ಧ್ರುವ ಸರ್ಜಾ ಅವರ ಮಕ್ಕಳಿಗೆ ನಾಮಕರಣ ನೆರವೇರಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುವ ಶುಭ ಮುಹೂರ್ತದಲ್ಲೇ ನಾಮಕರಣವೂ ಜರುಗಿದೆ. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಎಂದು ಹೆಸರನ್ನಿಟ್ಟಿರುವ ಧ್ರುವ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ನಾಮಕರಣ ಮಾಡಿದ್ದಾರೆ.
ರುದ್ರಾಕ್ಷಿ ಮತ್ತು ಹಯಗ್ರೀವ ಈ ಎರಡೂ ಹೆಸರುಗಳು ದೇವರಿಗೆ ಸಂಬಂಧಿಸಿದ್ದು. ರುದ್ರಾಕ್ಷಿ, ಪರಮೇಶ್ವರನ ಪವಿತ್ರ ಆಭರಣ. ರುದ್ರಾಕ್ಷಿ ಧರಿಸುವುದು ಶಿವಭಕ್ತಿಯ ಸಂಕೇತ. ಇನ್ನು, ಹಯಗ್ರೀವ ಎನ್ನುವುದು ವಿಷ್ಣುವಿನ ಕುದುರೆಮುಖದ ಅವತಾರದ ಹೆಸರು. ಅಷ್ಟೇ ಅಲ್ಲ, ಆಂಜನೇಯನ ಇನ್ನೊಂದು ಹೆಸರೂ ಹೌದು.
ಧ್ರುವ ಸರ್ಜಾ ಪ್ರೇರಣಾ ಅವರ ಮಕ್ಕಳ ನಾಮಕರಣ ಸಮಾರಂಭಕ್ಕೆ ಬಾಲಿವುಡ್ ನಟ ಸಂಜಯ್ ದತ್ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ನಿರ್ಮಾಪಕ ಸುಪ್ರೀತ್ ಮುಂತಾದವರು ಸಮಾರಂಭಕ್ಕೆ ಆಗಮಿಸಿದ್ದರು. ಮಗ ರಾಯನ್ ಜೊತೆ ಮೇಘನಾ ರಾಜ್ ಕೂಡಾ ಬಂದಿದ್ದರು. ಅರ್ಜುನ್ ಸರ್ಜಾ ಮಕ್ಕಳಿಗೆ ಹೆಸರಿಟ್ಟರು.
ಫ್ಯಾನ್ಸಿ ಹೆಸರು ಇಡುವುದು ಬೇಡವೆಂದು ಮೊದಲೇ ನಿಶ್ಚಯ ಮಾಡಿದ್ದೆವು ಹಾಗಾಗಿ ಸಂಪ್ರದಾಯಬದ್ಧವಾದ, ಅರ್ಥವುಳ್ಳ ಹೆಸರು ಇಟ್ಟಿದ್ದೇವೆ ಎಂದಿದ್ದಾರೆ ಧ್ರುವ ಸರ್ಜಾ. ಒತ್ತಕ್ಷರ ಹೆಸರಿಡಬೇಕು ಅಂತ ಈ ನಿರ್ಧಾರ ಮಾಡಿದ್ವಿ, ಒತ್ತಕ್ಷರ ಅಂದ್ರೆ ತುಂಬಾ ಒಳ್ಳೆಯದು ಅನ್ನುವ ನಂಬಿಕೆ ಇದೆ. ಅಯೋಧ್ಯೆಯಲ್ಲಿ 12.20 ಕ್ಕೆ ಪೂಜೆ ಇತ್ತು. ನಾವು ನಮ್ಮ ಮಕ್ಕಳಿಗೂ ಅದೇ ಸಮಯಕ್ಕೆ ನಾಮಕರಣ ಮಾಡಿದೆವು ಎಂದು ತಿಳಿಸಿದ್ದಾರೆ ಧ್ರುವ ಸರ್ಜಾ.
ಅಯೋಧ್ಯೆಯಲ್ಲಿ ಪೂಜೆಯ ಸಮಯಕ್ಕೆ ಸರಿಯಾಗಿಯೇ ಇಲ್ಲಿ ಸಹ ಅದೇ ಸಮಯಕ್ಕೆ ಪೂಜೆ ಮುಗಿಯಿತು ಅದು ನನಗೆ ಬಹಳ ಖುಷಿ ಕೊಟ್ಟಿತು. ನಾವು ಕುಟುಂಬ ಸಮೇತ ಆದಷ್ಟು ಬೇಗ ಅಯೋಧ್ಯೆಗೆ ಭೇಟಿ ನೀಡಲಿದ್ದೇವೆ ಎಂದ ಧ್ರುವ ಸರ್ಜಾ, ನಾಮಕರಣದ ಥೀಮ್ ಬಗ್ಗೆ ಮಾತನಾಡಿ, ಮೋಹನ್ ಬಿಕೆ ಹಾಗೂ ರಾಕಿ ಅವರು ಸೆಟ್ ಹಾಕಿ ಅಲಂಕಾರ ಮಾಡಿಕೊಟ್ಟರು. ನನ್ನ ತಂಡ, ಗೆಳೆಯರು ಕೆಲಸ ಮಾಡಿ ನಾಮಕಾರಣ ಚೆನ್ನಾಗಿ ಮಾಡುವಂತಾಯಿತು ಎಂದು ತಿಳಿಸಿದ್ದಾರೆ.



