ನಾಡಪ್ರಭು ಕೆಂಪೇಗೌಡ ಸಿನಿಮಾ ಆಗುತ್ತಿದೆ. ಚಿತ್ರ ಸೆಟ್ಟೇರುವ ಮೊದಲೇ ಉತ್ಸಾಹ ಮೂಡಿಸುತ್ತಿದೆ. ಇದೀಗ ಕೆಂಪೇಗೌಡರ ರೋಲ್ʻಗೆ ರಿಯಲ್ ಸ್ಟಾರ್ ಉಪೇಂದ್ರ ಅವರ ಹೆಸರು ಕೇಳಿ ಬರುತ್ತಿದೆ. ಜೂನ್ 27ಕ್ಕೆ ಮುಹೂರ್ತವಾಗುತ್ತದೆ. ಅದೇ ದಿನ ಹೀರೋ ಯಾರು, ಕೆಂಪೇಗೌಡ ಪಾತ್ರಧಾರಿ ಯಾರು ಅನ್ನೋದು ಕೂಡಾ ಗೊತ್ತಾಗಲಿದೆ. ಆದರೆ.. ಅದಕ್ಕೆ ಮುನ್ನ ಹಲವು ಹೆಸರುಗಳು ತೇಲಿ ಬರುತ್ತಿವೆ.
ಚಿತ್ರದ ನಿರ್ಮಾಪಕರಾಗಿರುವ ಡಾ.ಕಿರಣ್ ತೋಟಂಬೈಲು ಅವರ ಪ್ರಕಾರ ಉಪೇಂದ್ರ ಅವರ ಹೆಸರೂ ಇದೆ. ಉಪೇಂದ್ರ ಅವರನ್ನು ಅಪ್ರೋಚ್ ಮಾಡಲಾಗುತ್ತಿದ್ದು, ಅವರು ಭಾರತಕ್ಕೆ ವಾಪಸ್ ಆದ ನಂತರ ಮಾತನಾಡಲಿದ್ದಾರಂತೆ. ಡಾಲಿ ಧನಂಜಯ ಅವರ ಹೆಸರೂ ಕೇಳಿ ಬರುತ್ತಿದೆ.
ಚಿತ್ರವನ್ನು ಮೊದಲು ಸಣ್ಣ ಬಜೆಟ್ಟಿನಲ್ಲಿಯೇ ಮಾಡೋಣ ಅಂದ್ಕೊಂಡಿದ್ದೆವು. ಆದರೆ, ಒಳ್ಳೆಯ ಫಂಡಿಂಗ್ ಆಯ್ತು. ಹೀಗಾಗಿ ದೊಡ್ಡ ಮಟ್ಟದಲ್ಲಿಯೇ ಮಾಡುತ್ತಿದ್ದೇವೆ. ಕನ್ನಡದ ಟಾಪ್ ೫ ಹೀರೋಗಳಲ್ಲಿ ಒಬ್ಬರು ಹೀರೋ ಆಗುವುದು ಫಿಕ್ಸ್ ಎಂದಿದ್ದಾರೆ ಡಾ.ಕಿರಣ್. ನಾಯಕಿಯಾಗಿ ಅಶಿಕಾ ರಂಗನಾಥ್ ಫಿಕ್ಸ್ ಆಗಿದ್ಧಾರೆ. ಹಿರಿಯ ನಟ ಭಾರತಿ ವಿಷ್ಣುವರ್ಧನ್, ವಸಿಷ್ಠ ಸಿಂಹ ಮತ್ತು ಶ್ರೀನಗರ ಕಿಟ್ಟಿ ಪಾತ್ರಗಳೂ ಓಕೆ ಆಗಿವೆ. ಕನ್ನಡ-ಇಂಗ್ಲಿಷ್ʻನಲ್ಲಿ ಸಿದ್ಧವಾಗುತ್ತಿದ್ದು, ಇಂಗ್ಲಿಷಿನಲ್ಲಿ ದಿ ಪಯೋನಿಯರ್ ಆಫ್ ಬೆಂಗಳೂರು ಎಂಬ ಟೈಟಲ್ ಫಿಕ್ಸ್ ಆಗಿದೆ. ಚಿತ್ರಕ್ಕೆ ಡೈರೆಕ್ಟರ್ ಟಿ.ಎಸ್.ನಾಗಾಭರಣ.
ನಟ ಉಪೇಂದ್ರರಿಗೂ ಇದು ಮೊದಲ ಐತಿಹಾಸಿಕ ಸಿನಿಮಾ. ಹಾಗೆ ನೋಡಿದರೆ.. ಅಭಿನಯಕ್ಕೆ ಪ್ರಾಧಾನ್ಯತೆ ಇರುವ ಚಿತ್ರಗಳಲ್ಲಿ ಉಪೇಂದ್ರ ನಟಿಸಿಲ್ಲ. ರಕ್ತಕಣ್ಣೀರು ಸೇರಿದಂತೆ ಕೆಲವು ಚಿತ್ರಗಳಿವೆಯಾದರೂ.. ಅವೆಲ್ಲರೂ ಉಪ್ಪಿ ಸ್ಟೈಲ್ ಚಿತ್ರಗಳೇ. ಉಪ್ಪಿ ಮಾಡೆಲ್ ಪಾತ್ರಗಳೇ.
ಉಪೇಂದ್ರ ಅವರೂ ಅಷ್ಟೆ, ದೊಡ್ಡ ಮಟ್ಟದ ಪ್ರಯೋಗಗಳಿಗೆ ನಟನಾಗಿ ತಮ್ಮನ್ನು ಪ್ರಯೋಗಕ್ಕೆ ಒಡ್ಡಿಕೊಂಡಿಲ್ಲ. ಅವರ ಪ್ರತಿ ಪಾತ್ರಗಳ ಆಯ್ಕೆಗಳಲ್ಲೂ ಎ ಮತ್ತು ಉಪೇಂದ್ರ ಪಾತ್ರಗಳ ಶೇಡ್ ಇರುತ್ತದೆ. ಈಗ ಕೆಂಪೇಗೌಡ ಪಾತ್ರಕ್ಕೆ ಅದು ಹೇಗೆ ಒಗ್ಗಿಕೊಳ್ಳುತ್ತಾರೆ ಎಂದು ನೋಡಬೇಕು.
ಇನ್ನು ಟಿಎಸ್ ನಾಗಾಭರಣ ಅವರೂ ಅಷ್ಟೆ. ಐತಿಹಾಸಿಕ ಚಿತ್ರಗಳು ಹೊಸದೇನಲ್ಲವಾದರೂ.. ಗೆದ್ದಿಲ್ಲ.
ಅಶಿಕಾ ರಂಗನಾಥ್ ಅವರು ನಾಯಕಿ ಎನ್ನಲಾಗಿದೆ. ಪಾತ್ರದ ಹೆಸರೇನು..? ಗೊತ್ತಿಲ್ಲ. ಇನ್ನು ಭಾರತಿ ವಿಷ್ಣುವರ್ಧನ್ ಕೆಂಪೇಗೌಡರ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ಶ್ರೀನಗರ ಕಿಟ್ಟಿ ವಸಿಷ್ಠ ಸಿಂಹ ಅವರ ಪಾತ್ರ ಯಾವುದು ಎಂದು ಗೊತ್ತಿಲ್ಲ. ಇಬ್ಬರಲ್ಲಿ ಒಬ್ಬರು ಶ್ರೀಕೃಷ್ಣ ದೇವರಾಯನ ಪಾತ್ರ ಮಾಡಲಿದ್ದಾರೆ ಅನ್ನೋದು ಪಕ್ಕಾ.
ರೆಗ್ಯುಲರ್ ಪಾತ್ರಗಳಿಗೂ ಐತಿಹಾಸಿಕ ಪಾತ್ರಗಳಿಗೂ ವ್ಯತ್ಯಾಸ ಇರುತ್ತದೆ. ಬಾಡಿ ಲಾಂಗ್ವೇಜ್, ಸಂಭಾಷಣೆ ಹೇಳುವ ಶೈಲಿ ಎಲ್ಲವನ್ನೂ ಅದಕ್ಕೆ ತಕ್ಕಂತೆ ಒಗ್ಗಿಸಿಕೊಳ್ಳಬೇಕು. ಹಾಗೆ ನೋಡಿದರೆ ಕನ್ನಡದಲ್ಲಿ ಐತಿಹಾಸಿಕ ಪಾತ್ರಗಳನ್ನು ಡಾ.ರಾಜ್ ಅವರಷ್ಟು ಅದ್ಭುತವಾಗಿ ನಿರ್ವಹಿಸಿದ ಇನ್ನೊಬ್ಬ ನಟ ಸಿಕ್ಕುವುದಿಲ್ಲ. ಉಪೇಂದ್ರ ಅವರು ಕೆಂಪೇಗೌಡ ಪಾತ್ರದ ಚಾಲೆಂಜ್ ಸ್ವೀಕಾರ ಮಾಡ್ತಾರಾ..?



