ್ಳಿಗಳ ಅಪರಿಚಿತ ಗ್ರಾಮಸ್ಥರು ಭಾವುಕರಾಗಿ ರಥದ ಬಳಿಕ ಬಂದು ರಾಮನ ಸ್ತುತಿ ಮಾಡುತ್ತಿದ್ದರು. ಇಡೀ ದೇಶದಲ್ಲಿ ರಾಮ ಮಂದಿರದ ಕನಸು ಕಾಣುವ ಅನೇಕ ಜನರಿದ್ದರು ಎನ್ನುವ ಸಂದೇಶ ಕೊಟ್ಟಿದ್ದರು. ಗುಜರಾತ್‌ನಿಂದ ಮಹಾರಾಷ್ಟ್ರದವರೆಗೆ ದೊಡ್ಡ ಮಟ್ಟದಲ್ಲಿ ಜನ ಬೆಂಬಲ ದೊರೆಯಿತು. ನಂತರ ರಥ ಹೋದ ರಾಜ್ಯದಲ್ಲೆಲ್ಲಾ ಕ್ರಮೇಣವಾಗಿ ಜನಸಮೂಹ ಸೇರಿತು. ‘ಜೈ ಶ್ರೀ ರಾಮ್’ ಮತ್ತು ‘ಸೌಗಂದ್ ರಾಮ್ ಕಿ ಕಾತೇ ಹೈ, ಮಂದಿರ್ ವಹೀ ಬನಾಯೇಂಗೆ’ ಮುಂತಾದ ಪ್ರಸಿದ್ಧ ಘೋಷಣೆ ಮೊಳಗಿದವು. ಜನವರಿ 22 ರಂದು ದೇವಾಲಯದ ಉದ್ಘಾಟನೆಯೊಂದಿಗೆ ರಥಯಾತ್ರೆಯಲ್ಲಿ ಸಿಕ್ಕ ಅಂಥ ವ್ಯಕ್ತಿಗಳ ಬಯಕೆ ಹಾಗೂ ಕನಸುಗಳು ಕೂಡ ಈಡೇರುತ್ತಿದೆ.
ಜನವರಿ 22ರಂದು ಅಡ್ವಾಣಿಯೂ ಅಯೋಧ್ಯೆಗೆ ಹೋಗುತ್ತಾರೆ. ಸಾವಿರಾರು ಗಣ್ಯರ ಜೊತೆ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಅವರ ಜೊತೆ ಅಡ್ವಾಣಿಯೂ ಇರುತ್ತಾರೆ.



