ರಾಜ್ಯ ಕೆಎಂಎಫ್`ನ ನೂತನ ಅಧ್ಯಕ್ಷ ಭೀಮಾನಾಯ್ಕ್, ರಾಜ್ಯದ ಎಲ್ಲ ಹಾಲು ಒಕ್ಕೂಟಗಳ ಸಭೆ ಕರೆದಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಮಹಾಮಂಡಳಗಳ ಒಕ್ಕೂಟಗಳ ಸಭೆ ಜುಲೈ 6ಕ್ಕೆ ನಡೆಯಲಿದೆ. ಕಳೆದ ಎರಡು ತಿಂಗಳಿಂದಲೂ ದರ ಏರಿಕೆಗೆ ಹಾಲು ಒಕ್ಕೂಟಗಳು ಪಟ್ಟು ಹಿಡಿದಿವೆ. ಈ ಹಿನ್ನೆಲೆಯಲ್ಲಿ ಒಕ್ಕೂಟಗಳ ಸಭೆ ಕರೆದಿದ್ದಾರೆ ಭೀಮಾನಾಯ್ಕ್.
ಕಳೆದ ವಾರ ಕೆಎಂಎಫ್ ಅಧ್ಯಕ್ಷರ ಚುನಾವಣೆ ನಡೆದಿತ್ತು. ಕೆಎಂಎಫ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಭೀಮನಾಯ್ಕ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ನಂದಿನಿ ಹಾಲಿನ ದರ ಹೆಚ್ಚಳದ ಸುಳಿವು ನೀಡಿದ್ದರು. ರಾಜ್ಯ ಸರ್ಕಾರ ಹಾಲು ಉತ್ಪಾದಕರ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ಲೀಟರ್ಗೆ 5 ರು. ನೀಡುತ್ತಿದೆ. ಇನ್ನು 2 ರು.ಹೆಚ್ಚಳ ಮಾಡುವ ಬಗ್ಗೆ ತೀರ್ಮಾನ ಇದೆ. ಪ್ರಸ್ತುತ ಎಲ್ಲ ಹಾಲು ಒಕ್ಕೂಟಗಳು ಪ್ರತಿ ಲೀಟರ್ಗೆ 5 ರು.ಬೆಲೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದಿದ್ದರು. ಆದರೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಂತರ ಈ ಬಗ್ಗೆ ಚರ್ಚೆಯೇ ಆಗಲಿಲ್ಲ. ಮುಂದಿನ ಬಾರಿ ಮಾತನಾಡುತ್ತೇವೆ ಎಂದಿದ್ದರು. ಆದರೆ ಒಕ್ಕೂಟಗಳು ಬೆನ್ನು ಹತ್ತಿದ್ದು, ಪ್ರತಿದಿನವೂ ನಷ್ಟ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆಗೆ ಮನವಿ ಮಾಡಲು ನಿರ್ಧಾರ ಮಾಡಿದ್ದಾರೆ.
ಕೆಎಂಎಫ್ ಎಂಡಿಯವರೂ ಖಚಿತವಾಗಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬೆಲೆ ಏರಿಕೆಯಾಗುವುದು ಖಚಿತ. ಆದರೆ 5 ರೂಪಾಯಿ ಆಗದೇ ಹೋದರೂ, ಒಂದಿಷ್ಟು ಕಡಿಮೆ ಮಾಡಬಹುದು. ಹಾಲು, ಮೊಸರುಗಳ ಬೆಲೆ ಏರಿಕೆಯಾಗುವುದಂತೂ ನಿಶ್ಚಿತ. ಜುಲೈ 6ರಂದು ಈ ಬಗ್ಗೆ ನಿರ್ಧಾರ ಹೊರಬೀಳಲಿದೆ.



