ಪರಪ್ಪನ ಅಗ್ರಹಾರ ಜೈಲು, ಎತ್ತರದ ಗೋಡೆಗಳ ಮಧ್ಯೆ ಕಟ್ಟಿರುವ ಹೊಸ ರೆಸಾರ್ಟ್ ಆಗಿದೆಯಾ..? ಅಚ್ಚರಿ ಎನಿಸಿದರೂ ಇದು ಸತ್ಯ. ಏಕೆಂದರೆ ಈ ಜೈಲಿನಲ್ಲಿ ಹಣ ಕೊಟ್ಟರೆ ಏನು ಬೇಕಾದರೂ ದೊರೆಯುತ್ತದೆ ಎನ್ನುವುದು ಪದೇ ಪದೇ ಸಾಬೀತಾಗುತ್ತಿದೆ. ರೂಲ್ಸು, ಕಾನೂನು ಎಲ್ಲವೂ ಜೈಲಿನ ಅಧಿಕಾರಿಗಳು ಹೇಳುವಂತೆ ಅತ್ಯಂತ ಕಠಿಣವಾಗಿದೆ. ಆದರೆ.. ಅದೆಲ್ಲವೂ ಹಣ ಇಲ್ಲದ ಬಡವರಿಗೆ ಮಾತ್ರ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲಿನ ನಿಯಮಾವಳಿಗಳ ಪ್ರಕಾರ ವಿಚಾರಣಾಧೀನ ಖೈದಿಯಾದ ವ್ಯಕ್ತಿ ಹೇಗಿರಬೇಕು ಎಂಬುದಕ್ಕೆ ನಿಯಮಗಳಿವೆ. ಕೆಲವು ಹಕ್ಕುಗಳು ಮತ್ತು ಕರ್ತವ್ಯಗಳು ಇವೆ. ವಿಚಾರಣಾಧೀನ ಖೈದಿಗಳ ಉಸ್ತುವಾರಿಯಾಗಿ ಸಹಾಯಕ ಜೈಲು ಅಧೀಕ್ಷಕರು ಇರುತ್ತಾರೆ. ಸಾಮಾನ್ಯ ಖೈದಿಗಳಿಗೆ ನೀಡುವಂತೆ ವಿಚಾರಣಾಧೀನ ಖೈದಿಗಳಿಗೂ ಶುದ್ಧ ನೀರು, ಆಹಾರ, ವೈದ್ಯಕೀಯ ಸೌಲಭ್ಯ ನೀಡಲಾಗುತ್ತದೆ. ಒಂದೇ ಪ್ರಕರಣದ ಆರೋಪಿಗಳು ಒಟ್ಟಿಗೆ ಇರಬಾರದು ಎಂಬ ನಿಯಮವಿದೆ. ಆದರೆ ಈ ಫೋಟೋದಲ್ಲಿ ಗಮನಿಸುವಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ ಹಾಗೂ ಮ್ಯಾನೇಜರ್ ನಾಗ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ.
ವಿಚಾರಣಾಧೀನ ಖೈದಿಗಳು ಹೇರ್ ಕಟಿಂಗ್, ಶೇವಿಂಗ್ ಮಾಡಬಾರದು. ಆದರೆ ದರ್ಶನ್ ತಲೆ ಬೋಳಿಸಿಕೊಂಡಿದ್ದಾರೆ. ಕಾನೂನು ರಕ್ಷಣೆ ಮತ್ತು ನೆರವು, ವಕೀಲರು, ಕುಟುಂಬದೊಂದಿಗೆ ಮಾತನಾಡಲು ಅವಕಾಶ ಇದೆ. ಕ್ಯಾಂಟೀನ್ ವಸ್ತುಗಳನ್ನು ಖರೀದಿ ಮಾಡಬಹುದು. ಲೇಖನ ಸಾಮಾಗ್ರಿಗಳನ್ನು ಪಡೆಯಬಹುದು. ಜೈಲಿನ ಕಾನೂನುಗಳಿಗೆ ಬದ್ಧನಾಗಿರಬೇಕು. ಅಧಿಕಾರಿಗಳು ಆದೇಶ ಪಾಲಿಸಬೇಕು. ನಿಯಮಗಳಿಂದ ನಿಷೇಧಿಸಲ್ಪಟ್ಟ ಗಾಂಜಾ ಅಥವಾ ಇತರ ಮಾದಕ ವಸ್ತುಗಳನ್ನು, ಹಣ, ಆಭರಣ ಸ್ವೀಕರಿಸುವ ಆಗಿಲ್ಲ. ಆದರೆ ಇದೆಲ್ಲವೂ ಪುಸ್ತಕದಲ್ಲಿ ಮಾತ್ರವೇ ಇದೆ.
ಈಗ ವೈರಲ್ ಆಗಿರೋ ಫೋಟೋ ಮತ್ತು ವಿಡಿಯೋ ನೋಡಿದರೆ, ಪರಪ್ಪನ ಅಗ್ರಹಾರ ಜೈಲಲ್ಲ, ರೆಸಾರ್ಟ್ ಎಂಬುದು ಸಾಬೀತಾಗುವಂತಿದೆ. ಇನ್ನು ದರ್ಶನ್ ಜೊತೆಯಲ್ಲಿರುವ ರೌಡಿಗಳ ಹಿಸ್ಟರಿಯೂ ಅಂತದ್ದೇ.
ವಿಲ್ಸನ್ ಗಾರ್ಡನ್ ನಾಗ : ವಿಲ್ಸನ್ ಗಾರ್ಡನ್ ನಾಗ ಎಂಬ ಆತ ಬೆಂಗಳೂರು ದಕ್ಷಿಣ ವಿಭಾಗದ ರೌಡಿಶೀಟರ್. ಸಿದ್ದಾಪುರ ಮಹೇಶ್ ಕೊಲೆ ಪ್ರಕರಣದಲ್ಲಿ ನಾಗ ಜೈಲುಪಾಲಾಗಿದ್ದಾನೆ. ಕಳೆದ ಆಗಸ್ಟ್ನಲ್ಲಿ ಕೋರ್ಟ್ಗೆ ವಿಲ್ಸನ್ ಗಾರ್ಡನ್ ನಾಗ ಶರಣಾಗಿದ್ದ. ಆತನ ವಿರುದ್ಧ ಕೋಕಾ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿತ್ತು. ಈತನಿಂದ ಕೊಲೆಯಾದ ಮಹೇಶ್ ಕೂಡಾ ರೌಡಿಶೀಟರ್.
ಸಿದ್ಧಾಪುರ ರೌಡಿ ಶೀಟರ್ ಮಹೇಶನ ಕೊಲೆ ಕೇಸ್ ಅಷ್ಟೇ ಅಲ್ಲ, ಚನ್ನರಾಯಪಟ್ಟಣದ ಹಿರೀಸಾವೆ ಬಳಿ ಶಾಂತಿನಗರ ಲಿಂಗ ಎಂಬುವವನ ಕೊಲೆ, ಅನ್ನಪೂರ್ಣೇಶ್ವರಿ ನಗರದಲ್ಲಿ ಜಿಮ್ ಸುಬ್ಬು ಮರ್ಡರ್, ಒಂದು ಶೂಟೌಟ್ ಕೇಸ್‌ನಲ್ಲಿ ಸೈಲೆಂಟ್ ಸುನಿಲ ಕೂಡಾ ಈತನ ಜೊತೆ ಸಹ ಆರೋಪಿ, ವೈಟ್ ಫೀಲ್ಡಿನಲ್ಲಿ ಸುಹೇಲ್ ಮರ್ಡರ್ ಕೇಸ್, ಮಡಿವಾಳದ ನಕರಾ ಬಾಬು ಮರ್ಡರ್ ಕೇಸ್, ವಿಲ್ಸನ್ ಗಾರ್ಡನ್ʻನಲ್ಲಿ ಶ್ರೀನಿವಾಸ್ ಅನ್ನೋವ್ರ ಕೊಲೆ ಪ್ರಕರಣ, ಕಾಟನ್ ಪೇಟೆ ಗುಪ್ಪನ ಮರ್ಡರ್ ಕೇಸ್, ಕಲಾಸಿಪಾಳ್ಯ ಗೇಟ್ ಗಣೇಶನ ಕೊಲೆ ಪ್ರಕರಣದಲ್ಲಿ ಈತ ಆರೋಪಿ. ಒಟ್ಟು ೮ ಕೊಲೆ ಪ್ರಕರಣ ಸೇರಿದಂತೆ ದರೋಡೆ, ಹಲ್ಲೆ, ಹಾಫ್ ಮರ್ಡರ್ ಕೇಸುಗಳು ಸೇರಿದಂತೆ ಮೈತುಂಬಾ ಕೇಸುಗಳೇ ಇವೆ. ಒಟ್ಟು ೨೩ ಕೇಸುಗಳು.
ರೌಡಿ ಧರ್ಮ : ದರ್ಶನ್ ಜೈಲಿನಲ್ಲಿದ್ದುಕೊಂಡೇ ಹೊರಗಿನವರ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದ್ಯಲ್ಲ, ಆ ವಿಡಿಯೋದಲ್ಲಿರುವ ವ್ಯಕ್ತಿಯೇ ಧರ್ಮ. ಬಾಣಸವಾಡಿ ರೌಡಿಶೀಟರ್.
ಬೆಂಗಳೂರಿನ ಬಾಣಸವಾಡಿಯಲ್ಲಿ ಮೇ 7ರಂದು ನಡೆದ ರೌಡಿಶೀಟರ್ ಕಾರ್ತಿಕೇಯನ್ ಎಂಬುವವನ ಕೊಲೆ ಪ್ರಕರಣದಲ್ಲಿ ಈ ರೌಡಿಶೀಟರ್ ಧರ್ಮ ಕೂಡ ಭಾಗಿಯಾಗಿದ್ದ ಆರೋಪ ಇದೆ. ದರ್ಶನ್ ಬಂದಾಗ ಜೈಲಿನಲ್ಲಿಯೇ ಇದ್ದ ಧರ್ಮ ದರ್ಶನ್ ಅಭಿಮಾನಿಯೂ ಹೌದು.
ಕುಳ್ಳ ಸೀನ : ದರ್ಶನ್ ಚೇರ್‌ನಲ್ಲಿ ಧಮ್ ಹೊಡೀತಾ ಕುಳಿತಿದ್ದರೆ, ಇನ್ನು ಮೂವರು ಚೇರ್‌ನಲ್ಲಿ ಅಕ್ಕ ಪಕ್ಕ ಎದುರುಗಡೆ ಇದ್ದಾರೆ. ಅವರಲ್ಲಿ ಒಬ್ಬ ವಿಲ್ಸನ್ ಗಾರ್ಡನ್ ನಾಗ, ಇನ್ನೊಬ್ಬ ದರ್ಶನ್ ಮ್ಯಾನೇಜರ್ ಆಗಿದ್ದ ಆರೋಪಿ ನಂ. ೧೧ ನಾಗರಾಜ್. ಮೂರನೆಯವನೇ ಮತ್ತೊಬ್ಬ ನಟೋರಿಯಸ್ ರೌಡಿ, ಹೆಸರು ಕುಳ್ಳ ಸೀನ.
ಕನಕಪುರ ರೋಡ್‌ನವನಾಗಿರೋ ಈ ಕುಳ್ಳ ಸೀನ, ದೀರ್ಘ ಕಾಲದಿಂದ ಜೈಲಲ್ಲಿ ಇದ್ದಾನೆ. ಜೈಲಲ್ಲೇ ಇರುವ ಈತ ತನ್ನದೇ ನೆಟ್ ವರ್ಕ್ ಸೃಷ್ಟಿಸಿಕೊಂಡಿದ್ದಾನೆ. ಯಾವುದೇ ನಟೋರಿಯಸ್ ರೌಡಿಗಳು ಜೈಲಿಗೆ ಎಂಟ್ರಿಯಾದ ತಕ್ಷಣವೇ ಈ ಕುಳ್ಳ ಸೀನನ ಸಂಪರ್ಕ ಮಾಡ್ತಾರಂತೆ. ಇನ್ನೊಂದ್ ವಿಚಾರ ಅಂದ್ರೆ, ದರ್ಶನ್‌ಗೂ ಈತನಿಗೂ ಹಳೇ ಪರಿಚಯ ಅನ್ನೋದು.
ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲು ಅನ್ನೋದು ರೌಡಿಗಳಿಗೆ, ದುಡ್ಡಿದ್ದವರಿಗೆ ರಿಲ್ಯಾಕ್ಸ್ ಮಾಡೋಕೆ ಇರೋ ರೆಸಾರ್ಟ್ ಅನ್ನೋದು ಪದೇ ಪದೇ ಸಾಬೀತಾಗುತ್ತಿದೆ. ಜೈಲಿನಲ್ಲಿ ದರ್ಶನ್ ನೋಡಿಕೊಳ್ಳುವುದ್ರಿಂದ ರೌಡಿಗಳಿಗೆ ಏನ್ ಲಾಭ..? ರೌಡಿಗಳಿಗೆ ಲಾಭಕ್ಕಿಂತ ಹವಾ ಮುಖ್ಯ. ಜೈಲಿನಲ್ಲಿದ್ದಾಗ ದರ್ಶನ್ ನೋಡ್ಕೊಂಡಿದ್ದು ಇಂತಾ ಹೇಳಿದ್ರೆ ಬೆಂಗಳೂರಲ್ಲಿ ಆತನ ಹವಾ ಜೋರಾಗುತ್ತೆ. ಕಳೆದ ಬಾರಿ ಸೈಕಲ್ ರವಿ ನೋಡ್ಕೊಂಡಿದ್ದ. ಈಗ ವಿಲ್ಸನ್ ಗಾರ್ಡನ್ ನಾಗ ಮತ್ತು ಕುಳ್ಳ ಸೀನ.



