ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು ಗಲಭೆ ಪ್ರಕರಣದಲ್ಲಿ ರಾಜಕೀಯ ಮೇಲಾಟ ನಡೆಯುತ್ತಿದೆ. 74 ವ್ಯಕ್ತಿಗಳ ವಿರುದ್ಧ ಆರೋಪಪಟ್ಟಿಯಲ್ಲಿ ಇಬ್ಬರು ಕೇರಳದವರಿದ್ದಾರೆ. ಆರೋಪಪಟ್ಟಿಯಲ್ಲಿನ 44ನೇ ಆರೋಪಿ ಯೂಸುಫ್ ಹಾಗೂ 61ನೇ ಆರೋಪಿ ನಾಜಿರ್ ಇಬ್ಬರೂ ನಾಗಮಂಗಲದವರಲ್ಲ. ಕೇರಳದ ಮಲಪ್ಪುರಂನವರು. ಕೆಲವು ದಿನಗಳ ಹಿಂದಷ್ಟೇ ನಾಗಮಂಗಲಕ್ಕೆ ಬಂದು ನೆಲೆಸಿದ್ದರು. ಇದೆಲ್ಲದಕ್ಕಿಂತ ಹೆಚ್ಚಾಗಿ ಅವರಿಬ್ಬರೂ ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರು.
ಹೀಗೆ ಪ್ರಕರಣದ ತನಿಖೆಯ ವಿವರಗಳು ಹೊರಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವುದು ಕಾಂಗ್ರೆಸ್ ನಾಯಕರು. ಅದರಲ್ಲೂ ವಿಶೇಷವಾಗಿ ಚೆಲುವರಾಯಸ್ವಾಮಿ. ಏಕೆಂದರೆ ಪ್ರಕರಣದ ನಂತರ ಚೆಲುವರಾಯ ಸ್ವಾಮಿ ಅವರಿಗೆ ಬಹಿರಂಗವಾಗಿಯೇ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಅತ್ತ ಹಿಂದೂಗಳ ಕಣ್ಣಲ್ಲಿ, ಇತ್ತ ಮುಸ್ಲಿಮರ ಕಣ್ಣಲ್ಲಿಯೂ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಚೆಲುವರಾಯಸ್ವಾಮಿ. ಆದರೆ ಈ ಅನುಭವ ಕುಮಾರಸ್ವಾಮಿಗಾಗಲೀ, ಬಿಜೆಪಿಗಾಗಲೀ ಆಗಿಲ್ಲ.
ಗಲಭೆ ಸ್ಥಳಕ್ಕೆ ಕುಮಾರಸ್ವಾಮಿ ಭೇಟಿ ನೀಡಿದ್ದಾಗ ಸಂತ್ರಸ್ತರು ಕುಮಾರಸ್ವಾಮಿ ಅವರ ಬಳಿ ಅಳಲು ತೋಡಿಕೊಂಡರು. ವೈಯಕ್ತಿಕವಾಗಿ ಸಹಾಯವನ್ನೂ ಮಾಡಿದ್ಧಾರೆ. ಪಕ್ಷದ ವತಿಯಿಂದಲೂ ನೆರವು ಕೊಡಿಸಿದ್ದಾರೆ. ಇದೆಲ್ಲದರ ನಡುವೆ ಕೆಲ ಪಕ್ಷಗಳು ಒಂದೊಂದು ಸಮಾಜ ಓಲೈಕೆ ಮಾಡಿಕೊಳ್ಳೋದು ರಾಜ್ಯದಲ್ಲಿ ಕಾಣ್ತಿದೆ. ಕೈ ನಾಯಕರು ಒಂದು ಸಮಾಜವನ್ನ ಓಲೈಕೆ ಮಾಡುವ ರಾಜಕಾರಣ ಮಾಡಬಾರದು. ಈ ರೀತಿ ಓಲೈಕೆ ರಾಜಕಾರಣ ನನ್ನ ಜೀವನದಲ್ಲಿ ಎಂದು ಮಾಡಿಲ್ಲ. ಗೃಹ ಸಚಿವರಿಗೆ ಇದು ಸಣ್ಣ ವಿಷಯವಂತೆ. ಸ್ಥಳ ವೀಕ್ಷಣೆ ವೇಳೆ ವ್ಯವಸ್ಥಿತ ಪ್ಲ್ಯಾನ್ ಇರೋದು ಗೊತ್ತಾಗ್ತಿದೆ. ಇಲ್ಲಿದ್ದ ರಿಸರ್ವ್ ಪೊಲೀಸರನ್ನ ಬೇರೆಡೆಗೆ ಕಳಿಸ್ತಾರೆ. ಪೆಟ್ರೋಲ್ ಬಾಂಬ್, ತಲವಾರ್ ಹಿಡಿದು ಓಡಾಡೋದು ಮಾಧ್ಯಮದವರಿಗೆ ಗೊತ್ತಾದ ಕೂಡಲೇ ಬರ್ತಾರೆ ಆದ್ರೆ ಸರ್ಕಾರ ಏನ್ ಮಾಡ್ತಿತ್ತು. . ಕಲ್ಲು ಮತ್ತು ಪೆಟ್ರೋಲ್ ಅಷ್ಟು ಬೇಗ ಹೇಗೆ ಸಿಕ್ತು? ಘಟನೆಯಲ್ಲಿ ಎರಡು ಕೋಮಿನವರ ಅಂಗಡಿಗಳು ನಾಶವಾಗಿವೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವನ್ನು ಅರೆಸ್ಟ್ ಮಾಡಿ ಈಗ ಇನ್ಸ್ ಪೆಕ್ಟರ್ ಅವರ ಅಮಾನತು ಮಾಡಿದ್ದಾರೆ. FIR ಅಲ್ಲಿ ದೊಣ್ಣೆ ಪೆಟ್ರೋಲ್ ಬಾಂಬ್ ಲಾಂಗ್ ಬಗ್ಗೆ ಉಲ್ಲೇಖ ಮಾಡಿದ್ದಾರೆ, ಇದಕ್ಕೆನಾ ನಿಮಗೆ 136 ಸೀಟ್ ಕೊಟ್ಟಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.
ಇದು ಸಹಜವಾಗಿಯೇ ಚೆಲುವರಾಯಸ್ವಾಮಿ ಅವರನ್ನು ಕೆರಳಿಸಿದೆ. ಅವರು ಉತ್ತರ ಕೊಡಲೇಬೇಕು. ಆದರೆ ಸದ್ಯದ ಪರಿಸ್ಥಿತಿ ಯಾವುದೂ ಅವರ ಪರವಾಗಿಲ್ಲ. ಏಕೆಂದರೆ ಮನೆ, ಅಂಗಡಿ, ವಾಹನಗಳು ಸುಟ್ಟು ಕರಕಲಾಗಿವೆ. ಹಿಂದೂ, ಮುಸ್ಲಿಂ ಇಬ್ಬರೂ ಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ಪರವಾಗಿ ನಿಲ್ಲಬೇಕು ಎಂದು ಅವರು ಬಯಸುತ್ತಾರೆ. ಅದರೆ ಅವರ ಪರ ನಿಂತರೆ, ಇವರಿಗೆ ಕೋಪ, ಇವರ ಪರ ನಿಂತರೆ ಅವರಿಗೆ ಕೋಪ. ಚೆಲುವರಾಯಸ್ವಾಮಿ ಅವರದ್ದು ಇಕ್ಕಟ್ಟಿನ ಪರಿಸ್ಥಿತಿ. ಅಲ್ಲದೆ ಕಾನೂನು, ಸರ್ಕಾರದ ನಿಯಮಗಳ ಪ್ರಕಾರ ಸಂತ್ರಸ್ತರಿಗೆ ಸರ್ಕಾರಿಂದ ನೆರವು ಕೊಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಪ್ರತಿ ಹಂತದಲ್ಲೂ ಚೆಲುವರಾಯಸ್ವಾಮಿ ಕಷ್ಟಕ್ಕೆ ಸಿಲುಕ್ತಿದ್ದಾರೆ. ಚೆಲುವರಾಯಸ್ವಾಮಿ ಅವರ ಇಕ್ಕಟ್ಟಿನ ಸ್ಥಿತಿಯ ಲಾಭ ಆಗುವುದು ಬಿಜೆಪಿ ಮತ್ತು ಜೆಡಿಎಸ್‌ಗೆ. ಹಾಗಾದರೆ, ಸುಮಾರು ವರ್ಷ ಹೋರಾಟ ಮಾಡಿ ಕಟ್ಟಿಕೊಂಡಿದ್ದ ಕೋಟೆ ಛಿದ್ರವಾದಂತೆಯೇ ಲೆಕ್ಕ.
ನಾಗಮಂಗಲ ಗಲಭೆಯಲ್ಲಿ ಅಮಾಯರಕರನ್ನು ಬಂಧಿಸಿದ್ದು ನಿಜ, ಇದನ್ನು ನಾನು ಒಪ್ತೀನಿ ಎಂದು ಮೊದಲ ಹಂತದ ತಪ್ಪು ಒಪ್ಪಿಕೊಂಡಿರುವ ಚೆಲುವರಾಯ ಸ್ವಾಮಿ, ಈ ಹೇಳಿಕೆ ಮೂಲಕ ಎರಡೂ ಕಡೆಯವರನ್ನು ಸಮಾಧಾನ ಪಡಿಸುವ ಮೊದಲ ಹೆಜ್ಜೆ ಇಟ್ಟಿದ್ದಾರೆ. ತಮ್ಮ ಆಪ್ತ ರಾಜೇಶ್ ಎನ್ನುವವರಿಗೆ ಕ್ಲೀನ್ ಚಿಟ್ ಕೂಡಾ ಕೊಟ್ಟಿದ್ದಾರೆ. ಆದರೆ ಅವರ ಭಾಗಿಯಾಗಿದ್ದಾನೆ ಎಂದಿದ್ಧಾರೆ.
ಇನ್ನು ನಾಗಮಂಗಲದ ಗಲಭೆ ಬಗ್ಗೆ ಕಿಡಿಕಾರಿದ್ದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿದ ಚಲುವರಾಯಸ್ವಾಮಿ, ನಾಗಮಂಗಲಕ್ಕೆ ಬಂದು ಚನ್ನಪಟ್ಟಣದ ಬಗ್ಗೆ ಮಾತನಾಡಿದ್ದು ಯಾಕೆ? ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸರ್ಕಾರವೇ ಹೊಣೆ ಎಂದಿದ್ದಾರೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಗಮಂಗಲಕ್ಕೆ ಬಂದು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಿರುವುದು ಸಂತೋಷ. ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಆದರೆ, ಸಿಎಂ ಇಳಿಸಲು ಕುತಂತ್ರ ಎನ್ನುವುದು ಸರಿಯಲ್ಲ ನಾಗಮಂಗಲಕ್ಕೆ ಬಂದು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ? ಕುಮಾರಸ್ವಾಮಿ ನನ್ನಂತೆ ಸಾಮಾನ್ಯ ಮಂತ್ರಿಯಲ್ಲ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ನಾಗಮಂಗಲಕ್ಕೆ ಬಂದವರು ಜನರಿಗೆ ಏನು ಸಂದೇಶ ಕೊಡಬೇಕಿತ್ತು? ಅವರು ಕೊಟ್ಟಿದ್ದೇನು? ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸದಿರುವುದೇ ಸೂಕ್ತ ಎಂದಿದ್ದಾರೆ ಚೆಲುವರಾಯ ಸ್ವಾಮಿ. ಒಟ್ಟಿನಲ್ಲಿ ಕುಮಾರಸ್ವಾಮಿ ನಾಗಮಂಗಲ ಪ್ರವೇಶ, ಚೆಲುವರಾಯ ಸ್ವಾಮಿಗೆ ನಡುಕ ಹುಟ್ಟಿಸಿದೆ ಎಂಬುದು ಸುಳ್ಳಲ್ಲ.



