ತಿರುಪತಿ ತಿಮ್ಮಪ್ಪನ ಲಡ್ಡು (Thirupathi laddu) ಎಂದರೆ ಅದೇನೋ ಟೇಸ್ಟು. ಅದು ನಂದಿನಿ ತುಪ್ಪದ (Nadini ghee) ಮಹಿಮೆಯೋ.. (Thirupathi Venkateshwara) ತಿರುಪತಿ ತಿಮ್ಮಪ್ಪನ ಪ್ರಭಾವವೋ.. ತಿಮ್ಮಪ್ಪ ಎಂದರೆ ಮೈಮನಗಳಲ್ಲಿ ಆಗುವ ರೋಮಾಂಚನವೋ.. ಭಕ್ತಿಯೋ.. ತಿರುಪತಿ ಲಡ್ಡು ಎಂದರೆ ಮೈಯೆಲ್ಲ ಶುಗರ್ ಇರುವವರೂ ಆಆಆಆಆ… ಎಂದು ಬಾಯಿ ತೆರೆಯುತ್ತಾರೆ. ಆದರೆ ಅಂತಹ ತಿರುಪತಿ ಲಡ್ಡುಗೆ ಇನ್ನು ಮುಂದೆ ಕೆಎಂಎಫ್ ತುಪ್ಪು ಕೊಡುತ್ತಿಲ್ಲ. ಕಳೆದ 50 ವರ್ಷಗಳಿಂದ ಸರಬರಾಜು ಮಾಡುತ್ತಿದ್ದ ಕರ್ನಾಟಕ ಹಾಲು ಒಕ್ಕೂಟದ ಬಳ್ಳಾರಿ ವಿಭಾಗದಿಂದ ನಂದಿನಿ ತುಪ್ಪವನ್ನು (KMF Ghee) ಸರಬರಾಜು ಮಾಡಲಾಗುತ್ತಿತ್ತು. ಆದರೆ, ಅತ್ಯಂತ ಕಡಿಮೆ ಬೆಲೆಗೆ ತುಪ್ಪ ಕೇಳುತ್ತಿರುವ ಹಿನ್ನೆಲೆಯಲ್ಲಿ ತುಪ್ಪ ಸರಬರಾಜು ಮಾಡುವುದನ್ನು ಕೆಎಂಎಪ್ ವಾಪಸ್ ಪಡೆದುಕೊಂಡಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಸ್. ಭೀಮಾನಾಯ್ಕ (KMF Bheema Naik) ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ತಿರುಪತಿ ದೇವಸ್ಥಾನಕ್ಕೆ ತುಪ್ಪ ನೀಡುತ್ತಿಲ್ಲ. ಬಹಳ ವರ್ಷಗಳಿಂದ ತಿರುಪತಿಗೆ ಕೆಎಂಎಫ್ನ ತುಪ್ಪ (KMF Ghee) ನೀಡುತ್ತಿದ್ದೆವು. ಕಳೆದ ವರ್ಷ ಟೆಂಡರ್ ಕರೆದಿದ್ದರೂ ನಾವು ಹಾಕಲಿಲ್ಲ. ಪೈಪೋಟಿಯ ದರದಲ್ಲಿ ನಾವು ಗುಣಮಟ್ಟದ ತುಪ್ಪ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ಟೆಂಡರ್ನಿಂದ ದೂರ ಉಳಿದಿದ್ದೇವೆ. ಕೆಎಂಎಫ್ ತುಪ್ಪಕ್ಕೆ ಭಾರೀ ಬೇಡಿಕೆಯಿದೆ. ಬೇಡಿಕೆಯ ಶೇ. 60ರಷ್ಟು ಮಾತ್ರ ಪೂರೈಕೆ ಮಾಡಲು ಸಾಧ್ಯವಾಗಿದೆ. ಈ ಕಾರಣಕ್ಕಾಗಿಯೇ ಹಾಲು ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಹೆಚ್ಚುವರಿಯಾಗಿ 3 ರೂಪಾಯಿ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ ಭೀಮಾ ನಾಯ್ಕ್.
ಇದರಿಂದ ಕೆಎಂಎಫ್‍ಗೆ ಆಗುವ ನಷ್ಟವೇನು? ಟಿಟಿಡಿಗೆ ಆಗುವ ಲಾಭವೇನು? ಟಿಟಿಡಿಯವರು, ಕೆಎಂಎಫ್ ದರವನ್ನು ಒಪ್ಪಲು ನಿರಾಕರಿಸಿದ್ದೇಕೆ ಎಂದು ನೋಡಿದರೆ ತೆರೆದುಕೊಳ್ಳುವುದೇ ಈ ಲೆಕ್ಕ.
ಕೆಎಂಎಫ್`ನವರು ತಿರುಪತಿಗೆ ಸರಬರಾಜು ಮಾಡುತ್ತಿದ್ದ ತುಪ್ಪ ಕಳೆದ 14 ತಿಂಗಳಲ್ಲಿ 14 ಲಕ್ಷ ಕೆಜಿ.
ತಿರುಪತಿಯವರಿಗೆ ಒಂದು ದಿನಕ್ಕೆ ಅಗತ್ಯ ಇರುವ ತುಪ್ಪ 1700 ಕೆಜಿಯಿಂದ 2000 ಕೆಜಿಯಾದರೆ, ಕೆಎಂಎಫ್ ಪೂರೈಸುತ್ತಿದ್ದ ನಂದಿನಿ ತುಪ್ಪದ (KMF Ghee) ಪ್ರಮಾಣ 1300 ಕೆಜಿಯಿಂದ 1500 ಕೆಜಿಯಷ್ಟಿತ್ತು. ಬೇರೆ ಕಂಪೆನಿಯ ತುಪ್ಪ ಬಳಸುತ್ತಿದ್ದರಾದರೂ, ಅದರ ಪ್ರಮಾಣ ಕಡಿಮೆ ಇರುತ್ತಿತ್ತು.
ಟಿಟಿಡಿಯವರಿಗೆ (TTD) ಕೆಎಂಎಫ್‍ನವರು ಕೊಡುತ್ತಿದ್ದ ತುಪ್ಪದ ರೇಟು ಒಂದು ಕೆಜಿಗೆ 392 ರೂಪಾಯಿಗಳು. ಆದರೆ ಈಗ ಕೆಎಂಎಫ್‍ನವರು (KMF Ghee) ಕೆಜಿ ತುಪ್ಪಕ್ಕೆ 470 ರೂ. ಡಿಮ್ಯಾಂಡ್ ಮಾಡಿದ್ಧಾರೆ. ಆದರೆ ಕೆಜಿ ತುಪ್ಪಕ್ಕೆ 78 ರೂ.ಗಳಷ್ಟು ಹೆಚ್ಚು ಕೊಡುವುದಕ್ಕೆ ಟಿಟಿಡಿ (TTD) ಒಪ್ಪಿಲ್ಲ. ಯಾವಾಗ ಅವರು ಅಷ್ಟು ರೇಟ್ ಕೊಡುವುದಿಲ್ಲ ಎಂದರೋ.. ಆಗ ಕೆಎಂಎಫ್‍ನವರು ಓಪನ್ ಮಾರ್ಕೆಟ್ಟಿನಲ್ಲಿ ಟೆಂಡರ್ ಕೂಡಾ ಹಾಕಿಲ್ಲ. ಅಲ್ಲಿಗೆ ತಿರುಪತಿಗೆ (Tirupati) ತುಪ್ಪದ ಸರಬರಾಜು ಸ್ಟಾಪ್ ಆಗಿದೆ.
ಕೆಎಂಎಫ್`ಗೆ ನಷ್ಟವಾಗುತ್ತಾ?
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರ ಪ್ರಕಾರ ನಂದಿನಿ ತುಪ್ಪಕ್ಕೆ (KMF Ghee) ಬಹಳಷ್ಟು ಡಿಮ್ಯಾಂಡ್ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಎಂಎಫ್ ಹಾಲಿಗೆ, ತುಪ್ಪಕ್ಕೆ ಬೇಡಿಕೆಯಿದೆ. ದುಬೈನಲ್ಲಿ (Dubai) ಕೆಎಂಎಫ್ ಮಳಿಗೆ ಉದ್ಘಾಟಿಸಲಾಗುತ್ತಿದ್ದು, ಮುಖ್ಯಮಂತ್ರಿಗಳಿಗೂ ಆಗಮಿಸುವಂತೆ ಕೋರಲಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಹಾಲಿಗೆ, ತುಪ್ಪಕ್ಕೆ ಬೇಡಿಕೆಯಿದೆ. ಆದರೆ, ಮಾರುಕಟ್ಟೆ ಬೆಲೆಗಿಂತ ಅತೀ ಕಡಿಮೆ ದರಕ್ಕೆ ತುಪ್ಪ, ಹಾಗೂ ಹಾಲಿನ ಉಪ ಉತ್ಪನ್ನಗಳನ್ನು ಮಾರಾಟ ಮಾಡಿದರೆ ನಿಗಮಕ್ಕೆ ನಷ್ಟವಾಗಲಿದೆ. ಓಟಿಡಿ (TTD) ನಿರಾಕರಿಸಿದರೂ, ಅಷ್ಟೂ ತುಪ್ಪಕ್ಕೆ ಬೇಡಿಕೆ ಇರುವುದರಿಂದ ನಷ್ಟವಿಲ್ಲ, ಲಾಭವೇ ಇದೆ ಎನ್ನುವದು ಕರ್ನಾಟಕ ಹಾಲು ಮಹಾಮಂಡಳ ಅಧ್ಯಕ್ಷ ಎಸ್. ಭೀಮಾನಾಯ್ಕ ಮಾಹಿತಿ.
ಟಿಟಿಡಿಯವರಿಗೆ (TTD) ಕೊಡುವ ನಂದಿನಿ ತುಪ್ಪ ಕೆಜಿಗೆ 392 ರೂ. ಆದರೆ, ಮಾರುಕಟ್ಟೆಯಲ್ಲಿ ಅದೇ ನಂದಿನಿ ತುಪ್ಪ (nandini Ghee) ಒಂದು ಕೆಜಿ ಪ್ಯಾಕೆಟ್`ಗೆ 610 ರೂ. ಅದೇ ತುಪ್ಪ ಒಂದು ಬಾಟೆಲ್`ಗೆ 620 ರೂ. ಹೀಗಿರುವಾಗ ಅದೇ ತುಪ್ಪವನ್ನು ನಾವು ರಿಯಾಯಿತಿ ದರದಲ್ಲಿ 470 ರೂ. ಕೊಡಿ ಎಂದರೂ, ಅವರು ಹಳೆಯ ದರ 392 ರೂ.ಗೇ ಕೊಡಿ ಎಂದು ಡಿಮ್ಯಾಂಡ್ ಮಾಡಿದರೆ ಹೇಗೆ ಎನ್ನುವುದು ಭೀಮಾ ನಾಯ್ಕ್ ಪ್ರಶ್ನೆ.
ಅಂದಹಾಗೆ ತಿರುಪತಿಯರಿಗೆ (Tirupathi) ತುಪ್ಪ ಕಳಿಸಿದಾಗಲೆಲ್ಲ ಅದನ್ನು ಟ್ಯಾಂಕರಿನಲ್ಲಿ ಕಳಿಸಲಾಗುತ್ತಿತ್ತು. ಪ್ಯಾಕೆಟ್ ಅಥವಾ ಬಾಟಲಿಗಳಲ್ಲಿ ಅಲ್ಲ. ಆ ತುಪ್ಪದ ಟ್ಯಾಂಕರ್`ನ್ನು ದಿನಗಟ್ಟಲೆ ರಸ್ತೆಯಲ್ಲೇ ನಿಲ್ಲಿಸಿ ನಂತರ ರಿಸೀವ್ ಮಾಡಿ ಕಿರುಕುಳ ನೀಡುತ್ತಿದ್ದರು ಎಂದು ಕೂಡಾ ಭೀಮಾ ನಾಯ್ಕ್ ಆರೋಪಿಸಿದ್ದಾರೆ.



