ನಾನು ಹಿಂದೂ. ನನ್ನ ಗಂಡ ಮುಸ್ಲಿಂ. ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ. ಹಾಗಂತ ನಮಗೆ ಹುಟ್ಟುವ ಮಕ್ಕಳು ಐಸಿಸ್ ಅಲ್ಲ. ಉಗ್ರರಾಗುವುದಿಲ್ಲ. ಎಲ್ಲ ಮುಸ್ಲಿಮರೂ ಐಸಿಸ್ ಅಲ್ಲ. ಹೀಗೆಂದು ಒಂದೇ ಉಸುರಿನಲ್ಲಿ ಮಾತನಾಡಿದ್ದಾರೆ ನಟಿ ಪ್ರಿಯಾಮಣಿ.
ನಾನು ಮದುವೆಯಾಗುವಾಗ ಕೂಡ ಟ್ರೋಲ್ಗೆ ಒಳಗಾಗಿದ್ದೇನೆ. ನೀನು ಯಾಕೆ ನಿನ್ನ ಧರ್ಮದ ಹೊರಗಿನವರನ್ನು ಮದುವೆಯಾಗುತ್ತೀಯಾ? ಮದುವೆಯಾಗಬೇಡ, ಮದುವೆಯಾಗಿ ಮಕ್ಕಳು ಹುಟ್ಟಿದರೆ ಅವರಿಗೆ ಜಿಹಾದ್ ಪಟ್ಟ ಸಿಗುತ್ತದೆ ಅಂತ ಕೆಲವರು ಹೇಳಿದ್ದರು. ನಾನು ಪ್ರೀತಿ ಮಾಡಿದವರನ್ನು ಮದುವೆಯಾಗುತ್ತೇನೆ. ನಾನು ಪ್ರೀತಿಸಿದ ಹುಡುಗ ಬೇರೆ ಧರ್ಮದವನು, ಬೇರೆ ಜಾತಿಯವನಾದರೆ ಏನು ತಪ್ಪು?
ಇದು ನಟಿ ಪ್ರಿಯಾಮಣಿ ಕೇಳುತ್ತಿರುವ ಪ್ರಶ್ನೆ. ನನ್ನ ಪತಿ ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ ಏನು? ಇದರಲ್ಲಿ ತಪ್ಪೇನಿದೆ? ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ. ಸುಮ್ಮನೇ ಮುಸ್ಲಿಂರನ್ನು ಮದ್ವೆಯಾದ ಮಾತ್ರಕ್ಕೆ ಹಾಗೆ ಹೀಗೆ ಹೇಳುವುದನ್ನು ನಿಲ್ಲಿಸಿ. ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ ಇದು ನನ್ನ ಜೀವನ. ನನ್ನ ಇಷ್ಟ ಎಂದಿದ್ದಾರೆ ಪ್ರಿಯಾಮಣಿ.
ಪ್ರಿಯಾಮಣಿ ಅವರು ಮುಸ್ತಫ್ ರಾಜಾ ಅವರನ್ನು ಮದುವೆಯಾಗಿದ್ದಾರೆ. ಮುಸ್ತಫಾ ಮುಸ್ಲಿಂ. ಹೀಗಾಗಿಯೇ ಟ್ರೋಲಿಗರು ಪ್ರಿಯಾಮಣಿ ಬೆನ್ನು ಹತ್ತಿದ್ದಾರೆ. ಮುಸ್ತಫಾ ಹೆಚ್ಚಾಗಿ ಅಮೆರಿಕದಲ್ಲಿದ್ದರೆ, ಪ್ರಿಯಾಮಣಿ ಇಂಡಿಯಾದಲ್ಲಿರುತ್ತಾರೆ. ನಾವು ದೂರವಿದ್ದರೂ ಪ್ರೀತಿಗೇನೂ ಕಡಿಮೆ ಇಲ್ಲ. ಪ್ರತಿದಿನ ಮಾತನಾಡಿಕೊಳ್ಳುತ್ತೇವೆ. ಇಬ್ಬರೂ ಬ್ಯುಸಿ ಇದ್ದಾಗ ಹಾಯ್, ಹಲೋದಲ್ಲೇ ಮಾತುಕತೆ ಮುಗಿದುಹೋಗುತ್ತದೆ. ಆದರೆ ಪ್ರೀತಿ ಮಾತ್ರ ಹಾಗೆಯೇ ಇದೆ ಎಂದಿದ್ದಾರೆ ಪ್ರಿಯಾಮಣಿ. ಬಾಡಿ ಶೇಮಿಂಗ್ ಬಗ್ಗೆ ಆಕ್ರೋಶ ಹೊರಹಾಕಿದ್ದ ಪ್ರಿಯಾಮಣಿ, ಇದೀಗ ನಿಮಗೆ ಹುಟ್ಟುವ ಮಕ್ಕಳು ಐಸಿಸ್ ಆಗುತ್ತಾರೆ ಎಂಬ ಟ್ರೋಲಿಗೂ ಕೆಂಡವಾಗಿದ್ದಾರೆ.



